ಬೆಳಗಾವಿ: ಅಗ್ನಿಪಥ ಯೋಜನೆ ವಿರೋಧಿಸಿ ಸೋಮವಾರ ಬೆಳಗಾವಿ ಬಂದ್ ಕರೆ ನೀಡಿದ ಕಾರಣ, ನಗರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಬೆಳಿಗ್ಗೆಯೇ ಕ್ಷಿಪ್ರಕಾರ್ಯ ಪಡೆ, ನಗರ ಪೊಲೀಸರು, ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿಕೊಂಡು ನಗರದ ಪ್ರಮುಖ ವೃತ್ತ, ಚೌಕ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಪರೇಡ್ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮ ವೃತ್ತ, ಕಾಲೇಜ್ ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಕಿರ್ಲೋಸ್ಕರ್ಯ ರೋಡ್, ಖಡೇಬಜಾರ್ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಶಸ್ತ್ರಸಜ್ಜಿತ ಪಡೆಗಳು ಪಥಸಂಚಲನ ನಡೆಸಿದವು.
ಅಗ್ನಿಪಥ ವಿರೋಧಿಸಿ ಜೂನ್ 20ರಂದು ಬೆಳಗಾವಿ ಬಂದ್ ಮಾಡಲಾಗುವುದು, ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಟು ಪ್ರಚಾರ ನಡೆಸಿದ್ದಾರೆ. ಆದರೆ ಯಾವುದೇ ಪಕ್ಷ ಅಥವಾ ಸಂಘಟನೆ ಈ ಬಂದ್ ಕರೆ ನೀಡಿದ ಬಗ್ಗೆ ಹೇಳಿಲ್ಲ. ಉತ್ತರ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಿಂದಲೂ ಯುವಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ಮೆಸೇಜುಗಳನ್ನು ರವಾನಿಸಲಾಗಿದೆ.
ಹೀಗಾಗಿ, ನಗರದಲ್ಲಿ ಜನಜೀವನ ಎಂದಿನಂತೆ ಇತ್ತು. ಶಾಲೆ, ಕಾಲೇಜುಗಳು, ಸರ್ಕಾರಿ ಕಚೇರಿ, ಸಿನಿಮಾ ಥೇಟರುಗಳು ಎಂದಿನಂತೆ ಆರಂಭವಾದವು. ಸರ್ಕಾರದ ಬಸ್ಸುಗಳ ಓಡಾಟ ಸಹಜವಾಗಿದೆ.
ಆದರೆ, ಆಟೊ ಬೈಕ್, ಕಾರುಗಳ ಸಂಚಾರ ಕಡಿಮೆ ಇದೆ. ಉಳಿದಂತೆ ವ್ಯಾಪಾರ - ವಹಿವಾಟು ಎಂದಿನಂತೆ ಸಾಗಿದೆ. ಬಂದ್ ಬೆಂಬಲಿಸಿ ಕಾಲ ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಮುಚ್ಚಿದ್ದಾರೆ.
*
ಡ್ರೋನ್ ಕಣ್ಗಾವಲು
"ಬೆಳಗಾವಿಯಲ್ಲೆ ಬಂದ್ ಅಥವಾ ಪ್ರತಿಭಟನೆ ಮಾಡುವ ಬಗ್ಗೆ ಯಾರೂ ಅನುಮತಿ ಪಡೆದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಹರಿದಾಡುತ್ತಿದೆ. ಅಗತ್ಯ ಎಲ್ಲ ಸಿದ್ಧತೆ ಮಾಡಿಕೊಂದ್ದೇವೆ. ಕೆಎಸ್ ಆರ್ ಪಿ ಹಾಗೂ ಕ್ಷಿಪ್ರಕಾರ್ಯ ಪಡೆಯ ಪಹರೆ ನಡೆದಿದೆ. ಬಸ್ ನಿಲ್ದಾಣ, ರೈಲು ನಿಲ್ದಾಣ, ಪ್ರಮುಖ ವೃತ್ತಗಳಲ್ಲಿ ಡ್ರೋನ್ ಕ್ಯಾಮೆರಾ ಬಳಸಿ ಸ್ಥಿತಿಗತಿ ಮೇಲೆ ಕಣ್ಣಿಡಲಾಗಿದೆ. ಯಾರಾದರೂ ಕಾನೂನು ಉಲ್ಲಂಘಿಸಿದ್ದು ಕಂಡುಬಂದರೆ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ ಸ್ಥಳದಲ್ಲೇ ಬಂಧಿಸಲಾಗುವುದು" ಎಂದು ನಗರ ಪೊಲೀಸ್ ಕಮಿಷನ್‌ರ್ ಡಾ.ಬೋರಲಿಂಗಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.