ಬೆಳಗಾವಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮರಾಠ ಮತದಾರರು ಪ್ರಚೋದನೆಗೆ ಕಿವಿಗೊಡದೇ ರಾಷ್ಟ್ರೀಯತೆಗೆ ಓಗೊಟ್ಟರು. ಕಣದಲ್ಲಿದ್ದ ಎಂಇಎಸ್ ಬೆಂಬಲಿತ ಅಭ್ಯರ್ಥಿ ಮಹಾದೇವ ಪಾಟೀಲ ಅವರಿಗೆ ಕೇವಲ 9,425 ಮತಗಳನ್ನು ನೀಡಿದರು. ಆ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಿದರು.
‘ಇದು ಮರಾಠರ ಅಸ್ತಿತ್ವದ ಪ್ರಶ್ನೆ. ಗಡಿ ಸಮಸ್ಯೆ ಬಗ್ಗೆ ದೇಶದ ಗಮನ ಸೆಳೆಯಲು ಕಣಕ್ಕೆ ಇಳಿದಿದ್ದೇವೆ’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು ‘ಪುಂಗಿ’ ಊದುತ್ತಲೇ ಇದ್ದರು. ಆದರೆ, ಅದಾವುದಕ್ಕೂ ತಲೆ ಕೆಡಿಸಿಕೊಳ್ಳದ ಪ್ರಜ್ಞಾವಂತ ಮತದಾರರು ಎರಡೂ ರಾಷ್ಟ್ರೀಯ ಪಕ್ಷಗಳತ್ತ ಒಲವು ತೋರಿದರು.
ಈ ಬಾರಿ ಬೆಳಗಾವಿ ಕ್ಷೇತ್ರದಲ್ಲಿ ಒಟ್ಟು 13,75,285 ಮತಗಳು ಚಲಾವಣೆಯಾಗಿವೆ. ಇದರಲ್ಲಿ ಬಿಜೆಪಿಗೆ 7,56,471 ಹಾಗೂ ಕಾಂಗ್ರೆಸ್‌ಗೆ 5,80,897 ಮತಗಳು ಬಂದಿವೆ. ಪ್ರಬಲ ಪೈಪೋಟಿ ನೀಡುತ್ತೇವೆ ಎಂಬ ಭ್ರಮೆಯಲ್ಲಿದ್ದ ಎಂಇಎಸ್ 10 ಸಾವಿರ ಗಡಿ ದಾಟಲೂ ಸಾಧ್ಯವಾಗಿಲ್ಲ.
‘ಲೋಕಸಭಾ ಚುನಾವಣೆ ರಾಷ್ಟ್ರದ ನಾಯಕತ್ವಕ್ಕಾಗಿ ನಡೆಯುತ್ತದೆ ಹೊರತು; ಯಾವುದೋ ಸಂಘಟನೆಯ ಅಸ್ತಿತ್ವಕ್ಕಾಗಿ ಅಲ್ಲ’ ಎಂಬುದನ್ನು ಮತದಾರರು ಸಾರಿ ಹೇಳಿದರು.
‘ಮರಾಠರು ಕಟ್ಟಾ ಹಿಂದುತ್ವ ವಾದಿಗಳು. ಹೀಗಾಗಿ, ಬಿಜೆಪಿಗೇ ಅವರ ಬೆಂಬಲ ಸಿಗುತ್ತದೆ’ ಎಂಬುದು ಜನಜನಿತ ಮಾತು. ಎಂಇಎಸ್‌ನಿಂದ ಮರಾಠಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬಿಜೆಪಿಗೆ ಅಡ್ಡಗಾಲು ಆಗುತ್ತದೆ ಎಂಬುದು ಕೆಲವರ ಲೆಕ್ಕಾಚಾರವಾಗಿತ್ತು. 2021ರ ಉಪ ಚುನಾವಣೆಯಲ್ಲಿ ಈ ಲೆಕ್ಕಾಚಾರ ಬಹುತೇಕ ಸಫಲವೂ ಆಗಿತ್ತು. ಆಗ ಎಂಇಎಸ್ ಅಭ್ಯರ್ಥಿಯಾಗಿದ್ದ ಶುಭಂ ಶೆಳಕೆ 1.23 ಲಕ್ಷ ಮತಗಳನ್ನು ಬಾಚಿಕೊಂಡಿದ್ದರು.
ಆದರೆ, ಈ ಬಾರಿ ಅಂಥದ್ದೇ ‘ಗಾಳ’ ಕೆಲಸ ಮಾಡಲಿಲ್ಲ. ಯಾವಾಗಲೂ ಪ್ರಚೋದನಾತ್ಮಕ ಹೋರಾಟ ಮಾಡುವ ಎಂಇಎಸ್ ನಾಯಕರು ಈ ಬಾರಿ ದಿಕ್ಕಾಪಾಲಾದರು. ಠೇವಣಿ ಕೂಡ ಪಡೆದುಕೊಳ್ಳದಷ್ಟು ಅಸಮರ್ಥರು ಎಂದು ತೋರಿಸಿಕೊಂಡರು.
ಚುನಾವಣೆ ವೇಳೆ ಬಹಿರಂಗವಾಗಿ ಮಾತನಾಡಿದ ಎಂಇಎಸ್‌ನ ಹಿರಿಯ ನಾಯಕ ಶಿವಾಜಿ ಸುಂಠಕರ, ‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲು ಮುಂದಾಗಿದ್ದೇವೆ. ಬೆಳಗಾವಿ ದಕ್ಷಿಣ, ಉತ್ತರ ಹಾಗೂ ಗ್ರಾಮೀಣ ಕ್ಷೇತ್ರದ ಮರಾಠಿ ಭಾಷಿಕರೆಲ್ಲರೂ ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕು’ ಎಂದು ಕರೆ ಕೊಟ್ಟರು.
‘ರಾಷ್ಟ್ರೀಯತೆ ವಿಚಾರ ಬಂದಾಗ, ನಾವು ಭಾಷೆ, ಗಡಿ ವಿಷಯಗಳನ್ನೆಲ್ಲ ಮೀರಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂಬ ಅವರ ಮಾತು ಇಲ್ಲಿ ಗಮನಾರ್ಹ. ಇದಕ್ಕೆ ಮೋಹನ ಮೋರೆ, ದೀಪಕ ವಾಘೇಲಾ, ಅನಿಲ ಪಾಟೀಲ ಮುಂತಾದ ಮುಖಂಡರೂ ದನಿಗೂಡಿಸಿದ್ದರು.
‘ಜಗದೀಶ ಶೆಟ್ಟರ್‌ಗೆ ಮತ ನೀಡಿದರೆ ಪ್ರಧಾನಿ ನರೇಂದ್ರ ಮೋದಿಗೆ ಹೋಗುತ್ತದೆ’ ಎಂಬ ಬಿಜೆಪಿಯ ಪ್ರಚಾರ ಮರಾಠಿಗರನ್ನು ಒಂದುಗೂಡಿಸಿತು. ಬೆಳಗಾವಿಯ ಗಲ್ಲಿ–ಗಲ್ಲಿಗಳಲ್ಲಿ, ಬಡಾವಣೆಗಳಲ್ಲಿ, ಹಳ್ಳಿಗಳಲ್ಲಿ ನೆಲೆ ಕಂಡುಕೊಂಡ ಮರಾಠಿಗರು ‘ಮುಖ್ಯವಾಹಿನಿ’ಗೆ ಬಂದಿದ್ದಾರೆ.
ದಶಕಗಳ ಹಿಂದೆ ಮೂವರು ಶಾಸಕರನ್ನು ಗೆಲ್ಲಿಸುತ್ತಿದ್ದ ಎಂಇಎಸ್; ಈಗ ಪಾಲಿಕೆಯ ಸದಸ್ಯ ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗುತ್ತಿಲ್ಲ.
‘ಅಸ್ತಿತ್ವ ಇರುವುದು ರಾಷ್ಟ್ರೀಯತೆಯಲ್ಲಿ’ ಎಂಬುದನ್ನು ಮರಾಠ ಮತದಾರರು ಮತ್ತೆ ಸಾಬೀತು ಮಾಡಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಬೆಂಬಲದಿಂದಲೇ ಎಂಇಎಸ್ ತನ್ನ ‘ಹಾರಾಟ’ವನ್ನು ಜೀವಂತವಾಗಿ ಇಟ್ಟುಕೊಂಡಿದೆ. ಆದರೆ ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ಬೆಂಬಲಿತ ಸರ್ಕಾರವಿದೆ. ಶಿವಸೇನೆ ಸರ್ಕಾರವನ್ನು ಬೀಳಿಸಿದ ಏಕನಾಥ ಶಿಂದೆ ಬಿಜೆಪಿ ಬೆಂಬಲದಿಂದಲೇ ಮುಖ್ಯಮಂತ್ರಿ ಆದವರು. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಅವರು ಬಿಜೆಪಿ ಪರ ನಿಲ್ಲುತ್ತಾರೋ ಅಥವಾ ಎಂಇಎಸ್‌ಗೆ ಬೆಂಬಲವಾಗುತ್ತಾರೋ ಎಂಬ ಪ್ರಶ್ನೆ ದೊಡ್ಡ ಸುದ್ದಿಯಾಯಿತು. ಎಂಇಎಸ್‌ನ ಯಾವುದೇ ಕರೆಗೂ ಬೆಲೆ ಕೊಡದ ಏಕನಾಥ ಜಾಣತನ ಪ್ರದರ್ಶಿಸಿದರು. ಬೆಳಗಾವಿಗೆ ಬಂದು ಎಂಇಎಸ್‌ಗೆ ಮುಖಭಂಗ ಮಾಡುವ ಬದಲು; ಖಾನಾಪುರದಲ್ಲಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡರು. ಅಲ್ಲಿಂದಲೇ ಮರಾಠರ ಮತಗಳನ್ನು ಬಿಜೆಪಿಯತ್ತ ಕ್ರೋಡೀಕರಿಸಲು ಯತ್ನಿಸಿದರು.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 52 ಸಾವಿರ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 85 ಸಾವಿರ ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮರಾಠ ಮತದಾರರು ಇದ್ದಾರೆ ಎಂಬುದು ಅಂದಾಜು ಲೆಕ್ಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.