ADVERTISEMENT

ಬೆಳಗಾವಿ: ಬಿಜೆಪಿ ಸದಸ್ಯರಿಗೆ ಮುಖಂಡರಿಂದ ಅಭಿನಂದನೆ; ರಾಜಕಾರಣಕ್ಕೆ ಹೊಸ ತಿರುವು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 14:12 IST
Last Updated 6 ಸೆಪ್ಟೆಂಬರ್ 2021, 14:12 IST
ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿಗಳು
ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿಗಳು   

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿಗಳಿಗೆ ಆ ಪಕ್ಷದ ಜನಪ್ರತಿನಿಧಿಗಳು, ಮುಖಂಡರು ಮತ್ತು ಪದಾಧಿಕಾರಿಗಳು ಸೋಮವಾರ ಅಭಿನಂದಿಸಿದರು.

ಅರಣ್ಯ ಸಚಿವ ಉಮೇಶ ಕತ್ತಿ, ಸಂಸದೆ ಮಂಗಲಾ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಪಕ್ಷದ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಕೋರ್ ಕಮಿಟಿ ಸದಸ್ಯೆ ಉಜ್ವಲಾ ಬಡವನ್ನಾಚೆ, ಮುಖಂಡರ ಮುತಾಲಿಕ ದೇಸಾಯಿ ಮೊದಲಾದವರು ಪಾಲ್ಗೊಂಡಿದ್ದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಯ ಪಾಟೀಲ, ‘ಬೆಳಗಾವಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ (1984ರಲ್ಲಿ) ನಂತರ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷಕ್ಕೆ ಅಧಿಕಾರ ಕೊಡುವ ಕೆಲಸವನ್ನು ಮತದಾರರು ಮಾಡಿದ್ದಾರೆ. ಈ ಚುನಾವಣೆ ಫಲಿತಾಂಶವು ಬೆಳಗಾವಿಯ ಸ್ಥಳೀಯ ರಾಜಕಾರಣಕ್ಕೆ ಒಂದು ಹೊಸ ತಿರುವು ಪಡೆದುಕೊಂಡಿದೆ. ಭಾಷಾ ರಾಜಕಾರಣಕ್ಕೆ ತಿಲಾಂಜಲಿ ಕೊಟ್ಟು ಅಭಿವೃದ್ಧಿ ರಾಜಕಾರಣಕ್ಕೆ ಜನರು ತಮ್ಮ ಮುದ್ರೆಯನ್ನು ಒತ್ತಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದರು.

ADVERTISEMENT

‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು, ಚುನಾವಣಾ ಪ್ರಭಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು, ಲೋಕಸಭಾ ಸದಸ್ಯರು, ಪಕ್ಷದ ಎಲ್ಲ ಹಿರಿಯರು, ಶಾಸಕರ ಪ್ರಯತ್ನದಿಂದಾಗಿ ನಗರದಲ್ಲಿ ಇತಿಹಾಸ ನಿರ್ಮಾಣವಾಗಿದೆ. ಎಲ್ಲ ನೂತನ ನಗರಸೇವಕರಿಗೆ ಪಾಲಿಕೆ ಬಗ್ಗೆ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾಹಿತಿ–ಮಾರ್ಗದರ್ಶನ ನೀಡಲು ಕಾರ್ಯಕ್ರಮ ಆಯೋಜಿಸುತ್ತೇವೆ’ ಎಂದು ತಿಳಿಸಿದರು.

ಸಚಿವ ಉಮೇಶ ಕತ್ತಿ, ‘ಬಿಜೆಪಿಯ ಅಭಿವೃದ್ಧಿ ವಿಚಾರವನ್ನು ನೋಡಿ ಜನರು ಪಕ್ಷಕ್ಕೆ ಮತ ಹಾಕಿದ್ದಾರೆ. ಭಾಷಾ ರಾಜಕಾರಣ ತಿರಸ್ಕರಿಸಿ, ಅಭಿವೃದ್ಧಿಗೆ ಮನ್ನಣೆ ಸಿಕ್ಕಿದೆ. ಜನರ ಸಮಸ್ಯೆಗಳನ್ನು ಕೇಳುವ ಕೆಲಸವನ್ನು ನಮ್ಮ ನಗರಪಾಲಿಕೆ ಸದಸ್ಯರು ಮಾಡಬೇಕು. ನಗರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.