ADVERTISEMENT

ಬಜೆಟ್‌: ವಚನ ವಿಶ್ವವಿದ್ಯಾಲಯ ಘೋಷಣೆಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 11:33 IST
Last Updated 15 ಫೆಬ್ರುವರಿ 2024, 11:33 IST
<div class="paragraphs"><p>ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ</p></div>

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ

   

ಬೆಳಗಾವಿ: ‘ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ಘೋಷಿಸಬೇಕು’ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಚನ ವಿಶ್ವವಿದ್ಯಾಲಯ ಸ್ಥಾ‍‍ಪಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದಲೂ ಇದೆ. ಬಸವಣ್ಣನವರು ಐಕ್ಯವಾಗಿರುವ ಕೂಡಲಸಂಗಮ ಇದಕ್ಕೆ ಸೂಕ್ತ ಸ್ಥಳ. ಲಿಂಗಾಯತ ಧರ್ಮ ಸ್ಥಾಪನೆಯಾಗಿದ್ದು ಮತ್ತು ಇಷ್ಟಲಿಂಗ ಸಂಶೋಧನೆ ಮಾಡಿದ್ದು ಇಲ್ಲಿಯೇ. ಭೌಗೋಳಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಈಗಾಗಲೇ ಅಲ್ಲಿ ಅಂತರರಾಷ್ಟ್ರೀಯ ಮಟ್ಟದ ಗ್ರಂಥಾಲಯವಿದೆ. ವಿವಿಧೆಡೆಯಿಂದ ಬರುವ ಪ್ರವಾಸಿಗರಿಗಾಗಿ ವಸತಿಗಾಗಿ ಪ್ರವಾಸಿ ಮಂದಿರವಿದೆ. ಹಾಗಾಗಿ ಸರ್ಕಾರ ಇದೇ ಬಜೆಟ್‌ನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಫೆ. 28 ಹಾಗೂ 29ರಂದು ಬೈಲಹೊಂಗಲ ತಾಲ್ಲೂಕಿನ ಬೆಳವಡಿಯಲ್ಲಿ ಮಲ್ಲಮ್ಮನ ಉತ್ಸವ ನಡೆಯಲಿದೆ. ಆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಬೇಕು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಮಾದರಿಯಲ್ಲಿ ಬೆಳವಡಿ ಮಲ್ಲಮ್ಮ ಪ್ರಾಧಿಕಾರವನ್ನೂ ರಚಿಸುವುದಾಗಿ ಘೋಷಿಸಬೇಕು’ ಎಂದೂ ಒತ್ತಾಯಿಸಿದರು.

ಆತುರದ ನಿರ್ಧಾರ ಬೇಡ:

‘ಬೆಳಗಾವಿ ಜಿಲ್ಲೆಯ ಒಂದು ಕಲ್ಲು ಎತ್ತಿ ಇಡಬೇಕಾದರೂ ನೂರು ಬಾರಿ ವಿಚಾರ ಮಾಡಬೇಕು. ಹಾಗಾಗಿ ಜಿಲ್ಲಾ ವಿಭಜನೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತುರದ ನಿರ್ಧಾರ ತೆಗೆದುಕೊಳ್ಳಬಾರದು’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘ಜಿಲ್ಲೆ ವಿಭಜನೆ ಭಾವನಾತ್ಮಕ ವಿಷಯ. ಈ ಜಿಲ್ಲೆ ಅಖಂಡವಾಗಿರಬೇಕು ಎಂಬುದು ಗಡಿ ಕನ್ನಡಿಗರ ಭಾವನೆ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಮೂರು ಭಾಗ ಆಗಬೇಕೆಂಬ ಜನಾಭಿಪ್ರಾಯವೂ ಇದೆ. ಹಾಗಾಗಿ ಕನ್ನಡಿಗರ ಭಾವನೆ ಗಮನದಲ್ಲಿ ಇಟ್ಟುಕೊಂಡು ಹೆಜ್ಜೆ ಇಡಬೇಕು’ ಎಂದರು.

‘ಬೆಳಗಾವಿ ವಿಷಯದಲ್ಲಿ ಯಾವುದೋ ಶಾಸಕ ಅಥವಾ ಒಬ್ಬ ಸಚಿವರ ಒತ್ತಡಕ್ಕೆ ಮಣಿದು ತೀರ್ಮಾನಕ್ಕೆ ಬರಬಾರದು. ಸರ್ವರ ಸಲಹೆ ಪಡೆದು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನೂ ಸಹ ಬದ್ಧ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.