ADVERTISEMENT

ಬೆಳಗಾವಿಗೆ ಬೇಕಿದೆ ‘ಸರ್ಕಾರಿ’ ಪದವಿ ಕಾಲೇಜು

ಈಗ ಮಹಾನಗರದಲ್ಲಿರುವುದು ಮಹಿಳಾ ಕಾಲೇಜು ಮಾತ್ರ, ಪದವಿ ಶಿಕ್ಷಣಕ್ಕಾಗಿ ಯುವಕರ ಪರದಾಟ

ಇಮಾಮ್‌ಹುಸೇನ್‌ ಗೂಡುನವರ
Published 24 ಜೂನ್ 2024, 4:09 IST
Last Updated 24 ಜೂನ್ 2024, 4:09 IST
ಬೆಳಗಾವಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಹೊರನೋಟ –ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಹೊರನೋಟ –ಪ್ರಜಾವಾಣಿ ಚಿತ್ರ   

ಬೆಳಗಾವಿ: ಬೆಳಗಾವಿ ಮಹಾನಗರದಲ್ಲಿ ಪದವಿ ಶಿಕ್ಷಣಕ್ಕಾಗಿ ಮಹಿಳೆಯರಿಗೆ ಪ್ರತ್ಯೇಕವಾದ ಸರ್ಕಾರಿ ಕಾಲೇಜು ಇದೆ. ಆದರೆ, ಪುರುಷರಿಗಾಗಿ(ಯುವಕರಿಗಾಗಿ) ಸರ್ಕಾರಿ ಪದವಿ ಮಹಾವಿದ್ಯಾಲಯ ಇಲ್ಲದ್ದರಿಂದ ಅವರು ಖಾಸಗಿ ಕಾಲೇಜುಗಳನ್ನೇ ಅವಲಂಬಿಸುವಂತಾಗಿದೆ.

ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ಪದವಿ ಕಾಲೇಜುಗಳಿವೆ. ಅಲ್ಲಿ ಯುವಕರು, ಯುವತಿಯರು ಶಿಕ್ಷಣ ಪಡೆಯುತ್ತಿದ್ದಾರೆ. 2006ರಲ್ಲಿ ಬೆಳಗಾವಿಯಲ್ಲೂ ಆರಂಭಗೊಂಡಿದ್ದ ಇಂಥದ್ದೊಂದು ಕಾಲೇಜು 2013ರವರೆಗೆ ಕಾರ್ಯನಿರ್ವಹಿಸಿತ್ತು. ಬಿ.ಎ, ಬಿ.ಕಾಂ ಮತ್ತು ಬಿ.ಎಸ್ಸಿ ತರಗತಿಗಳು ನಡೆಯುತ್ತಿದ್ದವು. ವಿದ್ಯಾರ್ಥಿಗಳ ಸಂಖ್ಯೆಯೂ ಉತ್ತಮವಾಗಿತ್ತು.

ಆದರೆ, 2013ರಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದವರು ಆ ಮಹಾವಿದ್ಯಾಲಯವನ್ನು ತಮ್ಮ ವ್ಯಾಪ್ತಿಗೆ ತೆಗೆದುಕೊಂಡು, ‘ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ’ ಎಂದು ಮರುನಾಮಕರಣ ಮಾಡಿದರು.

ADVERTISEMENT

ಈ ಕಾಲೇಜು ವಿಶ್ವವಿದ್ಯಾಲಯದ ಪಾಲಾದ ನಂತರ, ಸರ್ಕಾರ ನಿಯಮದಂತೆ ಮತ್ತೊಂದು ಸರ್ಕಾರಿ ಪದವಿ ಕಾಲೇಜು ತೆರೆಯಬೇಕಿತ್ತು. ಇದರಿಂದ ಗ್ರಾಮೀಣ ಭಾಗದ ಮತ್ತು ಬಡ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುತ್ತಿತ್ತು. ಆದರೆ, ಇಂದಿಗೂ ಆ ಕೆಲಸವಾಗಿಲ್ಲ. ಇದರಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯೂ ಎದ್ದು ಕಾಣುತ್ತಿದೆ.

ಜಿಲ್ಲೆಯಲ್ಲಿ ಸದ್ಯ 22 ಸರ್ಕಾರಿ ಪದವಿ ಕಾಲೇಜುಗಳಿದ್ದು, ಕಾಲೇಜು ಶಿಕ್ಷಣ ಇಲಾಖೆಯಡಿ ಅವು ಕಾರ್ಯನಿರ್ವಹಿಸುತ್ತಿವೆ. ಅಥಣಿ ತಾಲ್ಲೂಕುವೊಂದರಲ್ಲೇ ಮೂರು ಕಾಲೇಜುಗಳಿವೆ. ಆದರೆ, ಬೆಳಗಾವಿ ತಾಲ್ಲೂಕಿನಲ್ಲಿರುವುದು ಎರಡೇ. ಒಂದು ನಗರದಲ್ಲಿ. ಇನ್ನೊಂದು 20 ಕಿ.ಮೀ ದೂರದ ಕೆ.ಕೆ.ಕೊಪ್ಪದಲ್ಲಿ.

2014-15ನೇ ಸಾಲಿನಲ್ಲಿ ಬೆಳಗಾವಿಯಲ್ಲಿ ಆರಂಭಗೊಂಡ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಪ್ರಸ್ತುತ 700ಕ್ಕೂ ಅಧಿಕ ವಿದ್ಯಾರ್ಥಿನಿಯರು ಬಿ.ಎ, ಬಿ.ಕಾಂ ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲಿಯೂ ಹೇಳಿಕೊಳ್ಳುವಂಥ ಮೂಲಸೌಕರ್ಯವಿಲ್ಲ.

ಸಾಕಷ್ಟು ಬೇಡಿಕೆ: ವೇಗವಾಗಿ ಬೆಳೆಯುತ್ತಿರುವ ಬೆಳಗಾವಿ ನಗರ ಈಗ ‘ಎಜ್ಯುಕೇಷನ್ ಹಬ್’ ಆಗಿ ಬೆಳೆಯುತ್ತಿದೆ. ಜಿಲ್ಲೆಯ ವಿವಿಧೆಡೆಯಿಂದ ಇಲ್ಲಿ ಕಲಿಕೆಗಾಗಿ ಸಾವಿರಾರು ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಇಲ್ಲಿ ಸರ್ಕಾರಿ ಪದವಿ ಕಾಲೇಜು ತೆರೆಯಬೇಕೆಂಬ ಬೇಡಿಕೆ ಹೆಚ್ಚಿದೆ. ಆದರೆ, ಈವರೆಗೂ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯನ್ನು ‘ಪ್ರಜಾವಾಣಿ’ ಸಂಪರ್ಕಿಸಿದರೂ ಲಭ್ಯವಾಗಲಿಲ್ಲ.

ಎಲ್ಲ ಜಿಲ್ಲಾ ಕೇಂದ್ರಗಳಂತೆ ಬೆಳಗಾವಿಯಲ್ಲೂ ಯುವಕ ಯುವತಿಯರ ಕಲಿಕೆಗೆ ಪೂರಕವಾದ ಸರ್ಕಾರಿ ಪದವಿ ಕಾಲೇಜು ಆರಂಭವಾಗಬೇಕು. ಇದರಿಂದ ಬಡ ಮತ್ತು ತಳ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದು.

-ಡಿ.ಎಸ್.ಚೌಗಲೆ ಖಾಸಗಿ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ

ಬೆಳಗಾವಿಯಲ್ಲಿ ಹೊಸದಾಗಿ ಸರ್ಕಾರಿ ಪದವಿ ಕಾಲೇಜು ಆರಂಭಿಸುವಂತೆ ಹೋರಾಟ ಮಾಡುತ್ತಿದ್ದೇವೆ. ಈ ಹಿಂದೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಸ್ಪಂದನೆ ಸಿಕ್ಕಿಲ್ಲ

-ಮಹಾಂತೇಶ ಬಿಳೂರ ಜಿಲ್ಲಾ ಸಂಚಾಲಕ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟುಡೆಂಟ್ಸ್ ಆರ್ಗನೈಸೇಷನ್ ಬೆಳಗಾವಿ

ಬ್ಯಾಟರಾಯನಪುರಕ್ಕೆ ಸ್ಥಳಾಂತರ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬಾಡದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು. ಅದನ್ನು ಬೆಳಗಾವಿ ಬಳಿಯೇ ಇರುವ ಉಚಗಾವಿಗೆ ಸ್ಥಳಾಂತರಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆಯೂ ಆಗಿರುವ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ ರಾಜ್ಯ ಸರ್ಕಾರ ಇದೇವರ್ಷ ಆ ಕಾಲೇಜನ್ನು ಬೆಂಗಳೂರಿನ ಬ್ಯಾಟರಾಯನಪುರಕ್ಕೆ ಸ್ಥಳಾಂತರಿಸಿ ಜೂನ್ 12ರಂದು ಆದೇಶ ಹೊರಡಿಸಿದೆ. ಬೆಳಗಾವಿ ಸಮೀಪದಲ್ಲಾದರೂ ಸರ್ಕಾರಿ ಪದವಿ ಕಾಲೇಜು ಸ್ಥಳಾಂತರವಾಗಬಹುದು ಎಂದು ನಿರೀಕ್ಷಿಸಿದ್ದ ವಿದ್ಯಾರ್ಥಿಗಳಿಗೆ ಮತ್ತೆ ನಿರಾಸೆಯಾಗಿದೆ.

ಎಲ್ಲೆಲ್ಲಿ ಸರ್ಕಾರಿ ಪದವಿ ಕಾಲೇಜುಗಳಿವೆ?

ಬೆಳಗಾವಿ ಕೆ.ಕೆ.ಕೊಪ್ಪ ಬೈಲಹೊಂಗಲ ನೇಸರಗಿ ಖಾನಾಪುರ ಬೀಡಿ ಚನ್ನಮ್ಮನ ಕಿತ್ತೂರು ಸವದತ್ತಿ ಯರಗಟ್ಟಿ ರಾಮದುರ್ಗ ಹುಕ್ಕೇರಿ ಪಾಶ್ಚಾಪುರ ಗೋಕಾಕ ಚಿಕ್ಕೋಡಿ ಸದಲಗಾ ರಾಯಬಾಗ ಹಾರೂಗೇರಿ ಅಥಣಿ ತೆಲಸಂಗ ಕೊಕಟನೂರ ಐನಾಪುರ ನಿಪ್ಪಾಣಿ.

ಶಿಕ್ಷಣವನ್ನೇ ಮೊಟಕುಗೊಳಿಸುತ್ತಿದ್ದಾರೆ

‘ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆ. ಆದರೆ ಎಲ್ಲರಿಗೂ ಪ್ರವೇಶ ಸಿಗುತ್ತಿಲ್ಲ. ಹಾಗಾಗಿ ಕೆಲವರು ಖಾಸಗಿ ಕಾಲೇಜಿನತ್ತ ತೆರಳುತ್ತಿದ್ದಾರೆ. ಬಡವರು ಶಿಕ್ಷಣವನ್ನೇ ಮೊಟಕುಗೊಳಿಸುತ್ತಿದ್ದಾರೆ’ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ‘ಘಟಕ ಮಹಾವಿದ್ಯಾಲಯಕ್ಕೆ ಹೋಲಿಸಿದರೆ ಸರ್ಕಾರಿ ಕಾಲೇಜಿನಲ್ಲಿ ವಿವಿಧ ಕೋರ್ಸ್‌ಗಳ ಶುಲ್ಕವೂ ಕಡಿಮೆ ಇದೆ. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ಕಾರ ಲ್ಯಾಪ್‌ಟಾಪ್‌ ಮತ್ತಿತರ ಸೌಕರ್ಯ ಕಲ್ಪಿಸುತ್ತದೆ. ಘಟಕ ಮಹಾವಿದ್ಯಾಲಯದಲ್ಲಿ ಓದಿದರೆ ಈ ಸೌಕರ್ಯಗಳಿಂದ ವಂಚಿತರಾಗಬೇಕಾಗುತ್ತದೆ’ ಎಂಬುದು ಅವರ ಅಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.