ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯನ್ನು ‘ಭಿಕ್ಷುಕ ಮುಕ್ತ’ಗೊಳಿಸುವುದು ಸಾಧ್ಯವಾಗಿಲ್ಲ.
ವಿವಿಧ ರೀತಿಯಲ್ಲಿ ಭಿಕ್ಷೆ ಬೇಡುವವರನ್ನು ಅದರಿಂದ ತಪ್ಪಿಸಿ, ಪುನರ್ವಸತಿ ಅಥವಾ ಉದ್ಯೋಗ ಕಲ್ಪಿಸಿ ಸ್ವಾವಲಂಬಿ ಜೀವನ ಕಲ್ಪಿಸುವುದು ಸ್ಥಳೀಯ ಸಂಸ್ಥೆಗಳಿಗೆ ಸಾಧ್ಯವಾಗಿಲ್ಲ. ಭಿಕ್ಷಾಟನೆಯಲ್ಲಿ ತೊಡಗುವ ನಿರ್ಗತಿಕರಿಗೆ ಗೌರವಯುತ ಜೀವನ ನೀಡುವ ಕಾರ್ಯಕ್ಕೆ ಸರ್ಕಾರ ಆದ್ಯತೆ ನೀಡಿಲ್ಲ.
ಪರಿಣಾಮ, ಇಂದಿಗೂ ನಗರ ಹಾಗೂ ಪಟ್ಟಣಗಳಲ್ಲಿ ಭಿಕ್ಷುಕರು ಕಂಡುಬರುತ್ತಿದ್ದಾರೆ. ವಿವಿಧ ರೂಪ–ಸ್ವರೂಪದಲ್ಲಿ ಭಿಕ್ಷೆಗಿಳಿಯುತ್ತಾರೆ. ಇದು ಒಂದೆಡೆ ಸಾರ್ವಜನಿಕರಿಗೆ ಕಿರಿಕಿರಿಯಾದರೆ, ವ್ಯವಸ್ಥೆಯು ಎಷ್ಟರ ಮಟ್ಟಿಗೆ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸೋತಿದೆ ಎನ್ನುವುದಕ್ಕೆ ನಿದರ್ಶನವಾಗಿದೆ ಎನ್ನುತ್ತಾರೆ ಪ್ರಜ್ಞಾವಂತರು.
ನಗರದಲ್ಲಿ ಮಹಾನಗರಪಾಲಿಕೆಯಿಂದ ಪುರುಷರು ಹಾಗೂ ಮಹಿಳಾ ಭಿಕ್ಷುಕರಿಗಾಗಿ ಪರಿಹಾರ ಕೇಂದ್ರಗಳನ್ನು ಪ್ರತ್ಯೇಕವಾಗಿ ನಡೆಸುತ್ತಿದೆ. ಕ್ರಮವಾಗಿ 70 ಪುರುಷರು ಮತ್ತು 17 ಮಹಿಳೆಯರು ಈ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿಗೆ ಹೋಗಲು ಬಯಸದಿರುವ ಅಥವಾ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಕೇಂದ್ರಕ್ಕೆ ತಂದಿರಿಸಿದರೂ ಅಲ್ಲಿಂದ ತಪ್ಪಿಸಿಕೊಳ್ಳುವ ಭಿಕ್ಷುಕರು ಹೊರಗಡೆ ಬಹಳಷ್ಟು ಮಂದಿ ಇದ್ದಾರೆ.
ಅಧಿಕಾರಿಗಳೇಕೆ ಗಮನಿಸುವುದಿಲ್ಲ!:
ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರ ಕಚೇರಿ ಮೊದಲಾದ ಹಿರಿಯ ಅಧಿಕಾರಿಗಳ ಕಚೇರಿಗಳ ಬಳಿಯೇ ನಿರ್ಗತಿಕರು ಭಿಕ್ಷೆ ಬೇಡುತ್ತಿರುತ್ತಾರೆ. ಆದರೆ, ಅವರನ್ನು ಪುನರ್ವಸತಿ ಕೇಂದ್ರಗಳಿಗೆ ಸಾಗಿಸುವ ಕೆಲಸವನ್ನು ಅಧಿಕಾರಿಗಳು ಮಾಡುವುದಿಲ್ಲ! ‘ಅದೆಲ್ಲವೂ ನಿತ್ಯ ಇದ್ದಿದ್ದೇ’ ಎನ್ನುವಂತೆ ಅವರು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಾರೆ. ಅಲ್ಲದೇ, ರಾಣಿ ಚನ್ನಮ್ಮ ವೃತ್ತ, ಬಸ್ ನಿಲ್ದಾಣ, ರೈಲು ನಿಲ್ದಾಣ, ಪ್ರಮುಖ ದೇವಸ್ಥಾನಗಳ ಬಳಿ ಮೊದಲಾದ ಕಡೆಗಳಲ್ಲಿ ಭಿಕ್ಷೆ ಕೇಳುವವರು ಕಾಣಸಿಗುತ್ತಾರೆ. ಕೆಲವರು ಮನೆ–ಮನೆಗಳಿಗೆ ಹೋಗಿ ಭಿಕ್ಷೆ ಎತ್ತಿ ಹೊಟ್ಟೆ ತುಂಬಿಸಿಕೊಳ್ಳುವುದು ಉಂಟು. ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಂಡವರು ಅಲ್ಲಲ್ಲಿ ಓಡಾಡುತ್ತಿರುತ್ತಾರೆ. ಕೆಲವು ಮಹಿಳೆಯರು ಕಂದಮ್ಮಗಳೊಂದಿಗೆ ವೃತ್ತಗಳಲ್ಲಿ ನಿಂತು ವಾಹನಗಳವರ ಬಳಿ ಹಣ ಕೇಳುತ್ತಿರುತ್ತಾರೆ.
‘ನಗರದಲ್ಲಿ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ನಡೆದಿದೆ. ಕೆಲವರು ಪರಿಹಾರ ಕೇಂದ್ರದಲ್ಲಿ ಉಳಿಯಲು ಬಯಸುತ್ತಿಲ್ಲ. ತಪ್ಪಿಸಿಕೊಳ್ಳುತ್ತಾರೆ. ಅಲ್ಲಿರುವವರಿಗೆ ಗುರುತಿನ ಚೀಟಿ, ಮತದಾರರ ಚೀಟಿ, ವಸತಿ ಮತ್ತು ಊಟೋಪಹಾರದ ವ್ಯವಸ್ಥೆ ಮಾಡುತ್ತಿದ್ದೇವೆ. ಸಂಗ್ರಹಿಸುವ ಸೆಸ್ ಅನ್ನು ಸರ್ಕಾರಕ್ಕೆ ನೀಡುತ್ತೇವೆ. ದೀನದಯಾಳ್ ನಗರ ಜೀವನೋಪಾಯ ಮಿಷನ್‌ನಲ್ಲಿ ಸಿಗುವ ಅನುದಾನದಲ್ಲಿ ಪರಿಹಾರ ಕೇಂದ್ರ ನಡೆಸುತ್ತಿದ್ದೇವೆ. ದಾನಿಗಳು ಕೂಡ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದಾರೆ’ ಎಂದು ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ತಿಳಿಸಿದರು.
ವಲಸೆ ಭಿಕ್ಷುಕರೆ ಹೆಚ್ಚು
ಮೂಡಲಗಿ ಪಟ್ಟಣವೂ ಭಿಕ್ಷುಕರ ಹಾವಳಿಯಿಂದ ಹೊರತಾಗಿಲ್ಲ. ನಿತ್ಯ 5ರಿಂದ 8 ಜನ ಮಂದಿ ಬರುತ್ತಾರೆ ಎಂದು ಅಂಗಡಿಕಾರರು ತಿಳಿಸುತ್ತಾರೆ. ಸಂತೆ ದಿನವಾದ ಭಾನುವಾರ ಬೇರೆ ಕಡೆಗಳಿಂದ ಬಂದು ಸಂಜೆವರೆಗೆ ಭೀಕ್ಷೆ ಬೇಡಿ ಮರಳುತ್ತಾರೆ. ಮಹಿಳೆಯರು ಹಾಗೂ ಮಕ್ಕಳೂ ಜಾಸ್ತಿ ಇರುತ್ತಾರೆ. ತಟ್ಟೆಯಲ್ಲಿ ದೇವರ ಫೋಟೊ ಇಟ್ಟೊಕೊಂಡು, ಇಲ್ಲವೆ ಕಂಕುಳಲ್ಲಿ ಕೂಸುಗಳನ್ನು ತಂದು ಬೇಡುತ್ತಾರೆ. ಕಲ್ಲೋಳಿ ಹಣಮಂತ ದೇವರ ದೇವಸ್ಥಾನದಲ್ಲಿ ಕೆಲವು ವೃದ್ಧೆಯರು ಕಾಯಂ ಇರುತ್ತಾರೆ. ಪುರಸಭೆಯವರು ಪುನರ್ವಸತಿ ಕಲ್ಪಿಸಲು ಮುಂದಾಗಿಲ್ಲ.
ದೇಗುಲಗಳ ಬಳಿ
ಗೋಕಾಕದಲ್ಲಿ ಭಿಕ್ಷುಕರು ದೇವಸ್ಥಾನಗಳ ಬಳಿ ಕಾಣಿಸುತ್ತಾರೆ. ಮಾನಸಿಕ ಅಸ್ವಸ್ಥ ಮಹಿಳೆಯರಿಬ್ಬರು ಪ್ರಮುಖ ರಸ್ತೆಗಳಲ್ಲಿ ಅಡ್ಡಾಡುತ್ತಿರುತ್ತಾರೆ. ಜನರಿಗೆ ಕಿರಿಕಿರಿ ನೀಡುತ್ತಾರೆ. ಇಂಥವರ ಪುನರ್ವಸತಿಗೆ ಸ್ಥಳೀಯ ಸಂಸ್ಥೆಯಿಂದ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ. ಮೂರು ವರ್ಷಗಳಿಂದ ತೆರವಾಗಿರುವ ನಗರಸಭೆ ಆಯುಕ್ತರ ಹುದ್ದೆಗೆ ಮೂವರು ತಾತ್ಕಾಲಿಕ ಪ್ರಭಾರಿಗಳು ಬಂದರು. ಅವರು, ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಗಿಲ್ಲ.
ಯಲ್ಲಮ್ಮ ದೇವಸ್ಥಾನ ಬಳಿ ಹೆಚ್ಚು
ಸವದತ್ತಿಯ ಯಲ್ಲಮ್ಮ ದೇವಸ್ಥಾನವನ್ನೇ ಹಲವು ಭಿಕ್ಷುಕರು ಅವಲಂಬಿಸಿದ್ದಾರೆ. ಸಂತೆ ದಿನ ಆಯಾ ಊರುಗಳತ್ತ ತೆರಳಿ ಬೇಡುತ್ತಾರೆ. ಪುರಸಭೆಯು ನೀರಿನ ಕರದ ಮೇಲೆ ಶೇ 3ರಷ್ಟನ್ನು ಅಂದಾಜು ₹ 2 ಲಕ್ಷವನ್ನು ಭಿಕ್ಷುಕರ ಪುನರ್ವಸತಿಗಾಗಿ ಪ್ರತಿ ವರ್ಷ ಸರ್ಕಾರಕ್ಕೆ ಕೊಡುತ್ತಿದೆ. ಆದರೆ, ಇಲ್ಲಿನ ಭಿಕ್ಷುಕರಿಗೆ ಸೂರು ಸಿಕ್ಕಿಲ್ಲ.
ಮಕ್ಕಳು, ವಯಸ್ಕರು
ಬೈಲಹೊಂಗಲದಲ್ಲಿ ನಿತ್ಯ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೆಗೂ ಹಲವರು ಭಿಕ್ಷಾಟನೆ ಮಾಡುತ್ತಿರುತ್ತಾರೆ. ಅವರನ್ನು ವಿಚಾರಿಸಿ, ಯೋಗಕ್ಷೇಮ ಆಲಿಸಿ ಪುನರ್ವಸತಿ ಕಲ್ಪಿಸುವ ಕೆಲಸ ನಡೆದಿಲ್ಲ. ಭಿಕ್ಷುಕರ ಪರಿಹಾರ ಕೇಂದ್ರವೂ ಇಲ್ಲ. ಶ್ರೀಸಾಮಾನ್ಯರು ಅವರ ಉಪಟಳದಿಂದ ಬೇಸತ್ತು ಹೋದ ಉದಾಹರಣೆಗಳೂ ಇವೆ. ಹಣ ಕೊಡುವವರೆಗೂ ಅವರು ಬಿಡುವುದಿಲ್ಲ. ಕೊಡದಿದ್ದರೆ ಹೀಯಾಳಿಸುತ್ತಾರೆ. ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ನಡೆಯಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ. ರಾಯಬಾಗ ಪಟ್ಟಣದಲ್ಲೂ ಇದೇ ಸ್ಥಿತಿ ಇದೆ.
ರಾಮದುರ್ಗದಲ್ಲಿ ದೇವಸ್ಥಾನ, ಉದ್ಯಾನಗಳಿಗಿಂತ ಮಿನಿ ವಿಧಾನಸೌಧ, ಹುತಾತ್ಮ ಚೌಕ ಮೊದಲಾದ ಕಡೆ ಒಬ್ಬಿಬ್ಬರು ಭಿಕ್ಷುಕರು ಕಾಣುತ್ತಾರೆ. ಮಿನಿ ವಿಧಾನಸೌಧಕ್ಕೆ ಬರುವವರಿಗೆ ಭಿಕ್ಷುಕರ ಕಾಟ ಜಾಸ್ತಿ. ಹಣಕ್ಕಾಗಿ ಅವರು ಬೆನ್ನು ಹತ್ತುವುದೂ ಉಂಟು.
ಕೈಯೊಡ್ಡುವ ಕಂದಮ್ಮಗಳು
ಚನ್ನಮ್ಮನ ಕಿತ್ತೂರಿನಲ್ಲಿ ಕೈಯಲ್ಲಿ ತಾಟು, ಬಗಲಿಗೊಂದು ಚೀಲ, ಕಂಕುಳಲ್ಲಿ ಕೂಸು ಎತ್ತಿಕೊಂಡು ಪೆಟ್ರೊಲ್ ಬಂಕ್ ಬಳಿ ಮತ್ತು ಸೋಮವಾರ ಸಂತೆಯ ದಿನ ಬೇಡಿಕೊಂಡು ತಿರುಗಾಡುವ ಈ ಎಳೆಯ ಮಕ್ಕಳಿಗೆ ಕೆಲವರು ಚಿಲ್ಲರೆ ಕಾಸು ಕೊಡುತ್ತಾರೆ. ಕೆಲವರು ಗದರುತ್ತಾರೆ. ಪಾಲಕರೆ ಈ ಮಕ್ಕಳನ್ನು ಭಿಕ್ಷಾಟನೆಗೆ ದೂಡುತ್ತಾರೆ. ಮಕ್ಕಳ ಕೈಯೊಳಗಿನ ತಾಟಿನಲ್ಲಿ ದೇವರ ಫೋಟೊ ಇಟ್ಟು ಕೊಡುತ್ತಾರೆ. ಸಂಗ್ರಹವಾದ ದುಡ್ಡು ತಾಯಿಯ ಬಳಿ ಹೋಗಿ ನೀಡಬೇಕು. ಆ ದುಡ್ಡಿನಲ್ಲಿ ಕೆಲ ಭಾಗ ತಂದೆಯ ಜೇಬಿಗೆ ಹೋಗಿ ಮದ್ಯದಂಗಡಿಗೆ ಸೇರುತ್ತದೆ. ಇವರ ಆಶ್ರಯಕ್ಕಾಗಿ ಕಾನೂನು ರೂಪಿಸಿದ್ದರೂ ಅದು ಸಮರ್ಪಕವಾಗಿ ಜಾರಿಗೆ ಬಂದಿಲ್ಲ.
ರೈಲುಗಳಿದ್ದಾಗ
ಖಾನಾಪುರ ತಾಲ್ಲೂಕಿನಲ್ಲಿ ಈ ಮೊದಲು ರೈಲುಗಳ ಸಂಚಾರ ನಡೆಯುತ್ತಿದ್ದ ಸಂದರ್ಭದಲ್ಲಿ ರೈಲುಗಳ ಮೂಲಕ ಪರರಾಜ್ಯಗಳ ಭಿಕ್ಷುಕರು, ಮಾನಸಿಕ ಅಸ್ವಸ್ಥರು, ಅನಾಥರು ಮತ್ತು ವಾಸಿಯಾಗದ ರೋಗಗಳಿಂದ ಬಳಲುತ್ತಿರುವವರು ಪಟ್ಟಣ, ಲೋಂಡಾ, ನಾಗರಗಾಳಿ ಮತ್ತು ಗುಂಜಿ ರೈಲು ನಿಲ್ದಾಣಗಳ ಮೂಲಕ ಬಂದಿಳಿದು ಇಲ್ಲಿಯೇ ತಂಗುತ್ತಿದ್ದರು. ಆ ನಿರ್ಗತಿಕರನ್ನು ಪೊಲೀಸರು ಮತ್ತು ಅಧಿಕಾರಿಗಳು ಬೆಳಗಾವಿಯ ಪರಿಹಾರ ಕೇಂದ್ರಗಳಿಗೆ ದಾಖಲಿಸುತ್ತಿದ್ದರು. ಕೋವಿಡ್ ಕಾರಣದಿಂದ ಹೆಚ್ಚಿನ ರೈಲುಗಳ ಸಂಚಾರ ಇಲ್ಲವಾಗಿರುವುದರಿಂದ ಈ ಭಾಗದಲ್ಲಿ ಪ್ರಸ್ತುತ ಭಿಕ್ಷುಕರು ಅಥವಾ ನಿರ್ಗತಿಕರು ಕಂಡುಬಂದಿಲ್ಲ. ಪುನರ್ವಸತಿ ಕೇಂದ್ರಗಳೂ ಇಲ್ಲ.
ತಲೆನೋವಾಗಿ ಪರಿಣಮಿಸಿದೆ
ನಿಪ್ಪಾಣಿಯಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚುತ್ತಿದೆ. ಇದು ಜನರಿಗೆ ತಲೆನೋವಾಗಿ ಪರಿಣಮಿಸಿದೆ. ಇಲ್ಲಿ ಪುನರ್ವಸತಿ ಕೇಂದ್ರ ಅಗತ್ಯವಾಗಿದೆ ಎನ್ನುವುದು ಜನರ ಆಗ್ರಹವಾಗಿದೆ. ಮುರಗುಡ್ ರಸ್ತೆ, ಚಿಕ್ಕೋಡಿ ರಸ್ತೆ, ಬಸ್ ನಿಲ್ದಾಣ ಪರಿಸರದಲ್ಲಿ ಭಿಕ್ಷುಕರ ಸಂಖ್ಯೆ ಜಾಸ್ತಿ. ಚಿಕ್ಕೋಡಿಯಿಂದ ಬಸ್‌ನಲ್ಲಿ 25 ಮಂದಿ ಚಿಕ್ಕ ಮಕ್ಕಳೊಂದಿಗೆ ಬಂದು ನಗರದ ಹಲವೆಡೆ ಸಂಚರಿಸುತ್ತಾರೆ.
ನಗರವನ್ನು ಭಿಕ್ಷುಕ ಮುಕ್ತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಪರಿಹಾರ ಕೇಂದ್ರದಲ್ಲಿರುವವರಿಗೆ ಕೌಶಲ ಅಭಿವೃದ್ಧಿ, ಉದ್ಯೋಗ ತರಬೇತಿ ನೀಡುವ ಉದ್ದೇಶವಿದೆ
ಕೆ.ಎಚ್. ಜಗದೀಶ್
ಆಯುಕ್ತರು, ಮಹಾನಗರಪಾಲಿಕೆ
ಮಾನಸಿಕ ಅಸ್ವಸ್ಥರನ್ನು ಬೀದಿಗೆ ಬಿಡದೆ ಅವರಿಗೆ ಪುನರ್ವಸತಿ ಕಲ್ಪಿಸಬೇಕು. ನಗರಸಭೆಯವರು ಅಥವಾ ಪೊಲೀಸರು ಇಂತಹ ನಿರ್ಗತಿಕರ ಬಗ್ಗೆ ಕಾಳಜಿವಹಿಸಿ, ಜನರಿಗೆ ಆಗುವ ಕಿರಿಕಿರಿ ತಪ್ಪಿಸಬೇಕು
ಸದಾಶಿವ ಗೋವಿಂದ ಬಂಡೆಪ್ಪಗೋಳ
ನಾಗರಿಕ, ಗೋಕಾಕ
ಮಿನಿ ವಿಧಾನಸೌಧದ ಮುಂದೆ ಭಿಕ್ಷೆ ಬೇಡುವವರಿಂದ ನಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ತೊಂದರೆ ಆಗುತ್ತಿದೆ. ಚಿಲ್ಲರೆ ಇದ್ದರೆ ಮಾತ್ರ ನೀಡುತ್ತಾರೆ. ಇಲ್ಲದೆ ಹೋದರೆ ಭಿಕ್ಷುಕರ ನಿಂದನೆಗೆ ಗುರಿ ಆಗಬೇಕಾಗುತ್ತದೆ
ಭೀಮಪ್ಪ ಹಾದಿಮನಿ
ವರ್ತಕ, ರಾಮದುರ್ಗ
ಚಿಕ್ಕೋಡಿಯಲ್ಲಿ ಮುಖ್ಯಾಧಿಕಾರಿಯಾಗಿದ್ದಾಗ ಅಲ್ಲಿ ಭಿಕ್ಷಾಟನೆಗೆ ನಿರ್ಬಂಧ ವಿಧಿಸಿದ್ದೆ. ಆಗಿನಿಂದ ಕೆಲವರು ನಿಪ್ಪಾಣಿಗೆ ಬರಲಾರಂಭಿಸಿದ್ದಾರೆ. ಅವರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಕ್ರಮಕ್ಕಾಗಿ ಪೊಲೀಸರು ಹಾಗೂ ಸಿಡಿಪಿಒ ಗಮನಕ್ಕೂ ತಂದಿದ್ದೇನೆ
ಮಹಾವೀರ ಬೋರನ್ನವರ
ಪೌರಾಯುಕ್ತರು, ನಗರಸಭೆ, ನಿಪ್ಪಾಣಿ
(ಪ್ರಜಾವಾಣಿ ತಂಡ: ರಾಮೇಶ್ವರ ಕಲ್ಯಾಣಶೆಟ್ಟಿ, ಪ್ರದೀಪ ಮೇಲಿನಮನಿ, ಚನ್ನಪ್ಪ ಮಾದರ, ಬಸವರಾಜ ಶಿರಸಂಗಿ, ಆನಂದ ಮನ್ನಿಕೇರಿ, ಪ್ರಸನ್ನ ಕುಲಕರ್ಣಿ, ಬಾಲಶೇಖರ ಬಂದಿ, ರವಿ ಎಂ. ಹುಲಕುಂದ, ಸುನೀಲ್ ಗಿರಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.