ADVERTISEMENT

ಸಕ್ಕರೆ ಕಾರ್ಖಾನೆಗಳಿಂದ ₹50 ಲಕ್ಷ ಕೇಳುತ್ತಿರುವ ಸಚಿವ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 13:47 IST
Last Updated 12 ಏಪ್ರಿಲ್ 2024, 13:47 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಅಥಣಿ : ‘ಎಲ್ಲ ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಅಳವಡಿಸಿ ರೈತರಿಗೆ ನ್ಯಾಯ ಒದಗಿಸುವುದಾಗಿ ಹೇಳಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು, ಈಗ ಪ್ರತಿ ಕಾರ್ಖಾನೆಯಿಂದ ₹50 ಲಕ್ಷ ಹಣ ಕೇಳುತ್ತಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ಅಥಣಿಯಲ್ಲಿ ಗುರುವಾರ ರಾತ್ರಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ತೂಕದ ಯಂತ್ರದ ಬಗ್ಗೆ ಸಚಿವರು ವಿಧಾನಸಭೆಯಲ್ಲೇ ಹೇಳಿದ್ದರು. ಆದರೆ, ಈಗ ಅವರ ಪುತ್ರಿ ಚುನಾವಣೆಗೆ ನಿಂತಿರುವ ಕಾರಣ  ಮಾತು ಬದಲಿಸಿ, ಕಾರ್ಖಾನೆಗಳಿಂದ ₹50 ಲಕ್ಷ ವಸೂಲಿ ಮಾಡುತ್ತಿದ್ದಾರೆ. ಇದಕ್ಕಾಗಿ ನೇಮಕಗೊಂಡ ವ್ಯಕ್ತಿ ಕೇಳಿದಾಗ, ನಾನು ಹಣ ಕೊಡಲಿಲ್ಲ. ನನ್ನ ಕಾರ್ಖಾನೆ ಮುಂದೆ 10 ಯಂತ್ರಗಳನ್ನು ಹಾಕಲಿ ಹೇಳಿದೆ’ ಎಂದರು.

‘ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತರು ಯಾರೂ ಇಲ್ಲವೇ? ಎಲ್ಲವನ್ನೂ ಸತೀಶ ಜಾರಕಿಹೊಳಿ ಕುಟುಂಬಕ್ಕೆ ಮೀಸಲು ಇಟ್ಟಿದ್ದೀರಾ? ಸಾಹುಕಾರರ ಮನೆ ಮುಂದೆ ಹೋಗಿ ಕಾಲಿಗೆ ಬೀಳುತ್ತೀರಿ. ಅವರ ಮನೆಯ ತೊಟ್ಟಿಲಲ್ಲಿ ಇರುವ ಕೂಸುಗಳ ಕಾಲುಗಳಿಗೂ ಬೀಳುತ್ತೀರಿ. ನಿಮಗೆ ಸ್ವಾಭಿಮಾನ ಇಲ್ಲವೇ’ ಎಂದು ಯತ್ನಾಳ ಪ್ರಶ್ನಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.