ADVERTISEMENT

ಬೆಳಗಾವಿ: ಸರ್ವಾಧಿಕಾರಿಯನ್ನು ಅಧಿಕಾರದಿಂದ ಕೆಳಗಿಳಿಸಿ– ಪ್ರಕಾಶ ರಾಜ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 15:17 IST
Last Updated 8 ಏಪ್ರಿಲ್ 2024, 15:17 IST
<div class="paragraphs"><p>ಬೆಳಗಾವಿಯ ಗಾಂಧಿ ಭವನದಲ್ಲಿ ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳು ಸೋಮವಾರ ಹಮ್ಮಿಕೊಂಡಿದ್ದ ‘ದೇಶ ಉಳಿಸಿ ಸಂಕಲ್ಪ ಸಮಾವೇಶ’ದಲ್ಲಿ ಪ್ರಮುಖರಾದ ಬಡಗಲಪುರ ನಾಗೇಂದ್ರ, ಬಿ.ಟಿ.ಲಲಿತಾ ನಾಯಕ್, ಪ್ರಕಾಶ ರಾಜ್, ಎಸ್.ಆರ್‌.ಹಿರೇಮಠ ಪ್ರತಿಜ್ಞಾವಿಧಿ ಸ್ವೀಕರಿಸಿದರ</p></div>

ಬೆಳಗಾವಿಯ ಗಾಂಧಿ ಭವನದಲ್ಲಿ ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳು ಸೋಮವಾರ ಹಮ್ಮಿಕೊಂಡಿದ್ದ ‘ದೇಶ ಉಳಿಸಿ ಸಂಕಲ್ಪ ಸಮಾವೇಶ’ದಲ್ಲಿ ಪ್ರಮುಖರಾದ ಬಡಗಲಪುರ ನಾಗೇಂದ್ರ, ಬಿ.ಟಿ.ಲಲಿತಾ ನಾಯಕ್, ಪ್ರಕಾಶ ರಾಜ್, ಎಸ್.ಆರ್‌.ಹಿರೇಮಠ ಪ್ರತಿಜ್ಞಾವಿಧಿ ಸ್ವೀಕರಿಸಿದರ

   

–ಪ್ರಜಾವಾಣಿ ಚಿತ್ರ

ಬೆಳಗಾವಿ: ‘ಒಂದೇ ಪಕ್ಷ, ಒಂದೇ ಭಾಷೆ ಎನ್ನುವ ಮಹಾಪ್ರಭು ಎರಡು ನಾಲಿಗೆ ಹಾವು ಇದ್ದಂತೆ. ಸುಳ್ಳುಗಳ ಮಹಾಪುರಾಣ ಹೇಳುವ ಈ ದುರಹಂಕಾರಿ ಮತ್ತು ಸರ್ವಾಧಿಕಾರಿಯನ್ನು ಕೆಳಗಿಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ನಟ ಪ್ರಕಾಶ ರಾಜ್‌ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.

ADVERTISEMENT

ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳು ಸೋಮವಾರ ಹಮ್ಮಿಕೊಂಡಿದ್ದ ‘ದೇಶ ಉಳಿಸಿ ಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ದೇಶ ಅಭಿವೃದ್ಧಿಗೊಂಡಿದೆ. ವಿಮಾನ ನಿಲ್ದಾಣ ಬದಲಾಗಿವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ವಾಸ್ತವವಾಗಿ ಅದಾನಿಯ ಕೈಬಲಿಷ್ಠವಾಗಿದೆ. ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ, ಟೋಲ್‌ ಗೇಟ್‌ನಲ್ಲಿ ಮಾಫಿಯಾ ನಿಂತಿಲ್ಲ’ ಎಂದರು.

‘ಸರ್ವಾಧಿಕಾರಿಯ ಮೊದಲ ಲಕ್ಷಣವೇ ಸುಂದರ ಕಾಣುವುದು. ಈ ಮಹಾಪ್ರಭು ಅಹಂಕಾರವನ್ನು ತುತ್ತ ತುದಿಗೆ ತಂದು ನಿಲ್ಲಿಸಿದ್ದಾರೆ. ಎಲೆಕ್ಟ್ರಾಲ್‌ ಬಾಂಡ್ ಈ ಮಹಾಪ್ರಭುವಿಗೆ ಮುಳುವಾಗಬೇಕು. ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದೆ. ಕೊರೊನಾ ಕಾಲಘಟ್ಟದಲ್ಲೂ ಕಳಪೆ ಔಷಧ ಕಂಪನಿಗಳಿಂದ ನೂರಾರು ಕೋಟಿ ಪಡೆಯಲಾಗಿದೆ. ಭ್ರಷ್ಟಾಚಾರ ಮಾಡಿದವರು ಆ ಪಕ್ಷಕ್ಕೆ ಸೇರಿ ಸಾಚಾಗಳಾಗಿದ್ದಾರೆ’ ಎಂದು ಟೀಕಿಸಿದರು.

ಸಮಾವೇಶದ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಮಾತನಾಡಿ, ‘ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಸಂವಿಧಾನ ನಾಶವಾಗಲಿದೆ. ಪ್ರಜಾತಾಂತ್ರಿಕ ಮಾದರಿ ಪತನವಾಗಲಿದೆ. ದೇಶದಲ್ಲಿ ಅಘೋಷಿತ ತುರ್ತುಸ್ಥಿತಿ ನಿರ್ಮಾಣವಾಗಿದೆ. ಈ ಚುನಾವಣೆ ಐದು ವರ್ಷ ನಮ್ಮನ್ನು ಯಾರು ಆಳಬೇಕು ಎಂಬುದು ಅಷ್ಟೇ ಅಲ್ಲ, ಭಾರತ ಪ್ರಜಾಪ್ರಭುತ್ವ ದೇಶವಾಗಿ ಉಳಿಯಬೇಕಾ ಅಥವಾ ಸರ್ವಾಧಿಕಾರಿ ದೇಶವಾಗಿ ಮಾರ್ಪಡಬೇಕಾ ಎಂಬುದನ್ನು ತೀರ್ಮಾನಿಸಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.