ADVERTISEMENT

ಕರ್ನಾಟಕ ಏಕೀಕರಣಕ್ಕೆ ಬೆಳಗಾವಿ ಕೊಡುಗೆ ಅಪಾರ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 9:29 IST
Last Updated 1 ನವೆಂಬರ್ 2023, 9:29 IST
   

ಬೆಳಗಾವಿ: ‘ಕರ್ನಾಟಕ ಏಕೀಕರಣಕ್ಕೆ ಬೆಳಗಾವಿ ಕೊಡುಗೆ ಅಪಾರ. ಏಕೀಕರಣ ಚಳವಳಿಯಲ್ಲಿ ಕ್ರಿಯಾಶೀಲವಾಗಿ ಹೋರಾಡಿದ ಜಿಲ್ಲೆಯ ಹಲವು ಮಹನೀಯರನ್ನು ಸದಾ ಸ್ಮರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಕರ್ನಾಟಕ ಏಕೀಕರಣಕ್ಕೆ ಡೆಪ್ಯುಟಿ ಚನ್ನಬಸಪ್ಪ, ಬೈಲಹೊಂಗಲದ ಗಂಗಾಧರ ತುರಮರಿ, ಹುದಲಿಯ ಗಂಗಾಧರರಾವ್‌ ದೇಶಪಾಂಡೆ, ಚಿಂಚಲಿಯ ಆರ್‌.ಎಸ್‌.ಹುಕ್ಕೇರಿ, ನಾಗನೂರಿನ ಶಿವಬಸವ ಸ್ವಾಮೀಜಿ, ಗೋಕಾವಿ ನಾಡಿನ ಬೆಟಗೇರಿ ಕೃಷ್ಣಶರ್ಮ, ಸವದತ್ತಿಯ ಶಂ.ಬಾ.ಜೋಶಿ, ಅಥಣಿಯ ಬಿ.ಎನ್‌.ದಾತಾರ, ಕುಂದರನಾಡಿನ ಅಣ್ಣೂ ಗುರೂಜಿ, ದತ್ತೋಪಂತ ಬೆಳವಿ, ಸಂಪಗಾವಿಯ ಚನ್ನಬಸಪ್ಪ ವಾಲಿ ಅವರ ಕೊಡುಗೆ ಅವಿಸ್ಮರಣೀಯ’ ಎಂದು ಶ್ಲಾಘಿಸಿದರು.

ADVERTISEMENT

‘ಗೋವಾ, ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡ ಬೆಳಗಾವಿಯ ಸಂಸ್ಕೃತಿ ವೈಶಿಷ್ಟ್ಯಪೂರ್ಣವಾಗಿದೆ. ವೈವಿಧ್ಯತೆಯಲ್ಲಿ ಏಕತೆ ಸಾರುವ ದೇಶದ ಸಂಸ್ಕೃತಿಯನ್ನು ಇಲ್ಲಿ ಕಾಣಬಹುದು’ ಎಂದ ಸತೀಶ, ‘ಸಮೃದ್ಧ ಮತ್ತು ಬಲಿಷ್ಠ ಕರ್ನಾಟಕ ನಿರ್ಮಾಣಕ್ಕೆ ನಾವೆಲ್ಲರೂ ದೃಢಸಂಕಲ್ಪ ಮಾಡಬೇಕಿದೆ. ನಾಡಿನ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲು ಕಂಕಣಬದ್ಧರಾಗಬೇಕಿದೆ’ ಎಂದು ಕರೆ ನೀಡಿದರು.

‘ಕನ್ನಡ ನಾಡು ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಸಂಗಮವಾಗಿದೆ. ಪ್ರಾಚೀನ ಕಾಲದಿಂದಲೂ ತನ್ನದೇಯಾದ ಸಾಂಸ್ಕೃತಿಕ ಪರಂಪರೆ ಬೆಳೆಸಿಕೊಂಡು ಬಂದಿದೆ. ಸಾಮರಸ್ಯವೇ ಕನ್ನಡ ಸಂಸ್ಕೃತಿಯ ಜೀವಾಳ. ಇದು ಸಹಬಾಳ್ವೆ, ಸೌರ್ಹಾದತೆ ಮತ್ತು ಭಾವೈಕ್ಯತೆಯ ತವರು ಮನೆಯಾಗಿದೆ’ ಎಂದು ಶ್ಲಾಘಿಸಿದರು.

‘ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದಿಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪುವರೆಗೂ ಮಹಾನ್ ಕವಿಗಳು ಕನ್ನಡ ಭಾಷೆಯಲ್ಲಿ ನೂರಾರು ಮಹತ್ವದ ಕೃತಿ ರಚಿಸಿದ್ದಾರೆ. ಇಡೀ ವಿಶ್ವದ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದೆ’ ಎಂದು ಪ್ರಶಂಸಿಸಿದರು.

‘ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೆ ಹೋರಾಡಿದ ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನವರೇ ಎಂಬುದು ಹೆಮ್ಮೆಯ ಸಂಗತಿ. ಪ್ರಥಮ ಮಹಿಳಾ ಸೈನ್ಯ ಕಟ್ಟಿದ ಬೆಳವಡಿ ಮಲ್ಲಮ್ಮ ನಾಡಿನ ಧೀಮಂತ ಶಕ್ತಿ’ ಎಂದು ಹೇಳಿದರು.

ಮೇಯರ್‌ ಶೋಭಾ ಸೋಮನಾಚೆ, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಆಸೀಫ್‌ ಸೇಠ್‌, ವಿಧಾನ ಪರಿಷತ್‌ ಸದಸ್ಯ ಸಾಬಣ್ಣ ತಳವಾರ, ಉಪಮೇಯರ್‌ ರೇಷ್ಮಾ ಪಾಟೀಲ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೊಯರ್‌, ಉತ್ತರ ವಲಯ ಐಜಿಪಿ ವಿಕಾಶಕುಮಾರ್‌ ವಿಕಾಶ್‌, ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌.ಸಿದ್ದರಾಮಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇತರರಿದ್ದರು.

ಪೊಲೀಸ್‌, ಗೃಹರಕ್ಷಕ ದಳ, ಅಬಕಾರಿ ಇಲಾಖೆ ಮತ್ತು ವಿವಿಧ ಶಾಲಾ–ಕಾಲೇಜುಗಳ ತಂಡದವರು ಆಕರ್ಷಕ ಪಥಸಂಚಲನ ನಡೆಸಿದರು. ಈ ಗೀತೆಗಳನ್ನು ಹಾಡುವ ಮೂಲಕ ಕನ್ನಡಾಂಬೆಗೆ ಗೀತ ಗಾಯನದ ಮೂಲಕ ನಮನ ಸಲ್ಲಿಸಲಾಯಿತು.

ನುಡಿದಂತೆ ನಡೆದಿದ್ದೇವೆ

‘ಗ್ಯಾರಂಟಿ ಯೋಜನೆಗಳನ್ನು ಕಡಿಮೆ ಅವಧಿಯಲ್ಲೇ ಅನುಷ್ಠಾನಗೊಳಿಸಿ, ನುಡಿದಂತೆ ನಡೆದಿದ್ದೇವೆ’ ಎಂದು ಸತೀಶ ಜಾರಕಿಹೊಳಿ ಹೇಳಿದರು.

‘ಬೆಳಗಾವಿಯಲ್ಲಿ ಹೊಸ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕಾಗಿ 10 ಎಕರೆ ಜಾಗ ಗುರುತಿಸಲಾಗಿದೆ. ಈ ಯೋಜನೆಗೆ ₹10 ಕೋಟಿ ಅನುದಾನ ಕೊಟ್ಟಿದ್ದೇವೆ. ಪ್ರತಿವರ್ಷ ₹10 ಕೋಟಿಯಂತೆ ₹50 ಕೋಟಿ ನೀಡಲಾಗುವುದು. ಗೋಕಾಕದ ಕ್ರೀಡಾಂಗಣದಲ್ಲಿ ಫ್ಲಡ್‌ಲೈಟ್‌ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

‘ಈ ಬಾರಿ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯದಲ್ಲಿ 37 ಟಿಎಂಸಿ ಅಡಿ ಮತ್ತು ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದಲ್ಲಿ 12 ಟಿಎಂಸಿ ಅಡಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಕಾಯ್ದಿರಿಸುತ್ತೇವೆ’ ಎಂದು ತಿಳಿಸಿದರು.

25 ಸಾಧಕರಿಗೆ ಸನ್ಮಾನ

ಕನ್ನಡ ಹೋರಾಟಗಾರರು, ಪತ್ರಕರ್ತರು, ಸಂಗೀತಗಾರರು, ಕ್ರೀಡಾಪಟುಗಳು ಸೇರಿದಂತೆ ವಿವಿಧ ಕ್ಷೇತ್ರಗಳ 25 ಸಾಧಕರನ್ನು ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಲಾಯಿತು.

ಪತ್ರಕರ್ತರಾದ ನೌಶಾದ್ ಬಿಜಾಪುರ, ಕೀರ್ತನಕುಮಾರಿ ಕಾಸರಗೋಡು, ಚಂದ್ರಕಾಂತ ಸುಗಂಧಿ, ಶ್ರೀಧರ ಕೋಟಾರಗಸ್ತಿ, ಸಲೀಮ್‌ ಧಾರವಾಡಕರ, ಯಲ್ಲಪ್ಪ ತಳವಾರ, ಛಾಯಾಗ್ರಾಹಕರಾದ ಪಿ.ಕೆ.ಬಡಿಗೇರ, ಸುನೀಲ ಗಾವಡೆ ಹಾಗೂ ಪತ್ರಿಕಾ ವಿತರಕ ಶಿವಾನಂದ ವಾಗೂಡೇಕರ್, ಕನ್ನಡ ಹೋರಾಟಗಾರರಾದ ಪಂಚಾಕ್ಷರಿ ಹಿರೇಮಠ, ರಾಜು ಭಾವಿ, ಭಾವಕಣ್ಣ ಭಂಗ್ಯಾಗೋಳ, ಸುರೇಶ ಗವನ್ನವರ, ಬಾಳು ಜಡಗಿ, ಮಲ್ಲೇಶ ಚೌಗಲೆ, ಮಹಾಂತೇಶ ತುರಮರಿ ಮತ್ತಿತರರನ್ನು ಸನ್ಮಾನಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.