ADVERTISEMENT

ಬೆಳಗಾವಿ: ಬಡ ವಿದ್ಯಾರ್ಥಿಗಳ ಭರವಸೆ ‘ಸಿಇಟಿ–ಸಕ್ಷಮ’

ಎರಡೂ ಶೈಕ್ಷಣಿಕ ಜಿಲ್ಲೆಗಳ ಎಲ್ಲ 6,063 ವಿದ್ಯಾರ್ಥಿಗಳೂ ಮಾದರಿ ಪರೀಕ್ಷೆಗೆ ಹಾಜರು

ಸಂತೋಷ ಈ.ಚಿನಗುಡಿ
Published 10 ಅಕ್ಟೋಬರ್ 2024, 4:12 IST
Last Updated 10 ಅಕ್ಟೋಬರ್ 2024, 4:12 IST
ಚಿಕ್ಕೋಡಿ ತಾಲ್ಲೂಕಿನ ಮಜಲಟ್ಟಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ‘ಸಿಇಟಿ– ಸಕ್ಷಮ’ ಸಿದ್ಧತಾ ಪರೀಕ್ಷೆ
ಚಿಕ್ಕೋಡಿ ತಾಲ್ಲೂಕಿನ ಮಜಲಟ್ಟಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ‘ಸಿಇಟಿ– ಸಕ್ಷಮ’ ಸಿದ್ಧತಾ ಪರೀಕ್ಷೆ   

ಬೆಳಗಾವಿ: ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ರೂಪಿಸಿದ ‘ಸಿಇಟಿ– ಸಕ್ಷಮ’ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಗ್ರಾಮೀಣ, ಬಡ ವಿದ್ಯಾರ್ಥಿಗಳು ಕೂಡ ಸಿಇಟಿ–ನೀಟ್‌ಗಳಲ್ಲಿ ಉತ್ತಮ ರ್‍ಯಾಂಕ್‌ ಗಳಿಸಲು ಈ ವಿನೂತನ ಪ್ರಯೋಗ ಮಾಡಲಾಗಿದೆ. ಇದರಿಂದ ಜಿಲ್ಲೆಯ 6,063 ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿದೆ.

ಪ್ರಥಮ ಹಾಗೂ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌ ತರಬೇತಿ ನೀಡುವುದು, ಪ್ರತಿ ತಿಂಗಳು ಮಾದರಿ ಪರೀಕ್ಷೆ ನಡೆಸುವುದು ಇದರ ಉದ್ದೇಶ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಮಾದರಿಯಲ್ಲೇ ಈ ಸಿದ್ಧತಾ ಪರೀಕ್ಷೆ ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳಲ್ಲಿನ ಭಯ, ಗೊಂದಲ ನಿವಾರಣೆಗೂ ಇದು ಸಹಕಾರಿ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಇದರ ರೂವಾರಿ. ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗವಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 19 ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 15 ವಿಜ್ಞಾನ ಕಾಲೇಜುಗಳ ಸೇರಿ ಎಲ್ಲ 34 ಕಾಲೇಜುಗಳಲ್ಲಿ ಶೇ 100ರಷ್ಟು ಹಾಜರಾತಿ ಕಂಡುಬಂದಿದೆ.

ADVERTISEMENT

ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳ ಎರಡನೇ ಶನಿವಾರ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ನಾಲ್ಕನೇ ಶನಿವಾರ ಸಿದ್ಧತಾ ಪರೀಕ್ಷೆ ನಡೆಯುತ್ತವೆ. ಆಗಸ್ಟ್‌ 24ರಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು, ಈವರೆಗೆ ನಾಲ್ಕು ಪರೀಕ್ಷೆಗಳು ಯಶಸ್ವಿಯಾಗಿವೆ.

ನಾಲ್ಕು ಸಮಿತಿ: ಇದಕ್ಕಾಗಿ ನಾಲ್ಕು ಸಮಿತಿಗಳನ್ನೂ ರಚಿಸಲಾಗಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು ಮತ್ತು ಫಲಿತಾಂಶದ ವಿಶ್ಲೇಷಣೆಗೆ ಶೈಕ್ಷಣಿಕ ಸಮಿತಿ, ಪರೀಕ್ಷೆ ಅಚ್ಚುಕಟ್ಟಾಗಿ ನಡೆಸಲು ಆಡಳಿತ ಸಮಿತಿ, ಕೆಇಎ ಮಾದರಿಯಲ್ಲಿ ಒಎಂಆರ್‌ ಸ್ಕ್ಯಾನಿಂಗ್ ಕಾರ್ಯನಿರ್ವಹಣೆಗೆ ಒಎಂಆರ್‌ ಸಮಿತಿ, ಎಲ್ಲರೊಂದಿಗೆ ಸಂವಹನ ಸಾಧಿಸಲು ಸಮನ್ವಯ ಸಮಿತಿ ಇವೆ. ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ ಈ ಸಮಿತಿಗಳ ಸಮನ್ವಯಕಾರ ಆಗಿದ್ದಾರೆ.

ಈ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ರಾಜ್ಯದ ಎಲ್ಲ ಕಡೆ ಇದನ್ನು ಜಾರಿ ಮಾಡುವುದಾಗಿ ಹೇಳಿದ್ದಾರೆ. ಈಗಾಗಲೇ ಬೇರೆಬೇರೆ ಜಿಲ್ಲೆಗಳ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮತ್ತು  ಉಪನ್ಯಾಸಕರು ಭೇಟಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ‘ಸಿಇಟಿ– ಸಕ್ಷಮ’ ಮಾದರಿ ಪರೀಕ್ಷೆಯ ನೋಟ
ಸಿಇಟಿ ನೀಟ್‌ ಮಾತ್ರವಲ್ಲ; ಭವಿಷ್ಯದಲ್ಲಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪರಿಣತಿ ಹಾಗೂ ಮಾನಸಿಕ ಸ್ಥೈರ್ಯ ಬೆಳೆಸಲು ಈ ಪ್ರಯೋಗ ಮಾಡಲಾಗುತ್ತಿದೆ
ರಾಹುಲ್ ಶಿಂಧೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪಂ ಬೆಳಗಾವಿ
ಸಿಇಟಿ ನೀಟ್‌ಗೆ ಸಂಬಂಧಿಸಿದ ಪುಸ್ತಕಗಳು ಪ್ರಶ್ನೆಗಳ ಬ್ಯಾಂಕ್‌ ತುಂಬ ಸಹಕಾರಿ. ಈ ಮಾದರಿ ಪರೀಕ್ಷೆ ಎದುರಿಸಿದ ಅನುಭವ ಭವಿಷ್ಯವನ್ನು ರೂಪಿಸಲಿದೆ ಅನ್ನಿಸುತ್ತಿದೆ
ಶ್ರೇಯಸ್‌ ಪಾಟೀಲ ವಿದ್ಯಾರ್ಥಿ ಸರ್ಕಾರಿ ಪಿಯು ಕಾಲೇಜು ಮಜಲಟ್ಟಿ ಚಿಕ್ಕೋಡಿ
ಸಿಇಟಿ ನೀಟ್‌ ಕೋಚಿಂಗ್‌ಗೆ ಅಪಾರ ಹಣ ಸುರಿಯಬೇಕು. ನನ್ನಂಥ ಬಡ ವಿದ್ಯಾರ್ಥಿಗಳಿಗೆ ಇದು ಅಸಾಧ್ಯ. ಆದರೆ ಸಿಇಟಿ– ಸಕ್ಷಮದಿಂದ ಮಾನಸಿಕ ಸ್ಥೈರ್ಯ ವೃದ್ಧಿಸಿದೆ
ಗೌರಿ ಮಹಾಂತೇಶ ಹಾವನ್ನವರ ವಿದ್ಯಾರ್ಥಿನಿ ಸರ್ಕಾರಿ ಸರಸ್ವತಿ ಮಹಿಳಾ ಪಿಯು ಕಾಲೇಜು ಬೆಳಗಾವಿ

ಹೀಗೆ ನಡೆಯುತ್ತವೆ ಪರೀಕ್ಷೆ

ವಿಷಯವಾರು ಬೋಧಿಸಲಾದ ಪಠ್ಯಗಳವರೆಗೆ ಮಾತ್ರ ಪ್ರಶ್ನೆಗಳನ್ನು ನೀಡಲಾಗುತ್ತದೆ. ಸಿಇಟಿ ನೀಟ್‌ಗೆ ಈಗಾಗಲೇ ಜಾರಿಯಲ್ಲಿರುವ ಮಾದರಿಯಲ್ಲೇ ಒಎಂಆರ್‌ ಶೀಟ್‌ ಸಿದ್ಧಪಡಿಸಲಾಗುತ್ತದೆ. ಶನಿವಾರ ಪರೀಕ್ಷೆ ಭಾನುವಾರ ಮೌಲ್ಯಮಾಪನ ಜಿಲ್ಲೆ ಮತ್ತು ತಾಲ್ಲೂಕುವಾರು ಕಾಲೇಜುವಾರು ರ್‍ಯಾಂಕಿಂಗ್‌ ನೀಡಲಾಗುತ್ತದೆ. ಕಡಿಮೆ ಅಂಕ ಗಳಿಸಿದವರಿಗೆ ಆಯಾ ಕಾಲೇಜಿನ ವಿಷಯ ಉಪನ್ಯಾಸಕರೇ ಮರು ತರಬೇತಿ ನೀಡಬೇಕು. ಸಮರ್ಪಕವಾಗಿ ಉತ್ತರಿಸದ ವಿಷಯಗಳ ಬಗ್ಗೆ ಪುನರ್‌ಮನನ ಮಾಡಿಸಲಾಗುತ್ತದೆ. ಪ್ರತಿ ಮಂಗಳವಾರ ಸಂದೇಹ ನಿವಾರಣಾ ತರಗತಿ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.