ADVERTISEMENT

ಬೆಳಗಾವಿ ಪಾಲಿಕೆ: ನಾಯಿಗಳ ನಿರ್ವಹಣೆಗೆ ₹1.10 ಕೋಟಿ, ನೀರಿಗೆ ₹25 ಲಕ್ಷ ಮೀಸಲು!

ವಿರೋಧ ಪಕ್ಷಗಳ ಗದ್ದಲದ ನಡುವೆಯೂ ₹7.72 ಲಕ್ಷ ಉಳಿತಾಯದ ಬಜೆಟ್‌ ಮಂಡನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 4:46 IST
Last Updated 28 ಫೆಬ್ರುವರಿ 2024, 4:46 IST
<div class="paragraphs"><p>ಬೆಳಗಾವಿ ಮೇಯರ್‌ ಸವಿತಾ ಕಾಂಬಳೆ (ಮಧ್ಯದವರು), ಉಪ ಮೇಯರ್‌ ಆನಂದ ಚವ್ಹಾಣ ಹಾಗೂ ಹಣಕಾಸು, ತೆರಿಗೆ, ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ ಅವರು ಮಂಗಳವಾರ ಬಜೆಟ್‌ ಮಂಡನೆಗೆ ತೆರಳಿದರು </p></div>

ಬೆಳಗಾವಿ ಮೇಯರ್‌ ಸವಿತಾ ಕಾಂಬಳೆ (ಮಧ್ಯದವರು), ಉಪ ಮೇಯರ್‌ ಆನಂದ ಚವ್ಹಾಣ ಹಾಗೂ ಹಣಕಾಸು, ತೆರಿಗೆ, ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ ಅವರು ಮಂಗಳವಾರ ಬಜೆಟ್‌ ಮಂಡನೆಗೆ ತೆರಳಿದರು

   

–ಪ್ರಜಾವಾಣಿ ಚಿತ್ರ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ಮಂಡನೆಯಾದ ಬಜೆಟ್‌ನಲ್ಲಿ ಕಾಣಸಿಗುವ ಪ್ರಮುಖ ಮೂರು ಅಂಶಗಳಿವು.

ADVERTISEMENT

ಈ ಬಾರಿ ಬರಗಾಲ ಎದುರಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅದಕ್ಕೆ ಆದ್ಯತೆ ನೀಡುವ ಬದಲಾಗಿ, ಅಧ್ಯಯನ ಪ್ರವಾಸಕ್ಕೆ ಮಹತ್ವ ನೀಡಿದ್ದು ವಿಪಕ್ಷದವರನ್ನು ಕೆರಳಿಸಿದೆ.

ಮೇಯರ್‌ ಸವಿತಾ ಕಾಂಬಳೆ ಅಧ್ಯಕ್ಷತೆಯಲ್ಲಿ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ ₹436.53 ಕೋಟಿ ಅಂದಾಜು ವೆಚ್ಚದ ಬಜೆಟ್‌ ಮಂಡಿಸಿದರು. ಪ್ರತಿಪಕ್ಷದ ವಿರೋಧದ ಮಧ್ಯೆಯೂ, ₹7.72 ಲಕ್ಷ ಉಳಿತಾಯದ ಬಜೆಟ್‌ ಮಂಡಿಸಲಾಯಿತು.

‘ಎಲ್ಲ ವರ್ಗಗಳ ಹಿತ ಗಮನದಲ್ಲಿ ಇರಿಸಿಕೊಂಡು ರೂಪಿಸಿದ ಬಜೆಟ್‌, ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. 2024–25ನೇ ಸಾಲಿನಲ್ಲಿ ₹436.61 ಕೋಟಿ ಆದಾಯ ನಿರೀಕ್ಷಿಸಲಾಗಿದೆ’ ಎಂದು ವೀಣಾ ಹೇಳಿದರು.

‘ಬೆಳಗಾವಿಯನ್ನು ಸುಂದರ ನಗರವನ್ನಾಗಿಸಲು ಜನಪರವಾದ ಕಾರ್ಯಕ್ರಮ ರೂಪಿಸಿದ್ದೇವೆ. ಹಿಂದುಳಿದ ವರ್ಗದವರು, ಪರಿಶಿಷ್ಟ ಸಮುದಾಯದವರು, ಹಿರಿಯ ನಾಗರಿಕರು, ಮಹಿಳೆಯರು, ಶಾಲಾ ಮಕ್ಕಳು ಹಾಗೂ ಅಂಗವಿಕಲರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆ ಹಮ್ಮಿಕೊಂಡಿದ್ದೇವೆ. ಸ್ಮಾರ್ಟ್‌ಸಿಟಿ ಯೋಜನೆಯೊಂದಿಗೆ ನಗರದ ಪ್ರಮುಖ ವೃತ್ತಗಳು, ರಸ್ತೆಗಳು ಮತ್ತು ಬಸ್ ತಂಗುದಾಣಗಳನ್ನು ಸುಂದರೀಕರಣಗೊಳಿಸುವುದು ನಮ್ಮ ಆದ್ಯತೆ. ಅಲ್ಲದೆ, ಸಂಚಾರ ದಟ್ಟಣೆ ನೀಗಿಸಲು ಖಾಲಿ ಸ್ಥಳಗಳನ್ನು ತಂಗುದಾಣ ಮತ್ತು ಮಾರುಕಟ್ಟೆಗಳಾಗಿ ಮಾರ್ಪಡಿಸಿ, ಪಾಲಿಕೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಜನಸ್ನೇಹಿ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 15ನೇ ಹಣಕಾಸು ಯೋಜನೆ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ, ಸ್ವಚ್ಛ ಭಾರತ ಮಿಷನ್, ಅಮೃತ್ ಯೋಜನೆ, ಗೃಹ ಭಾಗ್ಯ ಯೋಜನೆ ಇತ್ಯಾದಿ ಮೂಲಗಳಿಂದ ಲಭ್ಯವಾಗುವ ಅನುದಾನಕ್ಕೆ ತಕ್ಕಂತೆ, ಕ್ರಿಯಾಯೋಜನೆ ಸಿದ್ಧಪಡಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಹಣ ಬಳಸಲಾಗುವುದು. ಬಜೆಟ್‌ನಲ್ಲಿ ಮಂಡಿಸಿದ ಎಲ್ಲ ಕಾರ್ಯಕ್ರಮ ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು’ ಎಂದರು.

ಯಾವುದಕ್ಕೆ ಎಷ್ಟು ಮೀಸಲು: ನಗರ ಸ್ವಚ್ಛತಾ ವೆಚ್ಚಕ್ಕಾಗಿ ₹28 ಕೋಟಿ ಕಾಯ್ದಿರಿಸಲಾಗಿದೆ. ನೇರ ನೇಮಕಾತಿ ಹೊಂದಿದ ಪೌರಕಾರ್ಮಿಕರ ವೇತನಕ್ಕಾಗಿ ₹18 ಕೋಟಿ, ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿಗಾಗಿ ₹4 ಕೋಟಿ, ಬೀದಿದೀಪಗಳ ನಿರ್ವಹಣೆಗಾಗಿ ₹2.50 ಕೋಟಿ ಮೀಸಲಿರಿಸಲಾಗಿದೆ. ಪಾಲಿಕೆ ಆದಾಯದಲ್ಲಿ ಎಲ್ಲ ಜಮೆ ಮತ್ತು ಖರ್ಚು ಹೊರತುಪಡಿಸಿ, ಲಭ್ಯವಾಗುವ ಶೇ 1ರಷ್ಟು ಮೊತ್ತವನ್ನು(₹14.98 ಲಕ್ಷ) ಕ್ರೀಡೆಗಳಿಗಾಗಿ ಮೀಸಲಿರಿಸಲಾಗಿದೆ. ಚುನಾಯಿತ ಪ್ರತಿನಿಧಿಗಳ ಅಧ್ಯಯನ ಪ್ರವಾಸಕ್ಕಾಗಿ ₹30 ಲಕ್ಷ, ಪತ್ರಕರ್ತರ ಕ್ಷೇಮ ನಿಧಿಗಾಗಿ ₹35 ಲಕ್ಷ, ಸ್ಮಶಾನಗಳಲ್ಲಿ ದಹನ ಕ್ರಿಯೆ ನಡೆಸಲು ಹಾಗೂ ಅಭಿವೃದ್ಧಿ ಚಟುವಟಿಕೆಗಾಗಿ ₹80 ಲಕ್ಷ ಕಾಯ್ದಿರಿಸಲಾಗಿದೆ.

ನಗರದ 58 ವಾರ್ಡ್‌ಗಳಲ್ಲಿ ಹೊಸ ರಸ್ತೆಗಳ ನಿರ್ಮಾಣಕ್ಕಾಗಿ ₹5 ಕೋಟಿ, ಸಿ.ಸಿ ರಸ್ತೆ ನಿರ್ಮಾಣಕ್ಕಾಗಿ ₹3 ಕೋಟಿ, ಚರಂಡಿ ನಿರ್ಮಾಣಕ್ಕಾಗಿ ₹50 ಲಕ್ಷ, ಪಾಲಿಕೆ ಖಾಲಿ ಜಾಗಗಳನ್ನು ಸಂರಕ್ಷಿಸಲು ₹80 ಲಕ್ಷ ಮತ್ತು ನಗರದ ವರ್ತುಲಗಳ ಸೌಂದರ್ಯೀಕರಣಕ್ಕಾಗಿ ₹75 ಲಕ್ಷ, ಎಲ್ಲ ವಾರ್ಡ್‌ಗಳಲ್ಲಿ ವಿವಿಧ ಅಗತ್ಯ ಮೂಲಸೌಕರ್ಯಕ್ಕಾಗಿ ₹10 ಕೋಟಿ ಮೀಸಲಿಡಲಾಗಿದೆ.

ಉದ್ಯಾನಗಳ ಅಭಿವೃದ್ಧಿಗೆ ₹1 ಕೋಟಿ ಮೀಸಲಿಟ್ಟಿದ್ದು, ಪಾಲಿಕೆಯಿಂದ ಅಮೃತ್ ಯೋಜನೆಗೆ ವಂತಿಕೆಯಾಗಿ ₹15 ಕೋಟಿ ಪಾವತಿಸಲು ನಿರ್ಧರಿಸಲಾಗಿದೆ. ಪಾಲಿಕೆಯಿಂದ ನಿವ್ವಳವಾಗಿ ಸ್ವೀಕೃತವಾಗುವ ಕಂದಾಯ ವಸೂಲಾತಿ ಮೇಲೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ  ಉಳಿತಾಯವಾಗುವ ಅಂದಾಜು ಮೊತ್ತದಲ್ಲಿ ಶೇ. 24.10ರಷ್ಟು ಮೊತ್ತವನ್ನು (₹3.61 ಕೋಟಿ) ಕಾಯ್ದಿರಿಸಲಾಗುವುದು. ಅಂಗವಿಕಲರಿಗೆ ವ್ಹೀಲ್‌ಚೇರ್‌ ಪೂರೈಸಲು ₹74.92 ಲಕ್ಷ ಮೀಸಲಿರಿಸಲಾಗಿದೆ.

‘ಇದು ಆಡಳಿತ ಗುಂಪಿನ ಬಜೆಟ್‌’

‘ಇದು ಆಡಳಿತ ಗುಂಪಿನ ಬಜೆಟ್‌ ಮಾತ್ರವಲ್ಲ; 58 ಸದಸ್ಯರಿಗೆ ಮಾತ್ರ ಸೇರಿದ ಬಜೆಟ್‌. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ತಯಾರಿಸಿದ್ದಾರೆ. ಬಜೆಟ್‌ ಪೂರ್ವಭಾವಿ ಸಭೆಗೆ ಆಹ್ವಾನಿಸಿಲ್ಲ. ಇದಕ್ಕೆ ಅನುಮೋದನೆ ಕೊಡಬಾರದು’ ಎಂದು ವಿರೋಧ ಪಕ್ಷದ ನಾಯಕ ಮುಜಮ್ಮಿಲ್‌ ಡೋಣಿ ಒತ್ತಾಯಿಸಿದರು.

ಇದಕ್ಕೆ ಆಡಳಿತ ಗುಂಪಿನವರು ಆಕ್ಷೇಪ ವ್ಯಕ್ತಪಡಿಸಿದಾಗ, ಎರಡೂ ಗುಂಪಿನವರ ಮಧ್ಯೆ ವಾದ–ವಿವಾದ ನಡೆಯಿತು.

‘ನಗರದ ವಿವಿಧ ಬಡಾವಣೆಗಳ ಜನರೊಂದಿಗೆ ಚರ್ಚಿಸಲು ಕರೆದಿದ್ದ ಸಮಾಲೋಚನಾ ಸಭೆಗೆ ಹಾಜರಾಗುವಂತೆ ಅಧಿಕಾರಿಗಳು ನಿಮಗೆ ಕರೆ ಮಾಡಿದ್ದರು. ನೀವು ಸ್ಪಂದಿಸದ ಕಾರಣ, ನಿಮ್ಮ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದಾರೆ’ ಎಂದು ಸವಿತಾ ಕಾಂಬಳೆ ತಿಳಿಸಿದರು.

ಆಡಳಿತ–‍ ಪ್ರತಿ‍ಪಕ್ಷದ ಗುಂಪಿನ ಸದಸ್ಯರ ತಿಕ್ಕಾಟದ ಮಧ್ಯೆಯೇ, ಬಜೆಟ್‌ಗೆ ಮೇಯರ್‌ ಅನುಮೋದನೆ ನೀಡಿ ಸಭೆ ಮುಕ್ತಾಯಗೊಳಿಸಿದರು.

ಇಷ್ಟು ಹಣ ಸಾಲುತ್ತದೆಯೇ?

ಕುಡಿಯುವ ನೀರು ಸರಬರಾಜು ಮತ್ತು ತೆರೆದ ಬಾವಿಗಳ ಅಭಿವೃದ್ಧಿಗಾಗಿ ಈ ಬಜೆಟ್‌ನಲ್ಲಿ ₹25 ಲಕ್ಷ ಮೀಸಲಿಡಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯೆ ರೇಷ್ಮಾ ಭೈರಕದಾರ ‘ಈಗ ನಗರದಾದ್ಯಂತ ಕುಡಿಯುವ ನೀರಿನ ಬವಣೆ ಹೆಚ್ಚಿದೆ. ಪ್ರತಿ ವಾರ್ಡ್‌ನಲ್ಲಿ ಕನಿಷ್ಠ 4 ಕೊಳವೆಬಾವಿ ಕೊರೆಯಿಸಬೇಕಿದೆ. ಹೀಗಿರುವಾಗ ಇಷ್ಟುಹಣ ಸಾಲುತ್ತದೆಯೇ? ನಮ್ಮ ಅಭಿಪ್ರಾಯ ಆಲಿಸದೆ ಯೋಜನೆ ರೂಪಿಸಿದ್ದು ಸರಿಯೇ’ ಎಂದು ಪ್ರಶ್ನಿಸಿದರು. ‘ನನಗೆ ಕನ್ನಡ ಸರಿಯಾಗಿ ತಿಳಿಯುವುದಿಲ್ಲ. ಹಾಗಾಗಿ ಬಜೆಟ್‌ನಲ್ಲಿರುವ ಅಂಶಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ತಿಳಿಯಲು ಸಂಕ್ಷಿಪ್ತ ಟಿಪ್ಪಣಿ ಪ್ರತಿ ಕೇಳಿದ್ದೆ. ಆದರೆ ಅದು ಮಾಧ್ಯಮಗಳಿಗೆ ಹೋಗುತ್ತದೆ ಎಂದು ಪ್ರತಿ ಕೊಡಲು ನಿರಾಕರಿಸಲಾಯಿತು. ಈ ಪ್ರತಿ ಕೊಡಲು ನಿರಾಕರಿಸಿದ್ದು ಸರಿಯೇ’ ಎಂದು ಪ್ರಶ್ನಿಸಿದರು. ‘ಮುಂದಿನ ದಿನಗಳಲ್ಲಿ ಇದಕ್ಕೆ ಹೆಚ್ಚಿನ ಹಣ ನೀಡಲಾಗುವುದು’ ಎಂದು ಮೇಯರ್‌ ಹೇಳಿದರು.

* ನಗರವಾಸಿಗಳ ಕುಡಿಯವ ನೀರಿಗಿಂತ ಪಾಲಿಕೆ ಸದಸ್ಯರ ಅಧ್ಯಯನ ಪ್ರವಾಸಕ್ಕೇ ಹೆಚ್ಚಿನ ಅನುದಾನ!

* ಪ್ರವಾಸಕ್ಕೆ ₹30 ಲಕ್ಷ, ಜಲಮೂಲ ನಿರ್ವಹಣೆಗೆ ಕೇವಲ ₹25 ಲಕ್ಷ ಮೀಸಲು!

* ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ನಿರ್ವಹಣೆಗೆ ₹1.10 ಕೋಟಿ ಅನುದಾನ!

ಇದೊಂದು ಉತ್ತಮ ಬಜೆಟ್‌. ಮುಂದಿನ ದಿನಗಳಲ್ಲಿ ಜನರಿಗೆ ಸೌಕರ್ಯ ಒದಗಿಸಲು ಆಸ್ತಿಗಳ ಸೃಷ್ಟಿಗೆ ಹೆಚ್ಚಿನ ಅನುದಾನ ಮೀಸಲಿಡಿ
–ಸಾಬಣ್ಣ ತಳವಾರ, ವಿಧಾನ ಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.