ಬೆಳಗಾವಿ: ‘ಬೆಂಗಳೂರಿನಲ್ಲಿ ₹4,000 ಬಾಡಿಗೆ ಕೊಟ್ಟರೆ ರಂಗಪ್ರಯೋಗಕ್ಕೆ ವೇದಿಕೆ ಸಿಗುತ್ತವೆ. ಆದರೆ, ಬೆಳಗಾವಿಯಲ್ಲಿ ಇಷ್ಟೇ ದರಕ್ಕೆ ಸಿಗಬಲ್ಲ ಒಂದೂ ರಂಗಮಂದಿರ ಇಲ್ಲ. ರಂಗಪ್ರಯೋಗಕ್ಕಾಗಿ ತಂಡದ ಸದಸ್ಯರೇ ಹಣ ಸಂಗ್ರಹಿಸಬೇಕು. ಇಲ್ಲವೆ, ಪ್ರಾಯೋಜಕರ ಬಳಿ ಕೈಚಾಚಬೇಕು. ಹಾಗಾಗಿ ಉತ್ತಮ ಕಥಾವಸ್ತು ಹೊಂದಿದ ನಾಟಕಗಳಿದ್ದರೂ ಕೆಲವೊಮ್ಮೆ ಪ್ರದರ್ಶಿಸುತ್ತಿಲ್ಲ...’
ಸಾಹಿತ್ಯಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಜಿಲ್ಲೆಯ ಹವ್ಯಾಸಿ ನಾಟಕ ತಂಡಗಳು ತಮ್ಮ ಸಂಕಷ್ಟ ವಿವರಿಸುತ್ತ ಮಾತು ಆರಂಭಿಸುವುದೇ ಹೀಗೆ.
‘ಹೈಟೆಕ್ ಯುಗದಲ್ಲೂ ರಂಗಭೂಮಿ ಸದ್ದಿಲ್ಲದೆ ತೆರೆಗೆ ಸರಿಯುತ್ತಿದೆ. ಈ ಕ್ಷೇತ್ರದಲ್ಲಿ ಹೆಜ್ಜೆ–ಹೆಜ್ಜೆಗೂ ಸಮಸ್ಯೆಗಳು, ಸವಾಲುಗಳಿವೆ. ಹೀಗಿದ್ದರೂ ರಂಗಪ್ರಿಯರ ಮನ ತಣಿಸುವ ಆಸೆ ನಮ್ಮದು. ಆದರೆ, ಸರ್ಕಾರ ಗಡಿಜಿಲ್ಲೆಯಲ್ಲಿ ರಂಗಭೂಮಿ ಬೆಳವಣಿಗೆಗೆ ಉತ್ತೇಜನ ಕೊಡುತ್ತಿಲ್ಲ’ ಎಂಬುದು ಅವರ ಕೊರಗು.
ಏಣಗಿ ಬಾಳಪ್ಪನವರಂಥ ಖ್ಯಾತನಾಮ ಕಲಾವಿದರನ್ನು ರಂಗಭೂಮಿಗೆ ಸಮರ್ಪಿಸಿದ, ಹಲವು ನಾಟಕ ಕಂಪನಿಗಳಿಗೆ ನೆಲೆ ಕಲ್ಪಿಸಿದ ಜಿಲ್ಲೆ ಬೆಳಗಾವಿ. ಏಣಗಿ ಬಾಳಪ್ಪನವರ ಕಲಾವೈಭವ ನಾಟಕ ಕಂಪನಿ, ಗೋಕಾಕ ನಾಟಕ ಕಂಪನಿ, ಕೊಣ್ಣೂರ ನಾಟಕ ಕಂಪನಿ ಪ್ರದರ್ಶಿಸಿದ ನಾಟಕಗಳಿಗೆ ಲೆಕ್ಕವಿಲ್ಲ.
ರಂಗಸೃಷ್ಟಿ, ರಂಗಸಂಪದ, ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸೇರಿ ಹಲವು ಹವ್ಯಾಸಿ ನಾಟಕ ತಂಡಗಳೂ ಈಗಲೂ ಇವೆ. ಪ್ರೇಕ್ಷಕ ಸದಸ್ಯತ್ವದಿಂದ ಬರುವ ಹಣ, ಪ್ರಾಯೋಜಕರ ನೆರವು ಪಡೆದು, ಹಲವು ದಶಕಗಳಿಂದ ರಂಗ ಪ್ರಯೋಗ ಮಾಡುತ್ತ ಬಂದಿವೆ. ಕನ್ನಡ ಮಾತ್ರವಲ್ಲ; ಮರಾಠಿ ಭಾಷೆಗಳ ನಾಟಕಗಳ ವೀಕ್ಷಣೆಗೂ ಬೆಳಗಾವಿಯಲ್ಲಿ ಪ್ರೇಕ್ಷಕರಿದ್ದಾರೆ.
ಆದರೆ, ಉತ್ತಮ ಕಥಾವಸ್ತು ಹೊಂದಿದ ನಾಟಕ ಸಿದ್ಧಪಡಿಸುವುದಕ್ಕಿಂತ, ತಮ್ಮ ಬಳಿ ಇರುವ ಹಣಕಾಸಿನ ಮಿತಿಯಲ್ಲಿ ಬಾಡಿಗೆಗಾಗಿ ರಂಗಮಂದಿರ ಹುಡುಕುವುದೇ ರಂಗಕರ್ಮಿಗಳಿಗೆ ಈಗ ಸವಾಲಾಗಿ ಪರಿಣಮಿಸಿದೆ.
ಬೆಳಗಾವಿಯಲ್ಲಿ ನಾಟಕಗಳ ಪ್ರದರ್ಶನಕ್ಕಾಗಿ ಸರ್ಕಾರದ ವ್ಯವಸ್ಥೆಯಡಿ ಈ ಹಿಂದೆ ಎರಡು ರಂಗಮಂದಿರ ಇದ್ದವು. ಈ ಪೈಕಿ ಟಿಳಕವಾಡಿಯ ಕಲಾಮಂದಿರದ ಕಟ್ಟಡ ನೆಲಸಮಗೊಳಿಸಿ, ಸ್ಮಾರ್ಟ್‌ಸಿಟಿ ಯೋಜನೆಯಡಿ ಹೊಸ ಕಟ್ಟಡ ಕಟ್ಟಲಾಗುತ್ತಿದೆ. ಆದರೆ, ಅದರಲ್ಲೂ ರಂಗ ಪ್ರಯೋಗಕ್ಕಾಗಿಯೇ ವಿಶೇಷ ವ್ಯವಸ್ಥೆ ಇಲ್ಲ. ಇನ್ನೂ ಈಗ ಇರುವ ಕುಮಾರ ಗಂಧರ್ವ ಕಲಾಮಂದಿರವೂ ರಂಗಕರ್ಮಿಗಳ ಪ್ರದರ್ಶನಕ್ಕೆ ಪೂರಕವಾಗಿಲ್ಲ.
ಖಾಸಗಿಯಾಗಿದ್ದರೂ ಕಡಿಮೆ ದರದಲ್ಲಿ ಬಾಡಿಗೆಗೆ ಸಿಗುತ್ತಿದ್ದ ಸದಾಶಿವ ನಗರದಲ್ಲಿನ ಚಿಂದೋಡಿ ಲೀಲಾ ರಂಗಮಂದಿರವೂ ಈಗ ಬಾಗಿಲು ಮುಚ್ಚಿದೆ.
ಖಾಸಗಿಯತ್ತ ಮೊರೆ: ‘ಬೆಳಗಾವಿಯ ಕನ್ನಡ ಭವನದಲ್ಲಿ ಒಂದು ನಾಟಕ ಪ್ರದರ್ಶನಕ್ಕೆ ₹10 ಸಾವಿರ ದರವಿದೆ. ಕನ್ನಡ ಭವನದ ಸಹಯೋಗದಲ್ಲಿ ಪ್ರದರ್ಶಿಸಿದರೆ, ₹5 ಸಾವಿರ ಪಡೆಯುತ್ತಾರೆ. ವಿದ್ಯುತ್ ನಿರ್ವಹಣೆಯ ವೆಚ್ಚವಾದ ₹4,500 ಸೇರಿದರೆ, ₹9,500 ಆಗುತ್ತದೆ. ಇಷ್ಟೊಂದು ಹಣ ಭರಿಸುವುದು ನಮಗೆ ಕಷ್ಟ. ಹಾಗಾಗಿ ಖಾಸಗಿ ರಂಗಮಂದಿರಗಳತ್ತ (ಲೋಕಮಾನ್ಯ ರಂಗಮಂದಿರ) ಮುಖ ಮಾಡುತ್ತೇವೆ’ ಎಂದು ರಂಗಸೃಷ್ಟಿ ತಂಡದ ಶಿರೀಷ ಜೋಶಿ ಹೇಳಿದರು.
ರಂಗ ಪರಿಕರಗಳೇ ಇಲ್ಲ
‘ಕುಮಾರ ಗಂಧರ್ವ ರಂಗಮಂದಿರ ನಾಟಕಗಳ ಪ್ರದರ್ಶನಕ್ಕೆ ಪೂರಕವಾಗಿಲ್ಲ. ಮುಖ್ಯವಾಗಿ ಅಲ್ಲಿ ರಂಗ ಪರಿಕರಗಳೇ ಇಲ್ಲ. ಗ್ರೀನ್‌ರೂಮ್ ಇಲ್ಲ. ನೆರಳು–ಬೆಳಕಿನ ವ್ಯವಸ್ಥೆಯೂ ಸರಿಯಾಗಿಲ್ಲ. ಧ್ವನಿವರ್ಧಕ ವ್ಯವಸ್ಥೆಯೂ ಇಲ್ಲದ್ದರಿಂದ ಬೇರೆ ಕಡೆಗಳಿಂದಲೇ ಧ್ವನಿವರ್ಧಕಗಳು ಲೈಟ್‌ಗಳನ್ನು ಬಾಡಿಗೆ ತರಬೇಕಿದೆ. ಕಟ್ಟಡಕ್ಕೂ ಮತ್ತು ಅವುಗಳಿಗೂ ಬಾಡಿಗೆ ಕಟ್ಟುವುದು ದುಬಾರಿ’ ಎನ್ನುತ್ತಾರೆ ಶಿರೀಷ ಜೋಶಿ. ‘ಪ್ರೇಕ್ಷಕರಿಗಾಗಿ 588 ಆಸನಗಳಿವೆ. ಈ ಪೈಕಿ ಹೆಚ್ಚಿನವು ಸುಸ್ಥಿತಿಯಲ್ಲಿಲ್ಲ. ಕೆಲವು ಮುರಿದಿವೆ’ ಎಂಬುದು ಅವರ ಬೇಸರ.
ಹೊರಗಿನ ತಂಡ ಕರೆಯಿಸಲು ಹಿಂದೇಟು
‘ನಾಟಕಗಳ ಪ್ರದರ್ಶನಕ್ಕೆ ಮೂರ್ನಾಲ್ಕು ಸಾವಿರ ರೂಪಾಯಿಯಲ್ಲಿ ರಂಗಮಂದಿರ ಬಾಡಿಗೆಗೆ ಸಿಕ್ಕರೆ ಬೇರೆ ಕಡೆಗಳಿಂದಲೂ ಉತ್ತಮ ತಂಡ ಕರೆಯಿಸಬಹುದು. ಆದರೆ ನಮಲ್ಲಿ ರಂಗಮಂದಿರ ಬಾಡಿಗೆಗೆ ಹೆಚ್ಚಿನ ಹಣ ಕೊಡುವಂತಾಗಿದೆ. ಹಾಗಾಗಿ ಬೇರೆ ಕಡೆಗಳಿಂದ ಹೆಚ್ಚಿನ ತಂಡಗಳು ಬರಲು ಸಿದ್ಧರಿದ್ದರೂ ನಾವೇ ಹಿಂದೇಟು ಹಾಕುವಂತಾಗಿದೆ’ ಎಂದು ರಂಗಸಂಪದ ಅಧ್ಯಕ್ಷ ಅರವಿಂದ ಕುಲಕರ್ಣಿ ಹೇಳಿದರು. ‘ಹೊರಗಿನ ತಂಡಗಳು ಇಲ್ಲಿಗೆ ಬಂದರೆ ಅವರಿಗೆ ಪ್ರಯಾಣಭತ್ಯೆ ವಸತಿ ಊಟದ ಸೌಕರ್ಯ ಕಲ್ಪಿಸಬೇಕು. ಇದಕ್ಕೆ ಏನಿಲ್ಲವೆಂದರೂ ₹40 ಸಾವಿರ ಖರ್ಚಾಗುತ್ತದೆ’ ಎನ್ನುತ್ತಾರೆ ಅವರು.
ಸವದತ್ತಿ ಕೋಟೆಯಲ್ಲೇ ಪ್ರದರ್ಶಿಸುತ್ತೇವೆ
‘ಸವದತ್ತಿಯಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ ಕಳೆದ 27 ವರ್ಷಗಳಿಂದ ಪರಸಗಡ ನಾಟಕೋತ್ಸವ ಆಯೋಜಿಸುತ್ತಿದ್ದೇವೆ. ನಮ್ಮ ತಂಡದೊಂದಿಗೆ ಬೇರೆ ತಂಡಗಳೂ ಇಲ್ಲಿಗೆ ಬಂದು ರಂಗಪ್ರಿಯರ ಮನ ತಣಿಸುತ್ತವೆ. ಸವದತ್ತಿಯಲ್ಲೇ ರಂಗಮಂದಿರ ತಲೆ ಎತ್ತಿದರೆ ಪ್ರತಿ ತಿಂಗಳ ಅಂತ್ಯಕ್ಕೆ ಅಥವಾ ವಾರಾಂತ್ಯಕ್ಕೆ ನಾಟಕ ಪ್ರದರ್ಶಿಸಲೂ ನಾವು ಸಿದ್ಧರಿದ್ದೇವೆ. ಆದರೆ ವೇದಿಕೆ ಇಲ್ಲದ್ದರಿಂದ ಪ್ರತಿವರ್ಷ ಸವದತ್ತಿ ಕೋಟೆಯಲ್ಲೇ ನಾಟಕ ಪ್ರದರ್ಶಿಸುತ್ತೇವೆ’ ಎಂದುಝಕೀರ್ ನದಾಫ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.