ಬೆಳಗಾವಿ: ‘ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ ಎಂಬ ಭ್ರಮೆಯನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಅಂತಹ ಕೂಗಾಟದಲ್ಲಿ ತೊಡಗಿರುವ ನಾಡ ವಿರೋಧಿ ಸಂಘಟನೆಗಳು ಹಗಲುಗನಸನ್ನು ಬಿಡಬೇಕು’ ಎಂದು ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಗುಡುಗಿದರು.
ಇಲ್ಲಿನಲಿಂಗರಾಜ ಕಾಲೇಜಿನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ‘ಕೆಂಗಲ್ ಹನುಮಂತಯ್ಯ ಸಂಸ್ಕೃತಿ ದತ್ತಿ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಕೋರೆ ಅವರಂತಹ ಮೇರು ರಾಜಕಾರಣಿಗಳು ಇರುವಾಗ ಬೆಳಗಾವಿಯನ್ನು ಅಲುಗಾಡಿಸಲು ಮಹಾರಾಷ್ಟ್ರಕ್ಕೆ ಸಾಧ್ಯವೇ? ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರುತ್ತದೆ ಎನ್ನುವುದು ಹಾಸ್ಯಾಸ್ಪದ. ದ್ರಾವಿಡ-ಆರ್ಯ ಸಂಸ್ಕೃತಿ ಸಂಗಮದ ಸ್ಥಳವಿದು’ ಎಂದರು.
‘ಕೆಂಗಲ್ ಹನುಮಂತಯ್ಯ ವಿಧಾಯಕ ಕಾರ್ಯಗಳನ್ನು ಮಾಡಿದ್ದಾರೆ. ನಾಡು–ನುಡಿಗೆ ಶ್ರಮಿಸಿದ ವ್ಯಕ್ತಿ. ಅವರ ವ್ಯಕ್ತಿ ಹೆಸರಿನ ಪ್ರಶಸ್ತಿಯನ್ನು ಕೋರೆ ಅವರಿಗೆ ನೀಡುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ’ ಎಂದು ಶ್ಲಾಘಿಸಿದರು.
ಕೋರೆ ನಾಯಕತ್ವ ವಹಿಸಲಿ
ಅಭಿನಂದನಾ ನುಡಿಗಳನ್ನಾಡಿದ ಸಾಹಿತಿ ಸರಜೂ ಕಾಟ್ಕರ್, ‘ರಾಜಕಾರಣಿಗಳಲ್ಲಿರುವ ಒಡಕು ಮತ್ತು ಗಟ್ಟಿ ನಾಯಕತ್ವದ ಕೊರತೆಯಿಂದಾಗಿ ಬೆಳಗಾವಿ ಅಭಿವೃದ್ಧಿ ಸಾಧ್ಯವಾಗಿಲ್ಲ. ಅಭಿವೃದ್ಧಿ ಮತ್ತು ನಾಡಿನ ಹಿತಕ್ಕಾಗಿ ಇಲ್ಲಿನ ರಾಜಕಾರಣಿಗಳು ಒಂದಾಗಬೇಕಿದ್ದು, ಅದಕ್ಕೆ ನಾಯಕತ್ವದ ಕೊರತೆ ಇದೆ. ಇಲ್ಲಿನ ಜನರ ದನಿಗೆ ಶಕ್ತಿ ಕೊಡಲು ಸರ್ವ ಪಕ್ಷಗಳ ನಾಯಕನ ಅಗತ್ಯವಿದೆ. ಪಕ್ಷ ಹೊರತಾಗಿ ಅಭಿವೃದ್ಧಿಗಾಗಿ ಕೋರೆ ನಾಯಕತ್ವ ವಹಿಸಬೇಕು’ ಎಂದು ಆಶಿಸಿದರು.
ಪ್ರಶಸ್ತಿ ಸ್ವೀಕರಿಸಿದ ಕೋರೆ, ‘ತಂದೆ ಅಂಕಲಿಯಲ್ಲಿ ಪ್ರಥಮ ಏಕೀಕರಣ ಸಮ್ಮೇಳವನ್ನು ಬೃಹತ್ ಪ್ರಮಾಣದಲ್ಲಿ ಆಯೋಜಿಸಿದ್ದರು. ಕನ್ನಡ ಶಾಲೆ ತೆರೆದರು. ಅವರು ನೀಡಿದ ಸಂಸ್ಕಾರದಿಂದಾಗಿ ಗಡಿಯಲ್ಲಿ ಕನ್ನಡ ಸೇವೆ ಸಾಧ್ಯವಾಯಿತು. ಈ ಪ್ರಶಸ್ತಿ ಸಪ್ತರ್ಷಿಗಳಿಗೆ ಹಾಗೂ ಕೆಎಲ್‌ಇಗೆ ಸಲ್ಲಬೇಕು’ ಎಂದರು.
ಒಡಕಿನ ಮಾತು ಕೇಳಿಬರಬಾರದು
ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಮನು ಬಳಿಗಾರ, ‘ಅಭಿವೃದ್ಧಿಗಾಗಿ ಪ್ರತಿಭಟನೆಗಳು ತೀವ್ರಗೊಳ್ಳಬೇಕು. ಆದರೆ, ರಾಜ್ಯದ ಒಡಕಿನ ಮಾತುಗಳು ಎಂದೂ ಯಾವ ಭಾಗದಿಂದಲೂ ಕೇಳಿಬರಬಾರದು. ಕರ್ನಾಟಕದ ಏಕೀಕರಣಕ್ಕೆ ಹಲವು ಮಹನೀಯರು ದುಡಿದು ಅಳಿದಿದ್ದಾರೆ. ಸರ್ಕಾರ ಎಲ್ಲ ಜಿಲ್ಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಜ್ಯೋತಿ ಬಾದಾಮಿ, ಪ್ರೊ.ಎ.ಬಿ. ಕೊರಬು, ಕೆಎಲ್‌ಇ ಸಂಯೋಜಕ ಡಾ.ಎಂ.ಟಿ. ಕುರಣಿ, ಸಂಸ್ಥೆಯ ಆಜೀವ ಸದಸ್ಯರಾದ ಡಾ.ಪ್ರಕಾಶ ಕಡಕೋಳ, ಮಹಾದೇವ ಬಳಿಗಾರ, ಡಾ.ಸತೀಶ ಪಾಟೀಲ, ಪ್ರೊ.ಎಸ್.ಜಿ. ನಂಜಪ್ಪನವರ, ಲಿಂಗರಾಜ ಕಾಲೇಜು ಪ್ರಾಚಾರ್ಯ ಡಾ.ಆರ್.ಎಂ. ಪಾಟೀಲ, ಆರ್.ಎಲ್. ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಡಾ.ಜ್ಯೋತಿ ಕವಳೇಕರ ಪಾಲ್ಗೊಂಡಿದ್ದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಸ್ವಾಗತಿಸಿದರು. ಡಾ.ಮಹೇಶ ಗುರನಗೌಡರ ಹಾಗೂ ಮಹಾಂತೇಶ ಮೆಣಸಿನಕಾಯಿ ನಿರೂಪಿಸಿದರು. ಡಾ.ಎಚ್.ಎಂ. ಚನ್ನಪ್ಪಗೋಳ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.