ADVERTISEMENT

ಬೆಳಗಾವಿ | ಅಪಹರಣ ಮತ್ತು ಹನಿಟ್ರ್ಯಾಪ್‌ ಪ್ರಕರಣ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 15:14 IST
Last Updated 25 ಸೆಪ್ಟೆಂಬರ್ 2024, 15:14 IST
   

ಬೆಳಗಾವಿ: ವ್ಯಕ್ತಿಯೊಬ್ಬರ ಅಪಹರಣ ಮತ್ತು ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಶಹಾಪುರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಇಲ್ಲಿನ ಶಹಾಪುರದ ಬಸವನ ಗಲ್ಲಿಯ ದಿವ್ಯಾ ಸಪಕಾಳೆ (23), ಶಹಾಪುರದ ಗಾವಡೆ ಮಾರ್ಗದ ಪ್ರಶಾಂತ ಉರ್ಫ್‌ ಸ್ಪರ್ಶ ಕೋಲಕಾರ (25), ಕಣಬರ್ಗಿಯ ಜ್ಯೋತಿರ್ಲಿಂಗ ಗಲ್ಲಿಯ ಕುಮಾರ ಉರ್ಫ್‌ ಡಾಲಿ ಗೋಕರಕ್ಕನವರ (29), ಕಣಬರ್ಗಿಯ ವಾಲ್ಮೀಕಿ ಗಲ್ಲಿಯ ರಾಜು ಜಡಗಿ (29) ಬಂಧಿತರು.

ಅವರಿಂದ ₹10 ಲಕ್ಷ, ಕೃತ್ಯಕ್ಕೆ ಬಳಸಿದ 3 ದ್ವಿಚಕ್ರ ವಾಹನ, ಮೊಬೈಲ್‌ ಸೇರಿದಂತೆ ₹14.30 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ADVERTISEMENT

‘ಪರಿಚಯಸ್ಥ ದಿವ್ಯಾ ಮಲಗಿದ್ದಾಗ ನಾನು ಭುಜ ಮುಟ್ಟಿ ಎಬ್ಬಿಸಿದ್ದರ ವಿಡಿಯೊ ಇಟ್ಟುಕೊಂಡು, ನನ್ನನ್ನು ಅಪಹರಣ ಮಾಡಿ ₹25 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಈ ಪೈಕಿ ₹15 ಲಕ್ಷ ಕೊಟ್ಟಿದ್ದೇನೆ. ಈಗ ₹10 ಲಕ್ಷ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ, ಟಿಳಕವಾಡಿಯ ಮಂಗಳವಾರ ಪೇಟೆಯ ನಿವಾಸಿ ವಿನಾಯಕ ಕುರಡೇಕರ ಅವರು, ಶಹಾಪುರ ಠಾಣೆಯಲ್ಲಿ ಸೆ.24ರಂದು ದೂರು ದಾಖಲಿಸಿದ್ದರು.

ಶಹಾಪುರ ಠಾಣೆ ಇನ್‌ಸ್ಪೆಕ್ಟರ್‌ ಎಸ್‌.ಎಸ್‌.ಸಿಮಾನಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.