ಬೆಳಗಾವಿ: ‘ಸಮಾಜದವರಿಗೆ ‘ಬೇಡ ಜಂಗಮ ಅನುಸೂಚಿತ ಜಾತಿ’ ಪ್ರಮಾಣಪತ್ರ ನೀಡುವುದಾಗಿ ಸರ್ಕಾರವು ಡಿಸೆಂಬರ್ ಅಂತ್ಯದೊಳಗೆ ಸುತ್ತೋಲೆ ಹೊರಡಿಸಬೇಕು. ಇಲ್ಲದಿದ್ದಲ್ಲಿ ಜನವರಿ ಮೊದಲ ವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಅಖಿಲ ಕರ್ನಾಟಕ ಬೇಡಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಡಿ. ಹಿರೇಮಠ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಸುವರ್ಣ ವಿಧಾನಸೌಧದ ಸಮೀಪದ ಕೊಂಡಸಕೊಪ್ಪದಲ್ಲಿ ಅಖಿಲ ಭಾರತ ಬೇಡ ಜಂಗಮ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮಾಜ ನಮ್ಮದು. ಸೂಕ್ತ ದಾಖಲಾತಿಗಳಿದ್ದರೂ ನಮ್ಮ ಬೇಡಿಕೆ ಈಡೇರದೆ ಇರುವುದಕ್ಕೆ ಕೆಲವು ರಾಜಕಾರಣಿಗಳ ಕೈವಾಡ ಕೆಲಸ ಮಾಡಿದೆ’ ಎಂದು ಆರೋಪಿಸಿದರು.
‘ನ್ಯಾಯಾಲಯದಲ್ಲಿ ಬೇಡ ಜಂಗಮರ ಪರವಾಗಿ ತೀರ್ಪು ಬಂದಿದೆ. ಆದರೂ ಸಚಿವ ಗೋವಿಂದ ಕಾರಜೋಳ ಮತ್ತು ಕುಡಚಿ ಶಾಸಕ ಪಿ.ರಾಜೀವ ಅವರು ಅಪಸ್ವರ ಎತ್ತಿದ್ದಾರೆ. ಹಗುರವಾಗಿ ಮಾತನಾಡಿ ಸಮುದಾಯ ಹಾಗೂ ನ್ಯಾಯಾಲಯದ ತೀರ್ಪನ್ನು ಅವಮಾನಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಸರ್ಕಾರಿ ಅಧಿಕಾರಿಗಳಿಗೆ ಎಲ್ಲವೂ ತಿಳಿದಿದ್ದರೂ ಪ್ರಮಾಣಪತ್ರ ನೀಡಲು ಕ್ರಮ ವಹಿಸುತ್ತಿಲ್ಲ. ಬೇಡ ಜಂಗಮ ಪ್ರಮಾಣಪತ್ರ ನೀಡಿದಂತೆ ಸದನದಲ್ಲಿ ಕೆಲ ಜನಪ್ರತಿನಿದಿಗಳು ಒಳಸಂಚು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಡಿ.22ರಂದು ಕೆಲವರು ಜಾತಿ ಸಂಘರ್ಷ ಮಾಡಲು ಹುನ್ನಾರ ನಡೆಸಿದ್ದಾರೆ. ದಾಖಲೆ, ನ್ಯಾಯಾಲಯದ ತೀರ್ಪಿನ ವಿರುದ್ಧ ಮಾತನಾಡಿದರೆ ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ದೊಡವಾಡ ಹಿರೇಮಠದ ಜಡಿಸಿದ್ದೇಶ್ವರ ಸ್ಚಾಮೀಜಿ, ‘ನ್ಯಾಯಯುತವಾದ ನಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು. ಹಕ್ಕು ಸಿಗುವವರೆಗೂ ಹೋರಾಡುತ್ತೇವೆ. ಪ್ರಾಣ ಕೊಡುವುದಕ್ಕೂ ಸಿದ್ಧವಿದ್ದೇವೆ’ ಎಂದು ತಿಳಿಸಿದರು.
ಅಖಲಿ ಕರ್ನಾಟಕ ಡಾ.ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸಲಿಂಗಯ್ಯ ಚಿಕ್ಕಮಠ, ‘ಸಮಾಜದವರು ಒಗ್ಗಟ್ಟಾಗಬೇಕು. ಎಲ್ಲ ತಾಲ್ಲೂಕಿನಲ್ಲೂ ಪ್ರತಿಭಟನೆ ನಡೆಸಬೇಕು. ಕೆಲವರ ರಾಜಕೀಯ ಕುತಂತ್ರದಿಂದ ನಮಗೆ ಅನ್ಯಾಯವಾಗಿದೆ. ಅಂಥವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.
ಮುಖಂಡ ಮಹಾಂತೇಶ ರಣಗಟ್ಟಿಮಠ, ‘ನಮ್ಮ ಸಮುದಾಯ ವಿರುದ್ಧ ಧ್ವನಿ ಎತ್ತಿದರೆ ಮತ್ತು ಹಕ್ಕು ಕಸಿದುಕೊಳ್ಳಲು ಬಂದರೆ ಪಿ.ರಾಜೀವ ಹಾಗೂ ಗೋವಿಂದ ಕಾರಜೋಳ ಅವರಿಗೆ ಮಸಿ ಬಳಿಯಬೇಕಾಗುತ್ತದೆ. ನಮಗೆ ಅನ್ಯಾಯ ಮಾಡಿದರೆ ಬಸವರಾಜ ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳುತ್ತಾರೆ’ ಎಂದು ಗುಡುಗಿದರು.
ಹೊಸೂರು–ಬೈಲಹೊಂಗಲ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮೋಳೆಯ ಕಾಡಸಿದ್ದೇಶ್ವರ ಮಠದ ಕಾಡಯ್ಯ ಹಿರೇಮಠ, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ದೇವರಶೀಗಿಹಳ್ಳಿಯ ಮಡಿವಾಳೇಶ್ವರ ಮಠದ ವೀರಯ್ಯ ಸ್ವಾಮೀಜಿ, ಮಹಾಂತೇಶ ಶಾಸ್ತ್ರಿ, ಅಖಿಲ ಕರ್ನಾಟಕ ಡಾ.ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕಿ ಸುಜಾತಾ ಮಠದ, ವಿರೂಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರ ಸವಡಿಸಾಲಿಮಠ, ಚನ್ನಬಸಯ್ಯ ಕಟಾಪುರಿಮಠ, ಗುರುಲಿಂಗಸ್ವಾಮಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.