ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟವಾಗಿ, ಮಂಗಳವಾರಕ್ಕೆ(ಸೆ.6ಕ್ಕೆ) ಒಂದು ವರ್ಷ
ವಾಯಿತು.ಆದರೆ,ಈವರೆಗೂತಮಗೆ ಅಧಿಕಾರ ಸಿಗದ್ದರಿಂದ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ಪಾಲಿಕೆ ಆವರಣದಲ್ಲಿ ಸಂಭ್ರಮಾಚರಣೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಇದನ್ನು ತಡೆಯಲು ಮುಂದಾದ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
‘ನಾವೂ ಆಯ್ಕೆಯಾಗಿ ವರ್ಷ ಕಳೆದಿದೆ. ಆದರೆ, ಅಧಿಕಾರ ಸಿಗದ್ದರಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗುತ್ತಿಲ್ಲ. ಹಾಗಾಗಿ ಸರ್ಕಾರದನಡೆ ಖಂಡಿಸಿ ಸಂಭ್ರಮಾಚರಣೆ ಮಾಡುತ್ತಿದ್ದೇವೆ’ ಎಂದು ಸದಸ್ಯರು ಆರೋಪಿಸಿದರು.
ಆಗ ಸ್ಥಳಕ್ಕಾಗಮಿಸಿದ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ‘ಯಾವುದೇ ಕೆಲಸಗಳು ಆಗಬೇಕಿದ್ದರೆ ಕಚೇರಿಯಲ್ಲಿ ಚರ್ಚಿಸೋಣ ಬನ್ನಿ. ಆದರೆ, ಸರ್ಕಾರಿ ಕಚೇರಿಯಾಗಿರುವುದರಿಂದ ಇಲ್ಲಿ ಸಂಭ್ರಮಾಚರಣೆಗೆ ಅವಕಾಶವಿಲ್ಲ’ ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ‘ನಾವೂ ಪ್ರತಿನಿಧಿಸುವ ವಾರ್ಡ್‌ನ ಜನರು ನಿತ್ಯವೂ ನಮ್ಮನ್ನು ಸಂಪರ್ಕಿಸಿ, ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಸುತ್ತಿದ್ದಾರೆ. ಇವುಗಳನ್ನು ಪಾಲಿಕೆ ಆಯುಕ್ತರ ಗಮನಕ್ಕೆ ತಂದರೂ ಬಗೆಹರಿಸುತ್ತಿಲ್ಲ. ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಪೊಲೀಸರ ಮೂಲಕ ತಡೆದು ನಮ್ಮ ಕಚೇರಿ ಪ್ರವೇಶಿಸಲು ಬಿಡುತ್ತಿಲ್ಲ’ ಎಂದು ದೂರಿದರು.
ಸದಸ್ಯರಾದ ಮೋದಿನಸಾಬ್ ಮತವಾಲೆ, ರಿಯಾಜ್ ಕಿಲ್ಲೇದಾರ್, ಅಫ್ರೋಜ್ ಮುಲ್ಲಾ, ರವಿ ಸಾಳುಂಕೆ, ಖುರ್ಷಿದ್ ಮುಲ್ಲಾ, ಲಕ್ಷ್ಮಿ ಲೋಕೂರಿ ಇತರರಿದ್ದರು.
ಪಾಲಿಕೆ ಚುನಾವಣೆ ಫಲಿತಾಂಶದ ನಂತರ, ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ(ಬಿ) ಮಹಿಳೆ ಮೀಸಲಾತಿ ಪ್ರಕಟಿಸಲಾಗಿತ್ತು. ಆದರೆ, ಅಂದಿನ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಸರ್ಕಾರದಿಂದ ಸ್ಪಷ್ಟನೆ ಕೇಳಿದ್ದರು. ಇದರಿಂದಾಗಿ ಮೇಯರ್ ಆಯ್ಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು.
ಈಚೆಗೆ ಸರ್ಕಾರ ಪಾಲಿಕೆ 24ನೇ ಅವಧಿ ಮೀಸಲಾತಿ ಪ್ರಕಟಿಸಿದೆ. ಸಾಮಾನ್ಯ ವರ್ಗಕ್ಕೆ ಮೇಯರ್ ಹಾಗೂ ಪರಿಶಿಷ್ಟ ಜಾತಿ ಮಹಿಳೆಗೆ ಉಪ ಮೇಯರ್ ಸ್ಥಾನ ಮೀಸಲಾಗಿದೆ. ಆದರೆ, 21ನೇ ಅವಧಿ ಮೀಸಲಾತಿ ಅನುಸರಿಸಬೇಕೋ ಅಥವಾ ಅದನ್ನು ತಿರಸ್ಕರಿಸಿ 24ನೇ ಅವಧಿ ಪರಿಷ್ಕೃತ ಮೀಸಲಾತಿ ಅನುಸರಿಸಬೇಕೋ ಎಂದು ಪಾಲಿಕೆ ಅಧಿಕಾರಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
ಮೀಸಲಾತಿ ಗೊಂದಲದಿಂದಾಗಿ ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿ ಉಳಿದಿದ್ದರಿಂದ ಸದಸ್ಯರು ಅಧಿಕಾರದಿಂದ ವಂಚಿತಗೊಂಡಿದ್ದಾರೆ.
ಬಿಜೆಪಿ ಮೇಲುಗೈ ಸಾಧಿಸಿತ್ತು
ಬೆಳಗಾವಿ ಪಾಲಿಕೆ ಚುನಾವಣೆ ಪ್ರತಿವರ್ಷ ಕನ್ನಡ ಮತ್ತು ಮರಾಠಿ ಭಾಷೆ ಆಧಾರದಲ್ಲಿ ನಡೆಯುತ್ತಿತ್ತು. 2021ರ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿ ಪಕ್ಷ ಆಧರಿತವಾಗಿ 21ನೇ ಅವಧಿ ಚುನಾವಣೆ ನಡೆದಿತ್ತು. 58 ಸದಸ್ಯ ಬಲ ಹೊಂದಿರುವ ಪಾಲಿಕೆಯಲ್ಲಿ 35 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಮೇಲುಗೈ ಸಾಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.