ADVERTISEMENT

ಬೆಳಗಾವಿ | ಮಕ್ಕಳ ಅಪಹರಣ: ಆರೋಪಿ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 13:08 IST
Last Updated 25 ಅಕ್ಟೋಬರ್ 2024, 13:08 IST
<div class="paragraphs"><p>ಅಥಣಿಯಲ್ಲಿ ಗುರುವಾರ ರಾತ್ರಿ ಅಪಹರಣಕ್ಕೆ ಒಳಗಾಗಿದ್ದ ಮಕ್ಕಳನ್ನು ರಕ್ಷಣೆ ಮಾಡಿದ ಪೊಲೀಸರು ಶುಕ್ರವಾರ ಪಾಲಕರಿಗೆ&nbsp;ಒಪ್ಪಿಸಿದರು</p><p></p></div>

ಅಥಣಿಯಲ್ಲಿ ಗುರುವಾರ ರಾತ್ರಿ ಅಪಹರಣಕ್ಕೆ ಒಳಗಾಗಿದ್ದ ಮಕ್ಕಳನ್ನು ರಕ್ಷಣೆ ಮಾಡಿದ ಪೊಲೀಸರು ಶುಕ್ರವಾರ ಪಾಲಕರಿಗೆ ಒಪ್ಪಿಸಿದರು

   

ಅಥಣಿ (ಬೆಳಗಾವಿ ಜಿಲ್ಲೆ): ಮಕ್ಕಳನ್ನು ಅಪಹರಣ ಮಾಡಿ, ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ನೀಡಿ ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಗಾಯಗಳಾಗಿವೆ.

ADVERTISEMENT

ಅಥಣಿಯ ಹುಲಗಬಾಳ ರಸ್ತೆಯ ಸ್ವಾಮಿ ಪ್ಲಾಟ್‌ನ ಮನೆಯಲ್ಲಿ ಆಡುತ್ತಿದ್ದ ವಿಜಯ ದೇಸಾಯಿ ಅವರ ಮಕ್ಕಳಾದ ಸ್ವಸ್ತಿಕ್‌ (4) ಮತ್ತು ವಿಯೋಮ್ (3) ಅವರನ್ನು ಮೂವರ ತಂಡ ಗುರುವಾರ ಅಪಹರಿಸಿತ್ತು. ಇದರ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ಮಾಹಿತಿ ಆಧರಿಸಿ ಮಕ್ಕಳ ಪತ್ತೆಗೆ ತೆರಳಿದ ಪೊಲೀಸರ ತಂಡಕ್ಕೆ, ಮಹಾರಾಷ್ಟ್ರದ ಜತ್ತ ಗಡಿಯಲ್ಲಿ ಆರೋಪಿಗಳು ಪತ್ತೆಯಾದರು. ಶುಕ್ರವಾರ ನಸುಕಿನ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಲು ಸುತ್ತವರಿದರು. ಎಚ್ಚೆತ್ತುಕೊಂಡ ಆರೋಪಿಗಳು ಪೊಲೀಸರತ್ತ ಕಲ್ಲು ತೂರಿ ಪರಾರಿಯಾಗಲು ಯತ್ನಿಸಿದರು.

ಈ ವೇಳೆ ಪೊಲೀಸರು ಅವರತ್ತ ಗುಂಡು ಹಾರಿಸಿದರು. ಮುಖ್ಯ ಆರೋಪಿ ಕೊಲ್ಹಾಪುರ ಸಾಂಬಾ ಕಾಂಬಳೆ ಕಾಲಿಗೆ ಗುಂಡು ತಗಲಿತು. ಇನ್ನಿಬ್ಬರು ಆರೋಪಿಗಳಾದ ಚಿಕ್ಕೋಡಿ ತಾಲ್ಲೂಕು ಅಂಕಲಿ ಗ್ರಾಮದ ರವಿಕಿರಣ ಕಮಲಾಕರ ಹಾಗೂ ಬಿಹಾರದ ಶಾರೂಖ್‌ ಶೇಖ್‌ ಅವರೂ ಸಿಕ್ಕಿಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಪಿಐ ಸಂತೋಷ ಹಳ್ಳೂರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ, ಸಿಬ್ಬಂದಿಯಾದ ರಮೇಶ ಹಾದಿಮನಿ, ಜಮೀರ ಡಾಂಗೆ ಅವರಿಗೆ ಆರೋಪಿಗಳು ತೂರಿದ ಕಲ್ಲಿನಿಂದ ಗಾಯಗಳಾಗಿವೆ. ಎಲ್ಲರಿಗೂ ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಕ್ಕಳ ಅಪಹರಣ ಮಾಡಿದ ಕೆಲವೇ ಗಂಟೆಗಳನ್ನು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಯಾರಿಗೂ ಪ್ರಾಣ ಹಾನಿ ಆಗಿಲ್ಲ. ಮಕ್ಕಳೂ ಸುರಕ್ಷಿತವಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.

ವಿಜಯ ದೇಸಾಯಿ ಹಾಗೂ ಆರೋಪಿಗಳ ಮಧ್ಯೆ ಇದ್ದ ಹಣಕಾಸಿನ ವ್ಯವಹಾರವೇ ಘಟನೆಗೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರ ಗುಂಡಿನಿಂದ ಗಾಯಗೊಂಡ ಮಕ್ಕಳ ಅಪಹರಣ ಆರೋಪಿ ಸಾಂಬಾ ಕಾಂಬಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.