ಬೆಳಗಾವಿ: ‘ರಮೇಶ ಕತ್ತಿ ಸ್ವಇಚ್ಛೆಯಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ’ ಎಂದು ಬೆಮುಲ್ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2020ರಲ್ಲಿ ಎಲ್ಲರೂ ಸೇರಿ ರಮೇಶ ಕತ್ತಿ ಅವರನ್ನು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೆವು. ಅಧಿಕಾರವಧಿ ಮುಗಿಯಲು ಇನ್ನೊಂದು ವರ್ಷ ಇತ್ತು. ಸ್ವಲ್ಪ ಬಿನ್ನಾಭಿಪ್ರಾಯ ಇದ್ದವು. ಎಲ್ಲ ನಿರ್ದೇಶಕರು ಬಂದು, ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಮನವಿ ಮಾಡಿದರು. ಹಾಗಾಗಿ ನಾವೂ ಕತ್ತಿಯವರ ಬಳಿ ಮನವಿ ಮಾಡಿದೆವು. ಹಿರಿಯರಾದ ಅವರು ಸ್ವ-ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
‘ಅಕ್ಟೋಬರ್ ಅಂತ್ಯದೊಳಗೆ, ಡಿಸಿಸಿ ಬ್ಯಾಂಕಿಗೆ ಹೊಸ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತೇವೆ. ನಾಯಕರಾದ ಪ್ರಭಾಕರ ಕೋರೆ, ಸತೀಶ ಜಾರಕಿಹೊಳಿ, ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ ಮತ್ತು ರಮೇಶ ಕತ್ತಿ ನೇತೃತ್ವದಲ್ಲೇ ಆ ಪ್ರಕ್ರಿಯೆ ನಡೆಯಲಿದೆ’ ಎಂದರು.
‘ರಮೇಶ ಕತ್ತಿ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್ ನಷ್ಟ ಅನುಭವಿಸಿಲ್ಲ. ಬದಲಿಗೆ ₹30 ಕೋಟಿ ಲಾಭವಾಗಿದೆ. ಬ್ಯಾಂಕ್, ರೈತರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಹೊಸ ಅಧ್ಯಕ್ಷರ ಆಯ್ಕೆಯಾಗಲಿದೆ’ ಎಂದು ತಿಳಿಸಿದರು.
‘ರಮೇಶ ಕತ್ತಿ ಅವರು ಈಗ ಏಕೆ ಬಂದಿಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಬಾಲಚಂದ್ರ, ‘ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಅವರು ಹಾಜರಿರುತ್ತಾರೆ’ ಎಂದರು.
‘ಸದಸ್ಯತ್ವ ಅಭಿಯಾನಕ್ಕಾಗಿ ಗುರುವಾರ ಸಭೆ ನಡೆಸಿದ್ದೆವು. ಅದಕ್ಕೂ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ. ಬ್ಯಾಂಕ್ ಸರಿಯಾಗಿ ನಡೆಸಿಲ್ಲ ಎಂದು ಅವರನ್ನು ಬದಲಿಸಿಲ್ಲ. ಭಿನ್ನಾಭಿಪ್ರಾಯದ ಕಾರಣಕ್ಕೆ ಅವರು ರಾಜೀನಾಮೆ ಕೊಟ್ಟಿದ್ದಾರೆ ಎನ್ನುವುದು ಸುಳ್ಳು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.