ಬೆಳಗಾವಿ: ‘ಜೀವ ವಿರೋಧಿ ನಿಲುವುಗಳನ್ನು ಗಟ್ಟಿ ಸಿದ್ಧಾಂತದೊಂದಿಗೆ ಪ್ರತಿರೋಧಿಸುವ ಬಂಡಾಯ ಪರಂಪರೆಯು ಬುದ್ಧನ ಕಾಲದಿಂದಲೂ ಇದೆ. ಕೋವಿಡ್ ಸ್ಥಿತಿಯಲ್ಲೂ ಕರ್ನಾಟಕ ಬಂಡಾಯ ಸಾಹಿತ್ಯ ಸಂಘಟನೆಯು ತನ್ನ ಸಿದ್ಧಾಂತ ಪ್ರತಿಪಾದಿಸುವ ವಿಚಾರಗಳನ್ನು ಆನ್‌ಲೈನ್‌ನಲ್ಲೇ ಹೆಚ್ಚು ಜನರಿಗೆ ತಲುಪಿಸಿದೆ’ ಎಂದು ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.
ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆಯು ಇಲ್ಲಿನ ಮಾನವ ಬಂಧುತ್ವ ವೇದಿಕೆಯ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಪದಾಧಿಕಾರಿಗಳ ಸಭೆ ಹಾಗೂ ಸತ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ನಮ್ಮ ನಡುವೆ ಹುಟ್ಟಿಕೊಳ್ಳುವ ಜನವಿರೋಧಿ ನಿಲುವುಗಳನ್ನು ಬಂಡಾಯ ಸಾಹಿತ್ಯ ಸಂಘಟನೆ ತನ್ನ ಹೇಳಿಕೆಗಳ ಮೂಲಕ ನಿರಂತರವಾಗಿ ಪ್ರತಿಭಟಿಸುತ್ತಾ ಬಂದಿದೆ. ಇಂತಹ ಬಂಡಾಯ ಸಾಹಿತ್ಯದ ಕೃಷಿ ಜಿಲ್ಲೆಯಲ್ಲಿ ಹೆಚ್ಚಾಗಿ ಯುವಕರಿಂದ ಸೃಷ್ಟಿಯಾಗುತ್ತಿದ್ದು ಅದನ್ನು ಪ್ರೋತ್ಸಾಹಿಸಿ ಮುನ್ನಡೆಸುವ ಕಾರ್ಯವನ್ನು ಬಂಡಾಯ ಸಾಹಿತ್ಯ ಸಂಘಟನೆ ಇನ್ನಷ್ಟು ತೀವ್ರಗೊಳಿಸಲು ಯುವಕರಿಗೆ ಸಾರಥ್ಯ ವಹಿಸಿಕೊಡುತ್ತಿದೆ’ ಎಂದರು.
‘ಯುವ ಬರಹಗಾರರು ಸೈದ್ಧಾಂತಿಕ ವಿರೋಧವನ್ನು ದಾಖಲಿಸುವ ಜೊತೆಗೆ ಅಂತಹ ವ್ಯಕ್ತಿ ಮತ್ತು ಸಂಘಟನೆಗಳ ಜೊತೆಗೂ ಅಂತರ ಕಾಯ್ದುಕೊಂಡು ಸ್ವಂತಿಕೆ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪಿಎಚ್‌ಡಿ ಪದವಿ ಪಡೆದ ಬಂಡಾಯ ಸದಸ್ಯ ಬಳಗದ ಡಾ.ಸುನೀತಾ ಮಿರಾಸಿ ಹಾಗೂ ಡಾ.ಮಹಾದೇವ ಪೋತರಾಜ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಮತ್ತು ವಿವಿಧ ತಾಲ್ಲೂಕು ಘಟಕದ ನೂತನ ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ಅಡಿವೆಪ್ಪ ಇಟಗಿ, ನಿಂಗಪ್ಪ ಸಂಗ್ರೆಜಿಕೊಪ್ಪ, ಗೌತಮ್ ಮಾಳಗೆ, ಅರ್ಜುನ್ ನಿಡಗುಂದೆ ಸಂವಾದದಲ್ಲಿ ಪ್ರತಿಕ್ರಿಯಿಸಿದರು.
ಪ್ರಕಾಶ್ ಕುರಗುಂದ, ಪಾಂಡುರಂಗ ಗಾಣಿಗೇರ, ರಾಜು ಸನದಿ, ಶಂಕರ್ ಕೊಡತೆ, ಸುಭಾಷ್ ಶಿರಗಾಂವ್ಕರ, ಪ್ರಕಾಶ್ ಕುರುಪಿ ಇದ್ದರು.
ಮಂಜುನಾಥ ಪಾಟೀಲ, ದೇಮಣ್ಣ ಸೊಗಲದ, ಸಂತೋಷ ನಾಯಕ, ಸುಧಾ ಕೊಟಬಾಗಿ, ಲಕ್ಷ್ಮಿ ಹರಿಜನ ಕ್ರಾಂತಿ ಗೀತೆಗಳನ್ನು ಹಾಡಿದರು. ಶಂಕರ ಬಾಗೇವಾಡಿ ಸ್ವಾಗತಿಸಿದರು. ಕವಿ ಸಿದ್ದರಾಮ ತಳವಾರ ಪ್ರಾಸ್ತಾವಿಕ ಮಾತನಾಡಿದರು. ನೀಲಕಂಠ ಭೂಮಣ್ಣವರ ನಿರೂಪಿಸಿದರು. ಎನ್. ಚಂದ್ರಶೇಖರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.