ಬೆಳಗಾವಿ: ‘ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯನ್ನು ಬೆಳಗಾವಿಯಲ್ಲಿ ನಿಷೇಧಿಸುವಂತೆ ಮುಖ್ಯಮಂತ್ರಿಯನ್ನು ಆಗ್ರಹಿಸುವೆ’ ಎಂದು ಜವಳಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಎಂಇಎಸ್‌ಗೆ ಈಗ ಅಸ್ತಿತ್ವವೇ ಉಳಿದಿಲ್ಲ. ಆ ಸಂಘಟನೆಯ ಬೆಂಬಲಿತರು ಎಲ್ಲ ಕಡೆಯೂ ಸೋಲುತ್ತಿದ್ದಾರೆ’ ಎಂದು ಟೀಕಿಸಿದರು.
ಗಡಿ ವಿಚಾರವಾಗಿ ಮಹಾರಾಷ್ಟ್ರದಲ್ಲಿ ಪುಸ್ತಕ ಬಿಡುಗಡೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಅಲ್ಲಿಯವರಿಗೆ ಒಳ್ಳೆಯದನ್ನು ಬರೆಯಲು ಬರುವುದಿಲ್ಲ. ಹೀಗಾಗಿ, ಇಂತಹ ಕೆಲಸ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮಾಡಲು ಕೆಲಸವೇ ಇಲ್ಲ. ಖಾಲಿ ಇರುವ ಅವರು ಯಾವಾಗಲೂ ಗಡಿ ವಿವಾದದ ಬಗ್ಗೆ ಮಾತನಾಡುತ್ತಿರುತ್ತಾರೆ. ಆಗದ ವಿಷಯಗಳ ಬಗ್ಗೆಯೇ ಅವರು ಹೆಚ್ಚೆಚ್ಚು ಮಾತನಾಡುತ್ತಾರೆ. ಅವರ ಹೇಳಿಕೆ ಬಗ್ಗೆ ನಾವು ತಲೆಕೆಡಿಸಿಕೊಳ್ಳಬೇಕಿಲ್ಲ. ಬೆಳಗಾವಿ ಎಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ’ ಎಂದರು.
‘ಗಡಿ ವಿಷಯ ಮುಗಿದು ಹೋದ ಅಧ್ಯಾಯ. ಅದರ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ಅಭಿವೃದ್ಧಿ ಮರೆತಿರುವ ಮಹಾರಾಷ್ಟ್ರ ಸರ್ಕಾರ ರಾಜಕಾರಣಕ್ಕಾಗಿ ಗಡಿ ವಿವಾದವನ್ನು ಕೆದಕುತ್ತಿದೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.