ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಜಟಾಪಟಿ ಗುರುವಾರ ತಡರಾತ್ರಿ ಮತ್ತೊಂದು ತಿರುವು ಪಡೆಯಿತು. ಬಿಜೆಪಿಯಲ್ಲಿನ ಮರಾಠಿ ಮುಖಂಡರು ಹಾಗೂ ಕಾಂಗ್ರೆಸ್ ಪರ ನಿಂತ ಎಂಇಎಸ್ ಮುಖಂಡರು ಜೀವ ಬೆದರಿಕೆ ಒಡ್ಡಿದ ಆರೋಪಗಳೂ ಕೇಳಿಬಂದವು.
ಮಹಾನಗರ ಪಾಲಿಕೆ ಆಯುಕ್ತರಿಗೆ ಶಾಸಕ ಅಭಯ ಪಾಟೀಲ ಹಾಗೂ ಬಿಜೆಪಿಯ ಸದಸ್ಯರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಬುಧವಾರ ಬೃಹತ್ ಹೋರಾಟ ನಡೆಸಿದ್ದರು. ಇದರಲ್ಲಿ ಎಂಇಎಸ್ ಮುಖಂಡ ರಮಾಕಾಂತ ಕೊಂಡೂಸ್ಕರ್ ನೇತೃತ್ವದಲ್ಲಿ ಹಲವರು ಭಾಗಿಯಾದರು. ಇದು ಬಿಜೆಪಿಯಲ್ಲಿರುವ ಪಾಲಿಕೆಯ ಮರಾಠಿ ಭಾಷಿಕ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು.
ಅಲ್ಲದೇ, ಬುಡಾದಲ್ಲಿ ಬ್ರಷ್ಟಾಚಾರದ ಬಗ್ಗೆಯೂ ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದರು.
'ಈ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮಾತ್ರ ಸಂಬಂಧಿಸಿದ್ದು. ಆದರೆ ಎಂಇಎಸ್ ಮುಖಂಡರು ಏಕೆ ಮಧ್ಯದಲ್ಲಿ ಮೂಗು ತೂರಿಸುತ್ತಿದ್ದಾರೆ? ಎಂಇಎಸ್- ಕಾಂಗ್ರೆಸ್ಸಿನಲ್ಲಿ ಸೇರ್ಪಡೆ ಆಗಿದೆ' ಎಂದು ಬಿಜೆಪಿ ಮುಖಂಡ, ಪಾಲಿಕೆ ಸದಸ್ಯ ರವಿ ಭಾತಖಾಂಡೆ ಆರೊಪಿಸಿದ್ದರು. ವಿಡಿಯೂ ಹೇಳಿಕೆಯನ್ನು ಫೇಸಬುಕ್ಕಿನಲ್ಲಿ ಹರಿಬಿಟ್ಟಿದ್ದರು.
ಇದರಿಂದ ಆಕ್ರೋಶಗೊಂಡ ರಮಾಕಾಂತ ಕೊಂಡೂಸ್ಕರ್ ಹಾಗೂ ಅವರ ಸಹವರ್ತಿಗಳು ರವಿ ಭಾತಖಾಂಡೆ ಹಾಗೂ ಅವರ ಸಹವರ್ತಿಗಳ ವಿರುದ್ಧ ಸಿಡಿದು ನಿಂತರು.
'ಗುರುವಾರ ರಾತ್ರಿ 8ರ ಸುಮಾರಿಗೆ ನಮ್ಮ ಮಾಧವ ನಗರದ ಮನೆಯ ಸುತ್ತ ಸುಮಾರು 150 ಜನ ಎಂಇಎಸ್ ಮುಖಂಡರು ದಾಳಿಗೆ ಬಂದರು. ರಮಾಕಾಂತ ಅವರಿಗೆ ಅವಮಾನ ಮಾಡಿದ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದರು. ಫೋನಿನಲ್ಲೂ ಜೀವ ಬೆದರಿಕೆ ಹಾಕಿದರು. ಆಗ ನಮ್ಮ ಕಡೆಯವರೂ ಅಪಾರ ಸಂಖ್ಯೆಯಲ್ಲಿ ಸೇರಬೇಕಾಯಿತು. ಆಗ ಸ್ಥಳಕ್ಕೆ ಧಾವಿಸಿದ ಪೊಲೀಸರು ಎರಡೂ ಕಡೆಯವರನ್ನು ದೂರ ಕಳಿಸಿದರು. ಇವರಿಂದ ನನಗೆ ಜೀವ ಬೆದರಿಕೆ ಇದೆ. ರಕ್ಷಣೆ ಕೋರಿ ದೂರು ದಾಖಲಿಸಿದ್ದೇನೆ' ಎಂದು ರವಿ ಭಾತಖಾಂಡೆ ಹೇಳಿದರು.
ಇದಕ್ಕೂ ಮುನ್ನ ಮಾರ್ಕೆಟ್ ಠಾಣೆಗೆ ಬಂದ ರಮಾಕಾಂತ ಕೊಂಡೂಸ್ಕರ್, 'ನಾನು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಪಾಲಿಕೆ ಹಾಗೂ ಬುಡಾದಲ್ಲಿ ನಡೆದ ಅಕ್ರಮಗಳನ್ನು ಪ್ರಶ್ನಿಸದ್ದೇನೆ. ಶಾಸಕರಿಗೆ ಮನವಿ ನೀಡಿದ್ದೇನೆ. ಹೋರಾಟ ಮಾಡಿದ್ದೇನೆ. ಇದನ್ನೇ ಮುಂದಿಟ್ಟುಕೊಂಡು ರವಿ ಭಾಐಖಾಂಡೆ ಹಾಗೂ ಕೆಲವರ ಬಿಜೆಪಿ ಮುಖಂಡರು ನನಗೆ ಅವಮಾನ ಮಾಡಿದ್ದಾರೆ. ಇದನ್ನು ಪ್ರಶ್ನಿಸಲು ಅವರ ಬಳಿ ಹೋಗಿದ್ದೇವು. ಅದನ್ನೇ ದೊಡ್ಡ ಅಪರಾಧದಂತೆ ಬಿಂಬಿಸಿದ್ದಾರೆ' ಎಂದರು.
'ಪೊಲೀಸರು ನನ್ನನ್ನು ಠಾಣೆಗೆ ಕರೆತಂದಿದ್ದಾರೆ. ನಾನು ದೂರು ನೀಡಿಲ್ಲ' ಎಂದರು.
'ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಅಭಯ ಪಾಟೀಲ ವಿರುದ್ಧ ಸ್ಪರ್ಧಿಸಿ 65ಸಾವಿರ ಮತ ಪಡೆದಿದ್ದೇನೆ. ಆ ಜನರಿಗಾಗಿ ನಾನು ಹೋರಾಟ ಮುಂದುವರಿಸುತ್ತೇನೆ’ ಎಂದೂ ಸವಾಲು ಹಾಕಿದರು.
ರಮಾಕಾಂತ ರಾತ್ರಿ 12ರ ನಂತರ ಠಾಣೆಯಿಂದ ತೆರಳಿದರು.
ನಂತರ ಬಂದ ರವಿ ಭಾತಖಾಂಡೆ ಹಾಗೂ ಇತರ ಐವರು ನಗರಸೇವಕರು ರಾತ್ರಿ 1ರವರೆಗೂ ಠಾಣೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.