ಬೆಳಗಾವಿ: ಬೆಳಗಾವಿ, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ನೆರೆ ಉಂಟಾಗಿ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗೆ ಸಂತ್ರಸ್ತರಾದವರಿಗೆ 2019ರಲ್ಲಿ ತುರ್ತು ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ₹ 10ಸಾವಿರ ಕೊಡಲಾಗಿತ್ತು. ಈ ಬಾರಿ ಯಾವುದೇ ಪರಿಹಾರವನ್ನು ಇದುವರೆಗೂ ಕೊಟ್ಟಿಲ್ಲ.
ಜಿಲ್ಲೆಯೊಂದರಲ್ಲೇ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ರಾಯಬಾಗ, ಅಥಣಿ, ಕಾಗವಾಡ, ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ, ಗೋಕಾಕ, ಮೂಡಲಗಿ ಮತ್ತು ಖಾನಾಪುರ 136 ಹಳ್ಳಿಗಳು ಬಾಧಿತವಾಗಿವೆ. 34ಸಾವಿರಕ್ಕೂ ಹೆಚ್ಚಿನ ಜನರು ತೊಂದರೆ ಅನುಭವಿಸಿದ್ದಾರೆ. 108 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 16,013 ಮಂದಿ ಕಾಳಜಿ ಕೇಂದ್ರಗಳಲ್ಲಿ ಆಸರೆ ಪಡೆದಿದ್ದಾರೆ. ಇವರಲ್ಲಿ ಬಹಳಷ್ಟು ಮಂದಿ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಉಟ್ಟ ಬಟ್ಟೆಯಲ್ಲೇ ಮನೆಗಳಿಂದ ಸುರಕ್ಷಿತ ಪ್ರದೇಶಗಳಿಗೆ ಬಂದಿದ್ದಾರೆ. ಮನೆಗಳಲ್ಲಿದ್ದ ದವಸ–ಧಾನ್ಯ ಸೇರಿದಂತೆ ಅವಶ್ಯ ಸಾಮಗ್ರಿಗಳೆಲ್ಲವೂ ನೀರು ಪಾಲಾಗಿವೆ. ಹೀಗೆ ತೀವ್ರ ತೊಂದರೆ ಅನುಭವಿಸಿದವರಿಗೆ ಆರ್ಥಿಕ ಸಹಾಯ ನೀಡುವ ಕೆಲಸ ಸರ್ಕಾರದಿಂದ ಆಗಿಲ್ಲ.
ಅಪಾರ ಹಾನಿ:ಜಿಲ್ಲೆಯಲ್ಲಿ ಕೃಷ್ಣಾ, ವೇದಗಂಗಾ, ದೂಧ್‌ಗಂಗಾ, ಮಾರ್ಕಂಡೇಯ, ಹಿರಣ್ಯಕೇಶಿ, ಮಲಪ್ರಭಾ ಮತ್ತು ಘಟಪ್ರಭಾ ನದಿಗಳು ಉಕ್ಕಿ ಹರಿದಿವೆ. ಜೊತೆಗೆ ಅತಿವೃಷ್ಟಿಯೂ ಬಾಧಿಸಿದೆ. ಇದರಿಂದಾಗಿ ಜಿಲ್ಲೆಯಲ್ಲಿ 39ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬಹುತೇಕ ಕಡೆಗಳಲ್ಲಿನ ಜಮೀನುಗಳಲ್ಲಿ ನೀರು ಈಗಲೂ ಸಂಗ್ರಹವಾಗಿದೆ. ಪರಿಣಾಮ ಕಬ್ಬು, ಶೇಂಗಾ, ಹೆಸರು, ಸೋಯಾಬೀನ್, ಈರುಳ್ಳಿ, ಭತ್ತ ಮೊದಲಾದ ಬೆಳೆಗಳು ಕೊಳೆಯುವ ಭೀತಿ ರೈತರದಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, 40 ಮನೆಗಳು ಸಂಪೂರ್ಣ ಮತ್ತು 1,300 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 10 ಪರಿವರ್ತಕಗಳು, 94 ವಿದ್ಯುತ್ ಕಂಬಗಳು, 52 ಸೇತುವೆಗಳು, 40 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. 893 ಕಿ.ಮೀ. ರಸ್ತೆ ಹಾಳಾಗಿದೆ. ₹ 230 ಕೋಟಿ ನಷ್ಟ ಉಂಟಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ ಎಂದು ಮೂಲಗಳು ತಿಳಿಸಿವೆ.
ದುರಸ್ತಿಗೂ ಹಣ ಬಂದಿಲ್ಲ:‘ಪ್ರವಾಹ ಮತ್ತು ಅತಿವೃಷ್ಟಿಯಿಂದ ಬೆಳಗಾವಿ ವಿಭಾಗದಲ್ಲಿ 1,400 ಕಿ.ಮೀ. ರಸ್ತೆ, 305 ಸೇತುವೆಗಳು ಹಾಳಾಗಿವೆ. ಒಟ್ಟಾರೆ ₹ 1200 ಕೋಟಿ ಹಾನಿಯಾಗಿದೆ. ತಕ್ಷಣ ದುರಸ್ತಿಗೆ ₹ 170 ಕೋಟಿ ಬಿಡುಗಡೆ ಮಾಡಬೇಕು’ ಲೋಕೋಪಯೋಗಿ ಸಚಿವರೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಗೋವಿಂದ ಕಾರಜೋಳ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೋರಿದ್ದರು. ಆದರೆ, ಈವರೆಗೂ ಹಣ ಬಿಡುಗಡೆ ಆಗಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ್ದಾರೆ. ಈ ವಿದ್ಯಮಾನ ಕೂಡ ಪರಿಹಾರ ಘೋಷಣೆಗೆ ತೊಡಕಾಗಿದೆ ಎನ್ನಲಾಗುತ್ತಿದೆ.
‘2019ರಲ್ಲಿ ಸಂಪೂರ್ಣ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣಕ್ಕಾಗಿ ತಲಾ ₹ 5 ಲಕ್ಷ, ದುರಸ್ತಿಗೆ ₹ 3 ಲಕ್ಷ ಮತ್ತು ಭಾಗಶಃ ಹಾನಿಗೊಳಗಾದ ಮನೆಗಳಿಗೆ ₹ 50ಸಾವಿರ ಪರಿಹಾರವನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದರು. ಅದೇ ಮಾನದಂಡ ಈಗಲೂ ಮುಂದುವರಿಯುವುದೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ ’ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಜಿಲ್ಲೆಯ ಅನೇಕ ಕಡೆಗಳಲ್ಲಿ ಬೆಳೆಗಳು ಜಲಾವೃತಗೊಂಡಿವೆ. ವಾರದಲ್ಲಿ ಜಂಟಿ ಸಮೀಕ್ಷೆ ನಡೆಸಿ ಹಾನಿಯ ಮಾಹಿತಿ ಕಲೆ ಹಾಕಲಾಗುವುದು. ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
- ಎಂ.ಜಿ. ಹಿರೇಮಠ,ಜಿಲ್ಲಾಧಿಕಾರಿ
ನೆರೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಅಧಿಕಾರಿಗಳು ಕೂಡಲೇ ಸಮೀಕ್ಷೆ ನಡೆಸಿ, ರೈತರಿಗೆ ಸಮರ್ಪಕವಾಗಿ ಪರಿಹಾರ ವಿತರಿಸಬೇಕು.
- ಚೂನಪ್ಪ ಪೂಜಾರಿ, ಸಂಚಾಲಕ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.