ಬೆಳಗಾವಿ: ‘ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ಬೆಳಗಾವಿ- ಬೆಂಗಳೂರು ಮಧ್ಯೆ ಡಿ.20ರಿಂದ ಬೆಳಗಿನ ಅವಧಿಯಲ್ಲಿ ವಿಮಾನ ಸಂಚಾರ ಪುನರಾರಂಭ ಮಾಡುತ್ತಿರುವುದು ಸಂತಸ ತಂದಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ಮತ್ತು ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.
‘ನವದೆಹಲಿಯಲ್ಲಿ ಕಳೆದ ತಿಂಗಳು ಇಂಡಿಗೋ ಸಂಸ್ಥೆಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದೆ. ಡಿಸೆಂಬರ್‌ನಲ್ಲಿ ಮತ್ತೆ ಸೇವೆ ಆರಂಭಿಸುವುದಾಗಿ ಅವರು ಭರವಸೆ ಕೊಟ್ಟಿದ್ದರು. ನಿಗದಿತ ದಿನಾಂಕದಂದು ಹಾಗೂ ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಚಳಿಗಾಲ ಅಧಿವೇಶನಕ್ಕೂ ಮುನ್ನ, ಈ ಸೇವೆ ಆರಂಭಿಸಲು ಪ್ರಯತ್ನಿಸುತ್ತೇನೆ’ ಎಂದು ಶೆಟ್ಟರ್ ತಿಳಿಸಿದ್ದಾರೆ.
‘ವಿಮಾನಗಳ ಕೊರತೆಯಿಂದ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ಬೆಳಗಾವಿ-ಬೆಂಗಳೂರು ಮಧ್ಯೆ ಅ.28ರಿಂದ ಬೆಳಗಿನ ಅವಧಿಯಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಿತ್ತು. ನನ್ನ ಮನವಿ ಮೇರೆಗೆ ಈಗ ಸೇವೆ ಪುನರಾರಂಭಕ್ಕೆ ನಿರ್ಧರಿಸಿರುವುದು ಸ್ವಾಗತಾರ್ಹ. ವಾರದ ಎಲ್ಲ ದಿನವೂ ವಿಮಾನ ಸೇವೆ ಲಭ್ಯ ಇರಲಿದೆ’ ಎಂದು ಕಡಾಡಿ ಹೇಳಿದ್ದಾರೆ.
ಬೆಂಗಳೂರಿನಿಂದ ಬೆಳಿಗ್ಗೆ 6.30ಕ್ಕೆ ಹೊರಡಲಿರುವ ವಿಮಾನ, 8.10ಕ್ಕೆ ಬೆಳಗಾವಿಗೆ ತಲುಪಲಿದೆ. ಇಲ್ಲಿಂದ 8.30ಕ್ಕೆ ಹೊರಟು, 10ಕ್ಕೆ ಬೆಂಗಳೂರು ತಲುಪಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.