ಗೋಕಾಕ: ‘ಕರದಂಟು ನಾಡು’ ಖ್ಯಾತಿಯ ಗೋಕಾಕ ಕ್ಷೇತ್ರದಿಂದ ಸತತ 7ನೇ ಬಾರಿಗೆ ಬಿಜೆಪಿಯ ರಮೇಶ ಜಾರಕಿಹೊಳಿ ಆಯ್ಕೆಯಾಗಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಹಲವು ಅಭಿವೃದ್ಧಿ ಕೆಲಸ ಕೈಗೊಂಡಿರುವ ಅವರ ಮುಂದೆ ಇನ್ನೂ ಹಲವು ಸವಾಲುಗಳಿವೆ. ಅದರಲ್ಲೂ ಗೋಕಾಕ ಪ್ರತ್ಯೇಕ ಜಿಲ್ಲೆ ರಚಿಸಬೇಕೆನ್ನುವ ಬೇಡಿಕೆ ಪ್ರಮುಖವಾಗಿ ಕೇಳಿಬರುತ್ತಿದೆ.
ಬೆಳಗಾವಿಯಿಂದ 65 ಕಿ.ಮೀ ದೂರದಲ್ಲಿರುವ ಗೋಕಾಕ ನಗರ ಜಿಲ್ಲೆಯ ಸ್ಥಾನಮಾನ ಹೊಂದಲು ಎಲ್ಲ ಅರ್ಹತೆಗಳನ್ನು ಹೊಂದಿದೆ. ಪ್ರಮುಖ ವಾಣಿಜ್ಯ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಇದನ್ನು ಪ್ರತ್ಯೇಕ ಜಿಲ್ಲೆಯಾಗಿಸಬೇಕೆಂದು ಕಳೆದ ಎರಡು ದಶಕಗಳಿಂದ ಜನರು ಹೋರಾಟ ನಡೆಸುತ್ತಿದ್ದಾರೆ. ಆದರೆ, ಈವರೆಗೆ ಅದು ಈಡೇರಿಲ್ಲ. ಈ ಬಾರಿ ಚುನಾವಣೆ ಪ್ರಚಾರದ ವೇಳೆ, ‘ಗೋಕಾಕ ಪ್ರತ್ಯೇಕ ಜಿಲ್ಲೆ ರಚನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ರಮೇಶ ಜಾರಕಿಹೊಳಿ ಆಶ್ವಾಸನೆ ಕೊಟ್ಟಿದ್ದರು. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂಬ ಒತ್ತಾಯ ಜನರದ್ದು.
ಗೋಕಾಕದಲ್ಲಿ ತಾಲ್ಲೂಕು ನ್ಯಾಯಾಲಯದೊಂದಿಗೆ, 12ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಪೂರ್ಣ ಪ್ರಮಾಣದ ಜಿಲ್ಲಾ ನ್ಯಾಯಾಲಯ ಸ್ಥಾಪಿಸಿದರೆ ವಕೀಲರು ಹಾಗೂ ಕಕ್ಷಿದಾರರಿಗೆ ಅನುಕೂಲವಾಗಲಿದೆ. ವಿವಿಧ ವ್ಯಾಜ್ಯಗಳ ಇತ್ಯರ್ಥಕ್ಕಾಗಿ ಬೆಳಗಾವಿಗೆ ಅಲೆಯುವುದು ತಪ್ಪಲಿದೆ.
ಆಸ್ಪತ್ರೆ ಮೇಲ್ದರ್ಜೆಗೇರಲಿ: ‘ಗೋಕಾಕದ ಸರ್ಕಾರಿ ಆಸ್ಪತ್ರೆ 200 ಹಾಸಿಗೆಗಳನ್ನು ಒಳಗೊಂಡಿದೆ. ಗೋಕಾಕ, ಮೂಡಲಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಜನರು ಇಲ್ಲಿ ಚಿಕಿತ್ಸೆಗೆ ಬರುತ್ತಾರೆ. ಹಾಗಾಗಿ ಇದನ್ನು ಅತ್ಯಾಧುನಿಕ ವೈದ್ಯಕೀಯ ಸೌಕರ್ಯ ಒಳಗೊಂಡ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು’ ಎಂದು ಜನರು ಒತ್ತಾಯಿಸುತ್ತಾರೆ.
ಶೈಕ್ಷಣಿಕವಾಗಿ ಬೆಳೆಯುತ್ತಿರುವ ನಗರದಲ್ಲಿ ಸರ್ಕಾರಿ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು. ನಗರದ ಹೊರವಲಯದಲ್ಲಿ ತಲೆ ಎತ್ತಿದ ಸುಮಾರು 25 ಬಡಾವಣೆಗಳಿಗೆ ಸಾರಿಗೆ ಸಂಸ್ಥೆಯಿಂದ ಬಸ್ ಸೌಕರ್ಯ ಕಲ್ಪಿಸಬೇಕು. ಪ್ರತಿಬಾರಿ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಪ್ರವಾಹದಿಂದ ಜತ್-ಜಾಂಬೋಟಿ ಅಂತರರಾಜ್ಯ ಹೆದ್ದಾರಿಯಲ್ಲಿರುವ ಲೋಳಸೂರ ಸೇತುವೆ ಮುಳುಗುಡೆಯಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು.
ನಗರದ ಹೊರವಲಯದಲ್ಲಿರುವ ಚಿಕ್ಕೋಳಿ ಸೇತುವೆ ಪ್ರತಿ ಮಳೆಗಾಲದಲ್ಲಿ ಮುಳುಗಡೆಯಾಗುತ್ತದೆ. ಇದೇ ಮಾರ್ಗದಲ್ಲಿ ಗೋಕಾಕ ಜಲಪಾತವಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಿಂದ ಬರುವ ಪ್ರವಾಸಿಗರು ಪರದಾಡುವಂತಾಗಿದೆ. ಹೀಗಾಗಿ ಈ ಸೇತುವೆ ಎತ್ತರವನ್ನು ಹೆಚ್ಚಿಸಬೇಕು ಎಂಬ ಬೇಡಿಕೆಯಿದೆ.
ಸಂಚಾರ ಪೊಲೀಸ್ ಠಾಣೆ ಆರಂಭಿಸಿ: ಗೋಕಾಕದಲ್ಲಿ ಸಂಚಾರ ಪೊಲೀಸ್ ಠಾಣೆ ಆರಂಭಿಸುವ ಜತೆಗೆ, ಮುಖ್ಯ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಬೇಕು. ನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಘಟ್ಟಿ ಬಸವಣ್ಣ ಜಲಸಂಗ್ರಹಾಗಾರ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ತ್ವರಿತವಾಗಿ ಕಾಮಗಾರಿ ಆರಂಭಿಸಲು ಶಾಸಕರು ಮುತುವರ್ಜಿ ವಹಿಸಬೇಕು.
ನಗರದೊಳಗಿರುವ ಬಸ್ ನಿಲ್ದಾಣ ಇಕ್ಕಟ್ಟಿನ ಸ್ಥಳದಲ್ಲಿದೆ. ಅದನ್ನು ವಿಶಾಲವಾದ ಪ್ರದೇಶಕ್ಕೆ ಸ್ಥಳಾಂತರಿಸಿ, ಇಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಜನರು ಮುಂದಿರಿಸುತ್ತಾರೆ.
ಪ್ರತಿಕ್ರಿಯೆಗಾಗಿ ಶಾಸಕ ರಮೇಶ ಜಾರಕಿಹೊಳಿ ಅವರು ‘ಪ್ರಜಾವಾಣಿ’ಗೆ ಲಭ್ಯವಾಗಲಿಲ್ಲ.
‘ಮಳಿಗೆ ಹಸ್ತಾಂತರಿಸಿ’ ‘ನಗರಸಭೆ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳು ಉದ್ಘಾಟನೆಗೊಂಡು ವರ್ಷಗಳೇ ಕಳೆದರೂ ನಮಗೆ ಹಸ್ತಾಂತರವಾಗಿಲ್ಲ. ಇದರಿಂದಾಗಿ ವ್ಯಾಪಾರ–ವಹಿವಾಟಿಗೆ ಹಿನ್ನಡೆಯಾಗುತ್ತಿದೆ. ಹಾಗಾಗಿ ಏನೇ ತೊಡಕುಗಳಿದ್ದರೂ ನಿವಾರಿಸಿ ಶೀಘ್ರ ಇವುಗಳನ್ನು ಹಸ್ತಾಂತರಿಸಬೇಕು’ ಎಂಬುದು ವರ್ತಕರ ಬೇಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.