ಬೆಳಗಾವಿ: ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣ ಪ್ರಾಧಿಕಾರ ₹3.69 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಅದರ ವಸೂಲಾತಿಗಾಗಿ ಸಾಂಬ್ರಾ ಗ್ರಾಮ ಪಂಚಾಯಿತಿ ನೋಟಿಸ್ ಜಾರಿಗೊಳಿಸಿದೆ.
ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಪ್ರಯತ್ನ ನಡದಿವೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರಂತರವಾಗಿ ಸಭೆ ನಡೆಸಿ, ಇದಕ್ಕೆ ಪೂರಕವಾಗಿ ಮೂಲಸೌಕರ್ಯ ಸಿದ್ಧಪಡಿಸುತ್ತಿದ್ದಾರೆ. ಹೊಸ ಟರ್ಮಿನಲ್ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿ ಆರಂಭಗೊಂಡಿವೆ. ಆದರೆ, ವಿಮಾನ ನಿಲ್ದಾಣದವರು ಕಳೆದ ಏಳು ವರ್ಷಗಳಿಂದ ತೆರಿಗೆಯನ್ನೇ ಪಾವತಿಸದಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
ಬೆಳಗಾವಿಯಿಂದ 10 ಕಿ.ಮೀ. ದೂರದಲ್ಲಿರುವ ಸಾಂಬ್ರಾ ಗ್ರಾಮದಲ್ಲೇ ಬೆಳಗಾವಿ–ಬಾಗಲಕೋಟೆ ರಾಜ್ಯ ಹೆದ್ದಾರಿ ಹಾಯ್ದುಹೋಗಿದೆ. 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಈ ಗ್ರಾ.ಪಂನಲ್ಲಿ 34 ಸದಸ್ಯರಿದ್ದಾರೆ. ಸುಮಾರು ₹4.50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿದಿದೆ. ಅದರಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದವರೇ ದೊಡ್ಡಮೊತ್ತದ ಬಾಕಿ ಉಳಿಸಿಕೊಂಡಿದ್ದಕ್ಕೆ ಸದಸ್ಯರು ಅಸಮಾಧಾನಗೊಂಡಿದ್ದಾರೆ. ಆರ್ಥಿಕ ಸಮಸ್ಯೆಯಿಂದಾಗಿ ಅಭಿವೃದ್ಧಿ ಕೆಲಸಕ್ಕೂ ಪೆಟ್ಟುಬೀಳುತ್ತಿದೆ.
₹3.69 ಕೋಟಿ ಬಾಕಿ:
‘ಸಾಂಬ್ರಾ ವಿಮಾನ ನಿಲ್ದಾಣ ಪ್ರಾಧಿಕಾರದವರು 545 ಎಕರೆ ಆಸ್ತಿಯ ತೆರಿಗೆಯನ್ನು 2012ರಿಂದಲೇ ತುಂಬಬೇಕಿತ್ತು. ಆದರೆ, ನಿಲ್ದಾಣ ಅಭಿವೃದ್ಧಿಪಡಿಸಲಾಗುತ್ತಿದೆ ಎನ್ನುವ ಕಾರಣಕ್ಕೆ ಕೆಲವು ವರ್ಷ ತೆರಿಗೆ ತುಂಬುವುದಕ್ಕೆ ಸರ್ಕಾರ ವಿನಾಯಿತಿ ಕೊಟ್ಟಿತ್ತು. 2017–18ನೇ ಸಾಲಿನಿಂದ ನಿಗದಿಪಡಿಸಿದ ತೆರಿಗೆಯಂತೆ ಈವರೆಗೆ ₹3.69 ಕೋಟಿ (ಬಡ್ಡಿಯೂ ಸೇರಿ) ತುಂಬಬೇಕಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಸಾರ್ವಜನಿಕರು ಸಕಾಲಕ್ಕೆ ಆಸ್ತಿ ತೆರಿಗೆ ಪಾವತಿಸದಿದ್ದರೆ, ಅಧಿಕಾರಿಗಳು ತಕ್ಷಣವೇ ಕ್ರಮ ವಹಿಸುತ್ತಾರೆ. ಆದರೆ, ವಿಮಾನ ನಿಲ್ದಾಣ ಪ್ರಾಧಿಕಾರದ ವಿಚಾರದಲ್ಲಿ ಕಠಿಣ ಕ್ರಮವಾಗುತ್ತಿಲ್ಲ ಏಕೆ’ ಎಂಬುದು ಗ್ರಾಮಸ್ಥರ ಪ್ರಶ್ನೆ.
ತಕ್ಷಣವೇ ಆಸ್ತಿ ತೆರಿಗೆ ಪಾವತಿಸುವಂತೆ ವಿಮಾನ ನಿಲ್ದಾಣ ಪ್ರಾಧಿಕಾರದವರಿಗೆ ನೋಟಿಸ್ ಕೊಟ್ಟಿದ್ದೇವೆ. ತೆರಿಗೆ ವಸೂಲಾತಿಗೆ ಪ್ರಯತ್ನ ನಡೆಸಿದ್ದೇವೆಸಿದ್ಧಲಿಂಗ ಸರೂರ ಪಿಡಿಒ ಸಾಂಬ್ರಾ
ನಮಗೆ ಹಣಕಾಸಿನ ಕೊರತೆಯೇ ಇಲ್ಲ. ವಿವಿಧ ಕಾರಣಗಳಿಂದ ವಿಳಂಬವಾಗಿದೆ. ನಿಯಮಾನುಸಾರ ಆಸ್ತಿ ತೆರಿಗೆ ಪಾವತಿಸಲು ಸಿದ್ಧರಿದ್ದೇವೆಎಸ್.ತ್ಯಾಗರಾಜನ್ ನಿರ್ದೇಶಕ ಸಾಂಬ್ರಾ ವಿಮಾನ ನಿಲ್ದಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.