ಬೆಳಗಾವಿ: ಇಲ್ಲಿನ ವಡ್ಡರವಾಡಿ ಪ್ರದೇಶದಲ್ಲಿ ಮಹಿಳೆಯರಿಬ್ಬರನ್ನು ರಸ್ತೆಗೆ ಎಳೆದು ತಂದು ಬಟ್ಟೆ ಹರಿದು ಹಲ್ಲೆ ಮಾಡಿದ ಪ್ರಕರಣ ತಡವಾಗಿ ಗೊತ್ತಾಗಿದೆ. ಕಳೆದ ಸೋಮವಾರ (ನ.11) ರಾತ್ರಿ ಘಟನೆ ನಡೆದಿದೆ. ಶನಿವಾರ ಇದರ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇಂದ್ರಾ ಅಷ್ಟೇಕರ್, ಹೂವಪ್ಪ ಅಷ್ಟೇಕರ್, ಮಣಿಕಂಠ ಅಷ್ಟೇಕರ್ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಆರೋಪಿಗಳು ಎಂದು ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಾಗಿದೆ.
ವಡ್ಡರವಾಡಿಯ ಮಹಿಳೆಯೊಬ್ಬರನ್ನು ಮಹಾರಾಷ್ಟ್ರಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಮನೆಯಲ್ಲಿ ಕಿರುಕುಳ ಹೆಚ್ಚಾಗಿದ್ದರಿಂದ ತವರಿಗೆ ಬಂದ ಮಹಿಳೆ, ತಾಯಿಯ ಜತೆಗೆ ವಾಸವಾಗಿದ್ದರು. ಅವರ ಪರಿಚಯಸ್ಥರು ಪದೇಪದೇ ಮನೆಗೆ ಬರುತ್ತಿರುವುದನ್ನು ಕಂಡು, ವೇಶ್ಯಾವಾಟಿಕೆ ನಡೆಸುತ್ತಿರುವ ಅನುಮಾನದಿಂದ ಮೂವರೂ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆಯರು ದೂರಿನಲ್ಲಿ ತಿಳಿಸಿದ್ದಾರೆ.
ಸೋಮವಾರ ರಾತ್ರಿ ಮನೆಗೆ ನುಗ್ಗಿದ ಆರೋಪಿಗಳು ತಮ್ಮ ತಾಯಿಯ ಕೂದಲು ಹಿಡಿದು ಹೊರಗೆ ಎಳೆದು ತಂದರು. ನನ್ನನ್ನೂ ಎಳೆದಾಡಿ ಬಟ್ಟೆ ಹರಿದರು. ವಿವಸ್ತ್ರಗೊಳಿಸಿ ಹಲ್ಲೆ ಮಾಡಿದರು ಎಂದೂ ಮಹಿಳೆ ನೀಡಿದ ದೂರಿನಲ್ಲಿದೆ.
ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ರೋಹನ್ ಜಗದೀಶ್, ‘ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮೂವರು ಹಲ್ಲೆ ಮಾಡಿದ್ದಾರೆ. ಇಂಥ ಘಟನೆ ನಡೆಯಬಾರದಿತ್ತು. ಆರೋಪಿಗಳನ್ನು ಬಂಧಿಸಲು ಮತ್ತು ಘಟನೆಯ ಸಂಪೂರ್ಣ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಿದ್ದೇವೆ’ ಎಂದರು.
’ಘಟನೆ ನಡೆದು ಐದು ದಿನಗಳಾಗಿದೆ. ಮಾಳಮಾರುತಿ ಠಾಣೆಗೆ ಹೋದರೆ ಅವರು ದೂರು ಸ್ವೀಕರಿಸಲಿಲ್ಲ. ವಿಳಂಬ ಮಾಡಿದರು ಎಂದು ಮಹಿಳೆಯರು ದೂರಿದ್ದಾರೆ. ಈ ವಿಷಯವನ್ನೂ ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಪೊಲೀಸರು ದೂರು ಪಡೆಯಲು ನಿರಾಕರಿಸಿದ್ದು ಕಂಡುಬಂದರೆ ಕಠಿಣ ಕ್ರಮ ಜರುಗಿಸುತ್ತೇವೆ. ಅಲ್ಲದೇ, ಮಹಿಳೆಯರಿಬ್ಬರಿಗೂ ರಕ್ಷಣೆ ನೀಡಲು ಕೆಲವು ದಿನ ಪೊಲೀಸ್ ಕಾವಲು ಒದಗಿಸುತ್ತೇವೆ’ ಎಂದೂ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.