ಬೆಳಗಾವಿ: ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಇಲ್ಲಿನ ಅಶೋಕ ನಗರದಲ್ಲಿ ಮಹಾನಗರ ಪಾಲಿಕೆಯಿಂದ ನಿರ್ಮಿಸಿರುವ ಕ್ರೀಡಾ ಸಂಕೀರ್ಣ ನಿಷ್ಪ್ರಯೋಜಕವಾಗಿದೆ. ಉದ್ಘಾಟನೆಯಾಗಿ ಮೂರ್ನಾಲ್ಕು ವರ್ಷಗಳಾದರೂ ಬಳಕೆಯಾಗದ ಪರಿಣಾಮ ವಿವಿಧ ಸಲಕರಣೆಗಳು ದೂಳು ತಿನ್ನುತ್ತಿವೆ; ತುಕ್ಕಿ ಹಿಡಿಯುತ್ತಿವೆ.
ಅಶೋಕ ನಗರ, ರಾಮನಗರ, ಶಿವಬಸವ ನಗರ, ವೀರಭದ್ರ ನಗರ, ಮಹಾಂತೇಶ ನಗರ ಮತ್ತಿತರ ಬಡಾವಣೆಗಳ ಕ್ರೀಡಾಸಕ್ತರಿಗೆ ಅನುಕೂಲ ಆಗಲೆಂದು ಪಾಲಿಕೆ ₹ 6 ಕೋಟಿ ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಿದೆ. 2018ರ ಮಾರ್ಚ್‌ನಲ್ಲಿ ಉತ್ತರ ಮತಕ್ಷೇತ್ರದ ಆಗಿನ ಶಾಸಕ ಫಿರೋಜ್ ಸೇಠ್ ಅವರು ಬ್ಯಾಡ್ಮಿಂಟನ್ ಹಾಲ್, 2019ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಜುಕೊಳ ಹಾಗೂ ವ್ಯಾಯಾಮ ಶಾಲೆ ಉದ್ಘಾಟಿಸಿದ್ದರು. ಇದರಿಂದಾಗಿ ಇಲ್ಲಿ ಕ್ರೀಡೆಗೆ ಉತ್ತೇಜನ ಸಿಗಲಿದೆ ಮತ್ತು ಒಂದಿಷ್ಟು ಉತ್ತಮ ಪ್ರತಿಭೆಗಳು ಹೊರಹೊಮ್ಮಲಿವೆ ಎನ್ನುವ ನಿರೀಕ್ಷೆ ಮೂಡಿತ್ತು. ಆದರೆ, ಈವರೆಗೂ ಇದು ಬಳಕೆಯಾಗದಿರುವುದು ಜನರಲ್ಲಿ ನಿರಾಸೆ ಮೂಡಿಸಿದೆ.
ಕಿಡಿಗೇಡಿಗಳ ಹಾವಳಿ:‘ಕ್ರೀಡಾ ಸಂಕೀರ್ಣದಲ್ಲಿ ಕಸ ಬೆಳೆದಿದ್ದು, ಕತ್ತಲಾಗುತ್ತಿದ್ದಂತೆ ಕಿಡಿಗೇಡಿಗಳು ಆವರಣ ಪ್ರವೇಶಿಸಿ ಅಕ್ರಮ ಚಟುವಟಿಕೆ ಕೈಗೊಳ್ಳುತ್ತಿದ್ದಾರೆ. ಇಲ್ಲಿಯೇ ಮದ್ಯದ ಬಾಟಲಿ ಎಸೆದು ಹೋಗುತ್ತಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವ ಭದ್ರತಾ ಸಿಬ್ಬಂದಿಯೊಂದಿಗೂ ಗಲಾಟೆ ಮಾಡುತ್ತಿದ್ದಾರೆ’ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಕೊರೊನಾ ಅಡ್ಡಿ:
‘ಕ್ರೀಡಾ ಸಂಕೀರ್ಣ ಆರಂಭವಾದರೆ ಬಡ ಮಕ್ಕಳು ಹಾಗೂ ಯುವಕ–ಯುವತಿಯರಿಗೆ ಕೈಗೆಟುಕುವ ದರದಲ್ಲಿ ಅಭ್ಯಾಸ ಕೈಗೊಳ್ಳಲು ಅನುಕೂಲವಾಗಲಿದೆ. ಈ ದಿಸೆಯಲ್ಲಿ ಪಾಲಿಕೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ವಿನಾಕಾರಣ ವಿಳಂಬ ಮಾಡಬಾರದು’ ಎನ್ನುತ್ತಾರೆ ಸ್ಥಳೀಯರಾದ ಭರತ್ ಮುತಗೇಕರ್.
‘ಎರಡು ವರ್ಷಗಳ ಹಿಂದೆಯೇ ಕ್ರೀಡಾ ಸಂಕೀರ್ಣವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಯೋಜಿಸಿದ್ದೆವು. ಆದರೆ, ಕೊರೊನಾ ಹಾವಳಿ ಅಡ್ಡಿಯಾಯಿತು. ಈ ಮಧ್ಯೆ ನಿರ್ವಹಣೆಗಾಗಿ ನೀಡಲು ಮೂರು ಬಾರಿ ಟೆಂಡರ್ ಆಹ್ವಾನಿಸಿದ್ದೆವು. ಆದರೆ, ಯಾವೊಂದು ಸಂಸ್ಥೆಗೂ ಟೆಂಡರ್ ಅಂತಿಮವಾಗದ್ದರಿಂದ ವಿಳಂಬವಾಗಿದೆ’ ಎಂದು ಮಹಾನಗರ ಪಾಲಿಕೆ ಎಇಇ ಮಹಾಂತೇಶ ನರಸಣ್ಣವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪಾಳು ಬಿದ್ದ ಉದ್ಯಾನ
‘ಈ ಭಾಗದ ಜನರಿಗೆ ವಾಯುವಿಹಾರಕ್ಕೆ ಅನುಕೂಲವಾಗಲೆಂದು ಕ್ರೀಡಾ ಸಂಕೀರ್ಣ ಆವರಣದಲ್ಲೇ ಮಹಾನಗರ ಪಾಲಿಕೆಯಿಂದ ಉದ್ಯಾನ ನಿರ್ಮಿಸಲಾಗಿದೆ. ಅದು ಕೂಡ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಶೀಘ್ರ ಈ ಉದ್ಯಾನವನ್ನೂ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು’ ಎಂದು ಶಿವಬಸವ ನಗರದ ನಿವಾಸಿ ಎಂ.ಪಿ. ಹಂಚನಮನಿ ಒತ್ತಾಯಿಸಿದರು.
ಪಾಲಿಕೆಯಿಂದಲೇ ನಿರ್ವಹಣೆ, ಶುಲ್ಕ
ಅಶೋಕ ನಗರದ ಕ್ರೀಡಾ ಸಂಕೀರ್ಣವನ್ನು ಪಾಲಿಕೆಯಿಂದಲೇ ನಿರ್ವಹಿಸಲು ತೀರ್ಮಾನಿಸಲಾಗಿದೆ. ಶೀಘ್ರವೇ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಲಾಗುವುದು. ಸೌಲಭ್ಯಗಳ ಬಳಕೆಗೆ ಶುಲ್ಕ ನಿಗದಿಪಡಿಸಲಾಗುವುದು.
– ರುದ್ರೇಶ ಘಾಳಿ, ಆಯುಕ್ತ, ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.