ADVERTISEMENT

ಬೆಳಗಾವಿ: ಇತ್ತ ಮಳೆ ಭಾರಿ, ಅತ್ತ ಬೀಜಗಳೂ ದುಬಾರಿ

ಸಂತೋಷ ಈ.ಚಿನಗುಡಿ
Published 28 ಅಕ್ಟೋಬರ್ 2024, 5:07 IST
Last Updated 28 ಅಕ್ಟೋಬರ್ 2024, 5:07 IST
ಚಿಕ್ಕೋಡಿ ತಾಲ್ಲೂಕಿನ ಕಬ್ಬೂರಿನಲ್ಲಿ ಟ್ರ್ಯಾಕ್ಟರ್‌ ಬಳಸಿ ಹೊಲ ಹದ ಮಾಡಿದ ರೈತ
ಚಿಕ್ಕೋಡಿ ತಾಲ್ಲೂಕಿನ ಕಬ್ಬೂರಿನಲ್ಲಿ ಟ್ರ್ಯಾಕ್ಟರ್‌ ಬಳಸಿ ಹೊಲ ಹದ ಮಾಡಿದ ರೈತ   

ಬೆಳಗಾವಿ: ಅಕಾಲಿಕ ಮಳೆ ಹಿಂಗಾರಿ ಹಂಗಾಮಿಗೆ ಸಿದ್ಧಗೊಂಡ ರೈತರಿಗೆ ಚಿಂತೆ ತಂದಿಟ್ಟಿವೆ. ಜಿಲ್ಲೆಯ ಹಲವು ರೈತರು ಇನ್ನೂ ಮುಂಗಾರು ಫಸಲಿನ ರಾಶಿಯಲ್ಲಿ ನಿರತರಾಗಿದ್ದಾರೆ. ಮತ್ತಷ್ಟು ರೈತರು ಹಿಂಗಾರಿ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಕಳೆದ ಎರಡು ವಾರಗಳಿಂದ ಸುರಿದ ಮಳೆ ಎರಡೂ ಕೆಲಸಕ್ಕೆ ಅಡಚಣೆ ತಂದೊಡ್ಡಿದೆ. ಗಾಯದ ಮೇಲೆ ಬರೆ ಎಂಬಂತೆ ಬಿತ್ತನೆ ಬೀಜಗಳ ದರ ಹೆಚ್ಚಳವಾಗಿದೆ.

ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳಾದ ರಾಗಿ, ಗೋಧಿ, ಕಡಲೆ ದರ ತುಸು ಹೆಚ್ಚಾಗಿದೆ. ಜೋಳ, ಶೇಂಗಾ, ಕುಸುಬೆ ಬೀಜಗಳ ದರ ಕಡಿಮೆಯಾಗಿದೆ. ರಾಜ್ಯದ ಅತಿ ಹೆಚ್ಚು ಬಿತ್ತನೆ ಪ್ರದೇಶ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಇದರ ನೇರ ಪರಿಣಾಮ ತಟ್ಟಿದೆ.

ಕಳೆದ ವರ್ಷ ರಾಜ್ಯದ ಎಲ್ಲೆಡೆ ಬರಗಾಲ ಬಿದ್ದ ಕಾರಣ ಬಿತ್ತನೆ ಬೀಜಗಳ ಕೊರತೆ ಉಂಟಾಗಿದೆ. ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ ಹಾಗೂ ಕರ್ನಾಟಕ ರಾಜ್ಯ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿಯಿಂದ ಬಿತ್ತನೆ ಬೀಜಗಳನ್ನು ಬಿತ್ತಲು ರೈತರಿಗೆ ನೀಡಲಾಗಿತ್ತು. ಈಗ ರೈತರಿಂದ ಖರೀದಿ ಮಾಡಲಾಗಿದೆ.

ADVERTISEMENT

ನಿಗಮ– ಮಂಡಳಿಗಳು ಕೂಡ ರೈತರಿಂದ ಶೇ 23 ಹೆಚ್ಚು ದರ ನೀಡಿ ಖರೀದಿಸಿವೆ. ಅಂಥ ಬೀಜಗಳಿಗೆ ಮಾತ್ರ ಶೇ 9ರಿಂದ ಶೇ 13ರಷ್ಟು ದರ ಹೆಚ್ಚಾಗಿದೆ. ಪರೋಕ್ಷವಾಗಿ ರೈತರಿಗೆ ಹೆಚ್ಚು ಲಾಭವೇ ಹೋಗಿದೆ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ವಿವರ.

ಬಿತ್ತನೆಗೆ ಕಿರಿಕಿರಿ:

ಎರಡು ವಾರಗಳಿಂದ ಸುರಿದ ಅಕಾಲಿಕ ಮಳೆಯಿಂದ ಹೊಲಗಳು ರೊಜ್ಜಾಗಿವೆ. ಇನ್ನು ಒಂದು ವಾರ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ರೈತರನ್ನು ಚಿಂತೆಗೀಡು ಮಾಡಿದೆ. ಆದರೆ, ನಾಲ್ಕು ದಿನಗಳಿಂದ ಬಿಸಿಲು ಬಿದ್ದಿದ್ದರಿಂದ ಒಣಭೂಮಿಗಳು ಬಿತ್ತನೆಗೆ ಹದವಾಗಿದ್ದು, ಆಶಯ ಮೂಡುತ್ತಿದೆ ಎನ್ನುತ್ತಾರೆ ರೈತರು.

ಈವರೆಗೆ ಜಿಲ್ಲೆಯಲ್ಲಿ 75 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಮುಗಿದಿದೆ. ಮುಂದಿನ ಶುಕ್ರವಾರದವರೆಗೆ ಇದು 1.5 ಲಕ್ಷ ಹೆಕ್ಟೇರ್‌ ದಾಟುವ ನಿರೀಕ್ಷೆ ಇದೆ. ಕಡಲೆ, ಜೋಳ, ಸೂರ್ಯಕಾಂತಿ, ಕುಸುಬೆ ಬೀಜಗಳನ್ನು ರೈತರು ಬಿತ್ತಿದ್ದಾರೆ.

ಕೊಳೆತ ಫಸಲು:

ಸಂಕೇಶ್ವರ ಸಮೀಪದ ಅಮ್ಮಣಗಿ ಗ್ರಾಮದ ರೈತರ ಹಿಂಗಾರು ಬಿತ್ತನೆಗಾಗಿ ಹೊಲ ಹದಗೊಳಿಸಿದರು

ಅಕಾಲಿಕ ಮಳೆಯಿಂದಾಗಿ ಈಗಾಗಿಲೇ ಹತ್ತಿ, ಶೇಂಗಾ, ಈರುಳ್ಳಿ, ಗೋವಿನಜೋಳ ಮುಂತಾದ ಬೆಳೆಗಳು ಕೊಳೆತಿವೆ. ಉಳ್ಳಾಗಡ್ಡಿ, ಬೆಳ್ಳುಳ್ಳಿ ಬೆಳೆದ ರೈತರಂತೂ ಚಿಂತಾಕ್ರಾಂತರಾಗಿದ್ದಾರೆ.

ಕಳೆದ ವರ್ಷ ಬರಗಾಲದಿಂದ ಜಿಲ್ಲೆಯ ರೈತರು ಸಂಕಷ್ಟ ಎದುರಿಸಿದ್ದರು. ಈ ಬಾರಿ ಮುಂಗಾರು ಮಳೆ ಭರ್ಜರಿಯಾಗಿತ್ತು. ಬೆಳೆ ಕೂಡ ಹುಲುಸಾಗಿ ಬಂದಿತ್ತು. ಆದರೆ, ರಾಶಿ ಮಾಡುವ ಸಮಯಕ್ಕೆ ಅಕಾಲಿಕ ಮಳೆ ಬಂದು ಇಳುವರಿ ಕುಂದುವಂತೆ ಮಾಡಿತು. ಈಗಾಗಲೇ ಕೃಷಿ ಅಧಿಕಾರಿಗಳು ಬೆಳೆಹಾನಿಯ ಸಮೀಕ್ಷೆ ಕೂಡ ಶುರು ಮಾಡಿದ್ದಾರೆ.

ಸದ್ಯ ಮಳೆ ಬಿಡುವು ನೀಡಿದೆ ಬಿತ್ತನೆ ಚಟುವಟಿಕೆಗಳು ಪ್ರಾಂಭವಾಗಿವೆ. ನವೆಂಬರ್‌ವರೆಗೂ ಬಿತ್ತನೆಗೆ ಅವಕಾಶವಿದೆ. ರೈತರು ಆತಂಕಪಡುವ ಅವಶ್ಯಕತೆ ಇಲ್ಲ
ಶಿವನಗೌಡ ಪಾಟಿಲ ಜಂಟಿ ನಿರ್ದೇಶಕ ಕೃಷ ಇಲಾಖೆ

3.68 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಒಟ್ಟಾರೆ 3.68 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಇದರಲ್ಲಿ 1.22 ಲಕ್ಷ ಹೆಕ್ಟೇರ್‌ನಲ್ಲಿ ಜೋಳ 1.20 ಲಕ್ಷ ಹೆಕ್ಟೇರ್‌ನಲ್ಲಿ ಕಡಲೆ ಬೆಳೆಯಲು ಉದ್ದೇಶಿಸಲಾಗಿದೆ.

ಈ ಎರಡೂ ಹಿಂಗಾರಿನಲ್ಲಿ ಮುಖ್ಯ ಬೆಳೆಗಳಾಗಿವೆ. ಗೋಧಿ 50 ಸಾವಿರ ಹೆಕ್ಟೇರ್‌ ಮುಸುಕಿನ ಜೋಳ 32 ಸಾವಿರ ಹೆಕ್ಟೇರ್ ಸೂರ್ಯಕಾಂತಿ 7000 ಹೆಕ್ಟೇರ್‌ ಕುಸುಬೆ 2000 ಹೆಕ್ಟೇರ್‌ ಬಿತ್ತನೆ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ 40 ಸಾವಿರ ಹೆಕ್ಟೇರ್‌ನಲ್ಲಿ ಜೋಳ 30 ಸಾವಿರ ಹೆಕ್ಟೇರ್‌ನಲ್ಲಿ ಕಡಲೆ ತಲಾ 2000 ಹೆಕ್ಟೇರ್‌ನಲ್ಲಿ ಗೋಧಿ ಹಾಗೂ ಮುಸುಕಿನ ಜೋಳ ಬಿತ್ತನೆ ಮುಗಿದಿದೆ.

ರೈತರು ಏನಂತಾರೆ?

ಈ ಬಾರಿ ಎಲ್ಲ ಬೀಜದ ದರಗಳೂ ಹೆಚ್ಚಾಗಿವೆ. ರೈತರಿಗೆ ಬೇಸರ ತಂದಿದೆ. ಕೆಲವು ಕಂಪನಿಗಳು ಕಡಿಮೆ ದರದ ಬೀಜ ನೀಡುತ್ತವೆ. ಆದರೆ ಗುಣಮಟ್ಟದ ಸಮಸ್ಯೆ ಕಾಡುತ್ತದೆ. ಆ ಎಚ್ಚರಿಕೆಯಿಂದ ದರ ದುಬಾರಿಯಾದರೂ ಉತ್ತಮ ಬೀಜಗಳನ್ನೇ ಪಡೆಯುವುದು ಅನಿವಾರ್ಯವಾಗಿದೆ.
–ಮೊಹಮ್ಮದ್‌ ಅಲಿ ದೊಡಮನಿ
ಅಕಾಲಿಕ ಮಳೆಯಿಂದ ಬಿತ್ತನೆಗೆ ತೊಂದರೆಯಾಗಿದೆ. ನಾನು ನಾಲ್ಕು ಎಕರೆಯಲ್ಲಿ ಕಡಲೆ ಬಿತ್ತಬೇಕು ಎಂದುಕೊಂಡಿದ್ದೇನೆ. ಹೊಲದಲ್ಲಿ ಎತ್ತುಗಳು ಸಾಗಲು ಸಾಧ್ಯವಾಗುತ್ತಿಲ್ಲ. ವಿಳಂಬ ಮಾಡಿ ಬಿತ್ತಿದರೆ ಇಳುವರಿ ಕುಸಿಯುವ ಆತಂಕವಿದೆ.
–ಶ್ರೀಶೈಲ ಮರಕುಂಬಿ
ಈ ಮುಂಚೆ ಹಾಕಿದ್ದ ಗೋವಿನ ಜೋಳ ಅಕಾಲಿಕ ಮಳೆಯ ಕಾರಣ ಕೊಳೆಯಿತು. ಈಗ ಹಿಂಗಾರಿಗೂ ವಿಳಂಬವಾಗುತ್ತಿರುವುದು ಸಮಸ್ಯೆ ತಂದಿದೆ. ಕಡಲೆ ಬಿತ್ತನೆ ಮಾಡಬೇಕು ಎಂದುಕೊಂಡಿದ್ದೇನೆ. ಬೀಜಗಳ ದರ ದುಬಾರಿಯಾಗಿದ್ದೂ ಬೇಸರ ತಂದಿದೆ.
–ಗಜಾನನ ಕೋಚರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.