ಬೆಳಗಾವಿ: ಇಲ್ಲಿನ ಕೆಎಲ್‌ಇ ಆಸ್ಪತ್ರೆಯಲ್ಲಿರುವ ಕೆಎಲ್‌ಇ–ರೋಟರಿ ಚರ್ಮ ಬ್ಯಾಂಕ್ ಗುಜರಾತ್‌ನ ಅಹಮದಾಬಾದ್‌ನ ಮಹಿಳೆಯೊಬ್ಬರಿಗೆ ಚರ್ಮ ನೀಡಿ ನೆರವಾಗಿದೆ.
ಅಲ್ಲಿನ 23 ವರ್ಷದ ಮಹಿಳೆಯು ಮೇನಲ್ಲಿ ಮನೆಯಲ್ಲಿ ಅಡುಗೆ ಮಾಡುವಾಗ ಸಂಭವಿಸಿದ ಅವಘಡದಲ್ಲಿ ಶೇ 70ರಷ್ಟು ಸುಟ್ಟು ಗಾಯಗಳಿಂದಾಗಿ ಸಾವು–ಬದುಕಿನೊಂದಿಗೆ ಹೋರಾಡುತ್ತಿದ್ದರು. ಚಿಕಿತ್ಸೆಗೆ ಅಗತ್ಯವಿದ್ದ ಚರ್ಮಕ್ಕಾಗಿ ಆಸ್ಪತ್ರೆಯವರು ಹಾಗೂ ಕುಟುಂಬದವರು ಪರದಾಡಿದ್ದರು. ಅಹಮದಾಬಾದ್‌ನಲ್ಲಿ ಚರ್ಮ ಬ್ಯಾಂಕ್ ಇಲ್ಲ. ಮುಂಬೈನ ಬ್ಯಾಂಕ್‌ನಲ್ಲಿ ಯತ್ನಿಸಿದ್ದರಾದರೂ ಲಭ್ಯವಿರಲಿಲ್ಲ. ಅಹಮದಾಬಾದ್ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಮಹಿಳೆಯ ಪತಿ, ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯ ಚರ್ಮ ಬ್ಯಾಂಕ್ ಸಂಪರ್ಕಿಸಿದ್ದರು. ಬಳಿಕ ವೈದ್ಯರಿಂದ ಪತ್ರ ತಂದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಲ್ಲಿಂದ ದೂರದ ಅಹಮದಾಬಾದ್‌ಗೆ ರಸ್ತೆ ಮೂಲಕ ಚರ್ಮ ತೆಗೆದುಕೊಂಡು ಹೋಗಿದ್ದರು. ಚಿಕಿತ್ಸೆಗೆ ಅದನ್ನು ಬಳಸಿದ ಎಸ್‌ವಿಪಿಐಎಂಎಸ್‌ಆರ್ ಆಸ್ಪತ್ರೆ ವೈದ್ಯರು, ಮಹಿಳೆಯನ್ನು ಗುಣಮುಖ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನೆರವಾದ ಸಮಾಧಾನ:
‘ಸುಟ್ಟ ಗಾಯಗಳಾದಾಗ ರೋಗಿಗೆ ಆಗುವ ರೋಗ ನಿವಾರಣೆಗೆ ಚರ್ಮ ಬಳಸಲಾಗುತ್ತದೆ. ಇದರಿಂದ ಅವರು ಸಾವಿನ ದವಡೆಯಿಂದ ಪಾರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಹಮದಾಬಾದ್‌ನ ವ್ಯಕ್ತಿಯೊಬ್ಬರು ತಮ್ಮ ಪತ್ನಿಗಾಗಿ ನಮ್ಮ ಬ್ಯಾಂಕ್‌ನಿಂದ ಚರ್ಮ ಪಡೆದಿದ್ದರು. ಚಿಕಿತ್ಸೆ ನೀಡುತ್ತಿದ್ದ ಡಾ.ವಿಜಯ್ ಬಾಟಿಯಾ ಅವರಿಂದ ಮನವಿ ಪತ್ರ ತಂದಿದ್ದರು. ಸುಟ್ಟು ಗಾಯಗಳಾಗಿದ್ದ ಮಹಿಳೆಯ ಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಗುಣಮುಖವಾಗಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಇದಕ್ಕೆ ನೆರವಾದ ಸಮಾಧಾನ ನಮ್ಮ ಬ್ಯಾಂಕ್‌ನದು’ ಎಂದು ಕೆಎಲ್‌ಇ–ರೋಟರಿ ಚರ್ಮ ಬ್ಯಾಂಕ್ ಸಂಯೋಜಕ ಡಾ.ರಾಜೇಶ್ ಪವಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾವು ನೀಡಿದ ಚರ್ಮ ಕೋವಿಡ್–19 ಸೋಂಕು ಕಾಣಿಸಿಕೊಂಡಿದ್ದಕ್ಕಿಂತಲೂ ಮುಂಚೆ ಸಂಗ್ರಹಿಸಿದ್ದಾಗಿದೆ. ಮರಣೋತ್ತರವಾಗಿ ದಾನ ಮಾಡಿದವರಿಂದ ವೈಜ್ಞಾನಿಕವಾಗಿ ಸಂಗ್ರಹಿಸಿ ಇಡುತ್ತೇವೆ. ಗಡಿಯ ಮಿತಿ ಇಲ್ಲ. ನಮ್ಮಲ್ಲಿ ಚರ್ಮ ಲಭ್ಯವಿತ್ತು. ಕೊಡುವ ಮೂಲಕ ಸಂಕಷ್ಟದಲ್ಲಿದ್ದವರಿಗೆ ನೆರವಾಗಿದ್ದೇವೆ. ಆ ಕುಟುಂಬದವರ ಮೊಗದಲ್ಲಿ ನಗೆ ಮೂಡಲು ಕೊಡುಗೆ ನೀಡಿದ ಹೆಮ್ಮೆ ಬ್ಯಾಂಕ್‌ನದು’ ಎನ್ನುತ್ತಾರೆ ಅವರು.
‘ಬೈಲಹೊಂಗಲದ ಡಾ.ರಾಮಣ್ಣ ಚಾರಿಟಬಲ್ ಟ್ರಸ್ಟ್ ಡಾ.ಮಹಾಂತೇಶ ರಾಮಣ್ಣವರ ಅವರು ಚರ್ಮ ದಾನದ ಮಹತ್ವದ ಬಗ್ಗೆ ತಿಳಿಸಿ ಜಾಗೃತಿ ಮೂಡಿಸುತ್ತಿದ್ದರು. ಇದರಿಂದಾಗಿ ಬಹಳಷ್ಟು ಮಂದಿ ನಮ್ಮ ಬ್ಯಾಂಕ್‌ಗೆ ಚರ್ಮ ದಾನ ಮಾಡಿದ್ದಾರೆ. ಗಾಯಗೊಂಡವರ ಗಾಯದ ಪ್ರಮಾಣದ ಆಧರಿಸಿ ಚಿಕಿತ್ಸೆಗೆ ಬೇಕಾಗುವ ಚರ್ಮವನ್ನು ವೈದ್ಯರ ಕೋರಿಗೆ ಮೇರೆಗೆ ನೀಡಲಾಗುವುದು’ ಎಂದು ತಿಳಿಸಿದರು.
‘ಕೋವಿಡ್–19 ಕಾಣಿಸಿಕೊಂಡ ನಂತರ, ಮುಂಜಾಗ್ರತಾ ಕ್ರಮವಾಗಿ ಬ್ಯಾಂಕ್‌ನಲ್ಲಿ ಚರ್ಮ ದಾನ (ಪಡೆಯುವ) ಪ್ರಕ್ರಿಯೆ ನಿಲ್ಲಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.