ಖಾನಾಪುರ: ತಾಲ್ಲೂಕಿನ ಕುಪ್ಪಟಗಿರಿ ಗ್ರಾಮದ ಕೃಷಿಕ ನಾರಾಯಣ ಪಾಟೀಲ ತಮ್ಮ 16 ಗುಂಟೆ ಭೂಮಿಯಲ್ಲಿ ರತ್ನಾ ಟೋಕಿಟೋ ಖಟ್ಕಾ ತಳಿಯ ಮೆಣಸಿನಕಾಯಿ ಬೆಳೆಯನ್ನು ಬೆಳೆದು 1.10 ಕ್ವಿಂಟಲ್ ಉತ್ಪನ್ನ ಪಡೆದಿದ್ದಾರೆ.
ಬೆಳೆಗೆ ನಿಯಮಿತವಾಗಿ ನೀರು, ಕೊಟ್ಟಿಗೆ ಗೊಬ್ಬರ, ಪೋಷಕಾಂಶಗಳು ಮತ್ತು ಎರೆ ಗೊಬ್ಬರವನ್ನು ಒದಗಿಸಿದ್ದಾರೆ. ಮೂರು ತಿಂಗಳ ಅವಧಿಯ ಮೆಣಸಿನಕಾಯಿ ಬೆಳೆ ಬೆಳೆದು ₹ 1.20 ಲಕ್ಷ ಆದಾಯ ಪಡೆದಿದ್ದಾರೆ. ಎಲ್ಲ ಖರ್ಚು ಕಳೆದು ₹ 90 ಸಾವಿರ ಲಾಭ ಗಳಿಸಿದ್ದಾರೆ. ಖಾರ ಬೆಳೆದು ಸಿಹಿ ಕಂಡುಕೊಂಡ ಯಶಸ್ವಿ ರೈತರೆನಿಸಿಕೊಂಡಿದ್ದಾರೆ.
ಬೇಸಾಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ನಾರಾಯಣ ಅವರು ಕುಪ್ಪಟಗಿರಿ ಗ್ರಾಮದ ವಿವಿಧೆಡೆ ಒಟ್ಟು 24 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. 20 ಎಕರೆ ಭೂಮಿಯಲ್ಲಿ ಕಬ್ಬು ಬೆಳೆದಿದ್ದಾರೆ. ಕಳೆದ ವರ್ಷ 400 ಟನ್ ಕಬ್ಬು ಉತ್ಪಾದಿಸಿದ್ದು, ಉಳಿದ ಜಮೀನಿನಲ್ಲಿ ಮಾವಿನತೋಟ, ಸ್ವಲ್ಪ ಪ್ರಮಾಣದ ಗದ್ದೆಯಲ್ಲಿ ಮಳೆಗಾಲದಲ್ಲಿ ಭತ್ತ ಮತ್ತು ಹಿಂಗಾರು ಹಂಗಾಮಿನಲ್ಲಿ ಹಸಿಮೆಣಸಿನಕಾಯಿ, ತರಕಾರಿ, ಗೋವಿನಜೋಳ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ.
ಕುಟುಂಬದ ಎಲ್ಲ ಸದಸ್ಯರೂ ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡುಕೊಂಡಿದ್ದಾರೆ. ಕೃಷಿ, ತೋಟಗಾರಿಕೆಯೊಂದಿಗೆ ಲಾಭದಾಯಕ ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ಇದರಿಂದ ತಮ್ಮ ಎಲ್ಲ ಖರ್ಚುಗಳನ್ನು ಕಳೆದು ವಾರ್ಷಿಕ ಕನಿಷ್ಠ ₹ 3 ಲಕ್ಷ ನಿವ್ವಳ ಆದಾಯ ಪಡೆಯುತ್ತಿದ್ದಾರೆ.
ನಾರಾಯಣ ಅವರ ಸಾಧನೆಗೆ ಬೆನ್ನೆಲುಬಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ನಿಂತಿವೆ. ಎರಡೂ ಇಲಾಖೆಗಳು ಅವರಿಗೆ ಅಗತ್ಯ ಸೌಲಭ್ಯಗಳನ್ನು ನೀಡಿವೆ. ತೋಟಗಾರಿಕೆ ಇಲಾಖೆ ಆದರ್ಶ ರೈತ ಸನ್ಮಾನ ನೀಡಿದ್ದು, ರಾಜ್ಯ ಮಟ್ಟದ ತೋಟಗಾರಿಕೆ ಬೆಳೆಗಳ ಪ್ರದರ್ಶನದಲ್ಲಿ ನಾರಾಯಣ ಅವರ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದೆ.
ಬೆಂಗಳೂರು ಕೃಷಿ ಅಭಿಯಾನದ ಸಂಚಾಲಕರಾಗಿ ನಾರಾಯಣ ಅವರನ್ನು ಆಯ್ಕೆ ಮಾಡಲಾಗಿದೆ. ವಿವಿಧ ಕೃಷಿ ಉತ್ಸವಗಳಲ್ಲಿ ಮಾರ್ಗದರ್ಶಕರನ್ನಾಗಿ ಕರೆಸಿ ಸನ್ಮಾನಿಸಲಾಗಿದೆ. ಒಟ್ಟಾರೆ ಕೃಷಿಯಲ್ಲಿ ಖುಷಿಯನ್ನು ಹೊಂದಿರುವ ನಾರಾಯಣ ಪಾಟೀಲ ಭೂಮಿತಾಯಿಯ ಸೇವೆಯಲ್ಲಿ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ.
ನಾರಾಯಣ ಪಾಟೀಲ ಅವರ ಸಂಪರ್ಕ ಸಂಖ್ಯೆ: 9480017819
*
ಖಾನಾಪುರ ತಾಲ್ಲೂಕು ಬಹುತೇಕ ಮಲೆನಾಡು ಪ್ರದೇಶವಾದ್ದರಿಂದ ಎಡೆಬಿಡದೇ ಮಳೆ ಸುರಿಯುತ್ತದೆ. ಹೀಗಾಗಿ ಭತ್ತ, ಕಬ್ಬು, ರಾಗಿ ಬಿಟ್ಟರೆ ಉಳಿದ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಮಳೆಗಾಲದಲ್ಲಿ ಭತ್ತ ಮತ್ತು ಉಳಿದ ದಿನಗಳಲ್ಲಿ ಋತುಮಾನಕ್ಕೆ ತಕ್ಕಂತೆ ತರಕಾರಿ ಬೆಳೆಗಳನ್ನು ಬೆಳೆಯುತ್ತೇನೆ.
– ನಾರಾಯಣ ಪಾಟೀಲ, ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.