ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ ಆಚರಿಸುವ ವೇಳೆ ಗದ್ದಲ ಉಂಟಾಗಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಕೋವಿಡ್ ಮಾರ್ಗಸೂಚಿ ಹಾಗೂ ನಿಷೇಧಾಜ್ಞೆ ಉಲ್ಲಂಘಿಸಿ ಜಮಾಯಿಸಿದ್ದವರ ಮೇಲೆ ಲಾಠಿ ಬೀಸಿದರು.
ಬಿ.ಕೆ. ಮಾಡೆಲ್ ಶಾಲೆ ಆವರಣದ ಸಮೀಪ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪಕ್ಷಗಳ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಬೆಂಬಲಿಗರು, ಗುಲಾಲು ಹಾಗೂ ಬಣ್ಣ ಎರಚುತ್ತಾ ಕೂಗಾಡುತ್ತಿದ್ದರು. ಈ ವೇಳೆ ಪೊಲೀಸರ ಮೇಲೂ ಕೆಲವರು ಬಣ್ಣ ಎರಚಿದರು. ಆಗ, ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ನಡೆಸಿದರು. ಅಂಬಾಭವನ ಹೋಟೆಲ್ ಬಳಿ ಬ್ಯಾರಿಕೇಡ್ ದಾಟಿ ಬರಲು ಕೆಲವರು ಪ್ರಯತ್ನಿಸುತ್ತಿದ್ದರು. ಅವರನ್ನು ಪೊಲೀಸರು ಚದುರಿಸಿದರು.
ತಪ್ಪಿಸಿಕೊಂಡು ಓಡುವ ಭರದಲ್ಲಿ ಕೆಲವರು ಕೆಳಕ್ಕೆ ಬಿದ್ದರು. ಕೆಲವರು ವಾಹನಗಳ ಮೇಲೂ ಬಿದ್ದರು. ಈ ವೇಳೆ ಕೆಲವು ವಾಹನಗಳು ಕೂಡ ಉರುಳಿದವು.
ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ!
ವಿಜೇತರು, ಅವರ ಬೆಂಬಲಿಗರು ಹಾಗೂ ರಾಜಕೀಯ ಪಕ್ಷದವರು ನಿಷೇಧಾಜ್ಞೆ ಉಲ್ಲಂಘಿಸಿ ವಿಜಯೋತ್ಸವ ಮೆರವಣಿಗೆ ನಡೆಸಿದರು.
ನಿಷೇಧಾಜ್ಞೆ ಜಾರಿಯಲ್ಲಿದ್ದು, ಮೆರವಣಿಗೆ ಅಥವಾ ವಿಜಯೋತ್ಸವ ಆಚರಿಸಲು ಅವಕಾಶವಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿತ್ತು. ಆದರೆ, ಇದಕ್ಕೆ ಬಹುತೇಕರು ಮಣೆ ಹಾಕಲಿಲ್ಲ. ರಾತ್ರಿವರೆಗೂ ಅಲ್ಲಲ್ಲಿ ಮೆರವಣಿಗೆ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಕಾರ್ಯಕ್ರಮಗಳು ಮುಂದುವರಿದಿದ್ದವು. ಗೆದ್ದ ಕಡೆಯವರು ಗುಲಾಲು ಎರಚಿ, ಪರಸ್ಪರ ಹಚ್ಚಿ ಸಂಭ್ರಮಿಸಿದರು. ಈ ವೇಳೆ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮೊದಲಾದ ಕೋವಿಡ್ ಮಾರ್ಗಸೂಚಿಯನ್ನು ಗಾಳಿಗೆ ತೂರಿದರು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.