ಬೆಳಗಾವಿ: ನಗರದಲ್ಲಿ ಗುರುವಾರ ಹಲವು ಗಂಟೆಗಳವರೆಗೆ ದಟ್ಟ ಮಂಜು ಆವರಿಸಿತ್ತು. ಬೆಳಗಿನಜಾವದಿಂದ ಸುರಿದ ಮಂಜು ಬೆಳಿಗ್ಗೆ 9 ಗಂಟೆಯವರೆಗೂ ಆವರಿಸಿತ್ತು. ತಾಪಮಾನವು 13 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿದಿದ್ದು, ತೀವ್ರ ಚಳಿಗೆ ಜನರು ನಲುಗಿದರು.
ಬಡಾವಣೆಗಳು, ಮೈದಾನಗಳು, ರಸ್ತೆಗಳು, ಖುಲ್ಲಾ ಜಾಗವನ್ನು ಮಂಜು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ರಸ್ತೆಯು ಸಂಪೂರ್ಣವಾಗಿ ಮಂಜುಮಯವಾಗಿತ್ತು. ಇದರ ಫಲವಾಗಿ ವಾಹನಗಳು ನಿಧಾನ ಗತಿಯಲ್ಲಿ ಸಂಚರಿಸಿದವು. ಹೆಡ್‌ಲೈಟ್ ಹಾಕಿಕೊಂಡು, ಸಂಚರಿಸಿದವು.
ವಾಯುವಿಹಾರಕ್ಕಾಗಿ ಆಗಮಿಸಿದ್ದ ಜನರು ಚಳಿಯಿಂದ ನಡುಗಿದರು. ದೈಹಿಕ ಕಸರತ್ತಿಗೆ ವಿರಾಮ ನೀಡಿ, ಲಗುಬಗೆಯಿಂದ ಮನೆಯತ್ತ ಮರಳಿ ಹೆಜ್ಜೆ ಹಾಕಿದರು. ಕೆಲವರು, ಅಲ್ಲಲ್ಲಿ ಒಣಗಿಹೋಗಿದ್ದ ಎಲೆಗಳು ಹಾಗೂ ಕಟ್ಟಿಗೆ ತುಂಡುಗಳನ್ನು ಸೇರಿಸಿಕೊಂಡು ಬೆಂಕಿ ಹಾಕಿ, ಮೈ ಕಾಯಿಸಿಕೊಂಡರು. ಸ್ವೇಟರ್, ಕ್ಯಾಪ್ ಹಾಕಿಕೊಂಡು ವಿದ್ಯಾರ್ಥಿಗಳು ಶಾಲೆಗೆ ತೆರಳಿದರು. 9ಗಂಟೆಯ ನಂತರ ಸೂರ್ಯನ ಕಿರಣಗಳು ಭೂಮಿ ತಲುಪಿದವು. ಸೂರ್ಯನ ಕಿರಣಗಳ ಶಾಖಕ್ಕೆ ಮಂಜು ಕರಗಿ, ವಾತಾವರಣ ತಿಳಿಯಾಯಿತು.
ದಟ್ಟವಾಗಿ ಆವರಿಸಿದ್ದ ಮಂಜು ಕಂಡು ಹಲವರು ರೋಮಾಂಚನ ಅನುಭವಿಸಿದರು. ತಮ್ಮ ಮೊಬೈಲ್, ಕ್ಯಾಮೆರಾಗಳಿಂದ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ವಾಟ್ಸ್‌ಆ್ಯಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.