ಬೆಳಗಾವಿ: ‘ಕರ್ಮ, ಅಕರ್ಮ ಮತ್ತು ವಿಕರ್ಮದ ಬಗ್ಗೆ ನಾವು ಸದಾ ಜಾಗೃತರಾಗಬೇಕು. ಯಾವ ಕರ್ಮ ಮಾಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು’ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು.
ಇಲ್ಲಿನ ಅಕಾಡೆಮಿ ಆಫ್ ಕಂಪೇರೆಟಿವ್ ಫಿಲಾಸಫಿ ಆ್ಯಂಡ್ ರಿಲೀಜನ್ (ಎಸಿಪಿಆರ್)ನ ಶತಮಾನೋತ್ಸವಕ್ಕೆ ಚಾಲನೆ ಹಾಗೂ ಗುರುದೇವ ರಾನಡೆ ರಚಿಸಿದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬದುಕಿನಲ್ಲಿ ಪ್ರತಿಯೊಬ್ಬರಿಗೂ ಜ್ಞಾನ ಮತ್ತು ಭಕ್ತಿ ಅಗತ್ಯ. ರಾಮ ಮತ್ತು ರಾವಣ ಇಬ್ಬರಿಗೂ ಜ್ಞಾನವಿತ್ತು. ಆದರೆ, ರಾಮನಲ್ಲಿ ಮಾತ್ರ ಭಕ್ತಿ ಇದ್ದಿದ್ದರಿಂದ ಇಂದಿಗೂ ಅವನನ್ನು ಪೂಜಿಸುತ್ತೇವೆ. ಭಕ್ತಿ ಇಲ್ಲದ ಜ್ಞಾನ ನಮ್ಮಲ್ಲಿ ಅಹಂಕಾರ ತರುತ್ತದೆ’ ಎಂದರು.
‘ಸಂಪ್ರದಾಯ ಸರಿಯಾದ ಪಥದಲ್ಲಿ ಕರೆದೊಯ್ಯುತ್ತದೆ. ಇದು ಸಾಧನೆಯ ಮಾರ್ಗವೂ ಆಗಿದೆ. ಪ್ರವಚನಗಳು ನಾವು ಗಮ್ಯಸ್ಥಾನ ತಲುಪಲು ಮಾರ್ಗದರ್ಶನ ನೀಡುತ್ತವೆ. ಒಂದುವೇಳೆ ಗಮ್ಯಸ್ಥಾನವನ್ನೇ ಮರೆತರೆ, ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ. ಹಾಗಾಗಿ ಪ್ರತಿಯೊಬ್ಬರೂ ಸಂಪ್ರದಾಯ ಪಾಲಿಸಿ’ ಎಂದು ಕರೆ ನೀಡಿದರು.
‘ವೈಯಕ್ತಿಕ ಮತ್ತು ಪ್ರಾಪಂಚಿಕ ಜೀವನದಲ್ಲಿ ಅನೇಕ ಸಮಸ್ಯೆ ಎದುರಾಗುತ್ತವೆ. ಚಿಂತನೆ ಹಾಗೂ ಸಾಧನೆ ಮೂಲಕ ಅವುಗಳನ್ನು ನಿವಾರಿಸಬಹುದು. ಜೀವನದಲ್ಲಿ ಸಫಲರಾಗಲು ಚಿಂತನೆ ಮತ್ತು ಸಾಧನೆಯ ಮಾರ್ಗ ಅನುಸರಿಸುವ ಅಗತ್ಯವಿದೆ’ ಎಂದರು.
‘ಪ್ರತಿಯೊಬ್ಬರೂ ತಮ್ಮ ಅಂತರಂಗದ ಸತ್ಯ ಗುರುತಿಸಬೇಕು. ಆಗ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಬದುಕಿನಲ್ಲಿ ಸಶಕ್ತರಾಗಲು ಎಲ್ಲರೂ ತಮ್ಮ ಕರ್ತವ್ಯ ಅಚ್ಚುಕಟ್ಟಾಗಿ ನಿರ್ವಹಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
‘ಸನಾತನ ಧರ್ಮದ ಹಾದಿಯಲ್ಲಿ ಸಾಗಬೇಕು. ಸನಾತನ ಧರ್ಮದಲ್ಲಿ ವಿಶ್ವದ ಎಲ್ಲ ಸಮಸ್ಯೆಗಳಿಗೂ ನಿವಾರಿಸುವ ಶಕ್ತಿ ಇದೆ’ ಎಂದರು.
‘ಫೂಟ್‌ಪ್ರಿಂಟ್ಸ್ ಆನ್ ದಿ ಸ್ಯಾಂಡ್ಸ್ ಆಫ್ ಟೈಮ್’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿದ ಹೈದರಾಬಾದ್‌ನ ರಾಮಚಂದ್ರ ಮಿಷನ್‌ನ ಕಮಲೇಶ್ ಪಟೇಲ್, ‘ಭಾರತೀಯರಾದ ನಾವು ಎಂದಿಗೂ ವಿನಯತೆ ಮರೆಯಬಾರದು. ಆದರೆ, ಯಾರೂ ಅದರ ದುರ್ಬಳಕೆ ಮಾಡಿಕೊಳ್ಳದಂತೆ ಜಾಗೃತವಾಗಿರಬೇಕು. ರಾಷ್ಟ್ರಕ್ಕಾಗಿ ನಾವು ಎಂಥ ತ್ಯಾಗಕ್ಕೂ ಸಿದ್ಧವಿದ್ದೇವೆ. ಆದರೆ, ಭಾರತೀಯರ ಮೇಲಿನ ಅಪಮಾನ ಸಹಿಸಲಾರೆವು’ ಎಂದರು.
ಎಸಿಪಿಆರ್ ಚೇರ್ಮನ್ ಅಶೋಕ ಪೋತದಾರ, ಕಾರ್ಯದರ್ಶಿ ಎಂ.ಬಿ.ಝಿರಲಿ ಇತರರಿದ್ದರು.
ನಂತರ ಎಸಿಪಿಆರ್ ಆವರಣದಲ್ಲೇ ಮೋಹನ್ ಭಾಗವತ್ ಅವರು ಸಸಿ ನೆಟ್ಟರು. ಕಾಕಡಾರತಿ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.