ADVERTISEMENT

ರಾಮದುರ್ಗ | ‘ಬೆಳವಲ’ ಮಾರಾಟ ಜೋರು

ಗೊಡಚಿ ಜಾತ್ರೆ: ಹರಿದು ಬಂದ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2023, 4:59 IST
Last Updated 27 ಡಿಸೆಂಬರ್ 2023, 4:59 IST
ರಾಮದುರ್ಗ ತಾಲ್ಲೂಕಿನ ಸುಕ್ಷೇತ್ರ ಗೊಡಚಿಯಲ್ಲಿ ಬಳವೊಲು ಹಣ್ಣಿನ ವ್ಯಾಪಾರವು ಭರ್ಜರಿಯಾಗಿತ್ತು
ರಾಮದುರ್ಗ ತಾಲ್ಲೂಕಿನ ಸುಕ್ಷೇತ್ರ ಗೊಡಚಿಯಲ್ಲಿ ಬಳವೊಲು ಹಣ್ಣಿನ ವ್ಯಾಪಾರವು ಭರ್ಜರಿಯಾಗಿತ್ತು   

ರಾಮದುರ್ಗ: ಗೊಡಚಿ ವೀರಭದ್ರೇಶ್ವರ ರಥೋತ್ಸವದ ಸಮಯಕ್ಕೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಯಾತ್ರಿಕರು ಬಳವೊಲು ಹಣ್ಣಿನ ವ್ಯಾಪಾರದಲ್ಲಿ ಮಗ್ನರಾಗಿ ಗೊಡಚಿ ಜಾತ್ರೆಯು ‘ಬಳವೊಲು ಹಣ್ಣಿನ ಪ್ರಸಿದ್ದ ಜಾತ್ರೆ’ ಎನ್ನುವುದನ್ನು ಮಂಗಳವಾರ ಸಾಬೀತು ಪಡಿಸಿದರು.

ಸುಮಾರು 15–20 ಟ್ರಕ್‌ಗಳಲ್ಲಿ ಆಮದು ಮಾಡಿಕೊಂಡ ಬಳವೊಲು ಹಣ್ಣಿನ ವ್ಯಾಪಾರವು ಅತೀ ಅಗ್ಗದ ಬೆಲೆಗೆ ಲಭ್ಯವಾಗಿದ್ದರಿಂದ ಯಾತ್ರಿಕರು ಮುಗಿಬಿದ್ದು ಖರೀದಿಸಿದರು.

ಪಾಡಿಗೆ ಬಂದಿರುವ ಬಳವೊಲು ಹಣ್ಣಿನೊಳಗಿನ ಎಲ್ಲ ಪದಾರ್ಥವನ್ನು ಹೊರಗೆ ತೆಗೆದು ಅದಕ್ಕೆ ಸಿಹಿಬೆಲ್ಲ ಸೇರಿಸಿ ಮತ್ತೆ ಸೊಗಟೆಗೆ ತುಂಬಿ ಒಂದು ದಿನ ಕಳೆಯುವಂತೆ ಇಡಬೇಕು. ಒಂದು ದಿನ ಬಿಟ್ಟು ಸವಿದರೆ ಉತ್ತರ ಕರ್ನಾಟಕದ ಹುಗ್ಗಿಯ ಸವಿ ದೊರಕುತ್ತದೆ ಎನ್ನುತ್ತಾರೆ ಖರೀದಾರರು.

ADVERTISEMENT

ಈ ಸಾರಿಯ ಬೋರೆ ಹಣ್ಣು ಮತ್ತು ಬಾಳೆ ಹಣ್ಣಿನ ವ್ಯಾಪಾರವು ಅತ್ಯಂತ ಭರ್ಜರಿಯಾಗಿಯೇ ನಡೆಯಿತು. ಉತ್ತಮ ಬೆಳೆ ಬಂದ ಪ್ರಯುಕ್ತ ಡಜನ್‌ ಬಳವೊಲು ಹಣ್ಣಿಗೆ ₹120 ದರದಲ್ಲಿ ಮಾರಾಟವಾದವು. ಕೆ.ಜಿ. ಬೋರೆ ಹಣ್ಣಿಗೆ ₹30ರ ದರದಲ್ಲಿ ಮಾರಿದರೆ ಉತ್ತಮ ತಳಿಯ ರೇಷ್ಮೆ ಬಾಳೆಹಣ್ಣು ₹40ಕ್ಕೆ ಒಂದು ಡಜನ್‌ ಲಭ್ಯವಾಗುತ್ತಿತ್ತು. ಜವಾರಿ ಬಾಳೆ ಹಣ್ಣು ಸಹ ₹50ಕ್ಕೆ ದೊರೆಯುತ್ತಿತ್ತು.

‘ಕಚ್ಚಾ ಕಾಯಿಗಳನ್ನು ಭಟ್ಟೆ ಇಳಿಸುವ ಮತ್ತು ಸಾಗಾಟ ಮಾಡುವ ವೆಚ್ಚವು ಲಾಭದಲ್ಲಿ ಸಮ ಹೊಂದುತ್ತದೆ. ಲಾಭ ಎಲ್ಲಿಂದ ಬರಬೇಕು. ಪಾಡಿಗೆ ಬಿದ್ದಿರುವ ಬಳವೊಲು ಹಣ್ಣನ್ನು ಹಾವೇರಿ ಮತ್ತು ಶಿಗ್ಗಾವಿಯಿಂದ ತಂದು ಮಾರಬೇಕಾಗುತ್ತದೆ’ ಎನ್ನುತ್ತಾರೆ ಬಳವೊಲು ಹಣ್ಣಿನ ವ್ಯಾಪಾರಿಗಳು.

ಗೊಡಚಿಯ ಜಾತ್ರೆಯಲ್ಲಿ ಭಾರಿ ಗದ್ದಲ ನೂಕು ನುಗ್ಗಲು ಇದ್ದರೂ ಅಚ್ಚುಕಟ್ಟಾಗಿ ನಡೆಯಿತು. ಗ್ರಾಮ ಪಂಚಾಯಿತಿ ಮತ್ತು ಜಾತ್ರಾ ಕಮಿಟಿಯವರು ಯಾತ್ರಿಗಳ ಅನುಕೂಲಕ್ಕಾಗಿ ಬಳೆಪೇಟೆ, ಆಟಿಕೆ, ಬಾಳೆಹಣ್ಣು, ಬೋರೆಹಣ್ಣು, ಬಳವೊಲು ಹಣ್ಣಿನ ಮಾರಾಟಕ್ಕಾಗಿ ಪ್ರತ್ಯೇಕ ಸ್ಥಾನಗಳನ್ನು ನಿಗದಿಪಡಿಸಿ ಶಿಸ್ತು ಅನುಸರಿಸಿದರು.

ಗೊಡಚಿ ಜಾತ್ರೆಗೆ ಲಕ್ಷಾಂತರ ಭಕ್ತರ ದಂಡು ಬರುತ್ತದೆ. ಜನರ ದಟ್ಟನೆಯಿಂದ ಜಾತ್ರೆಯ ತುಂಬೆಲ್ಲ ದೂಳು ಆವರಿಸಿರುತ್ತದೆ. ಅದನ್ನು ನಿವಾರಿಸಲು ಗ್ರಾಮ ಪಂಚಾಯ್ತಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದರೂ ಜಾತ್ರೆಯಲ್ಲಿ ದೂಳು ತುಂಬಿತ್ತು.

ರಾಮದುರ್ಗ ತಾಲ್ಲೂಕಿನ ಸುಕ್ಷೇತ್ರ ಗೊಡಚಿಯ ಜಾತ್ರೆಯಲ್ಲಿ ಜನ ಬೋರೆ ಹಣ್ಣಿನ ಖರೀದಿಯಲ್ಲಿ ತೊಡಗಿದ್ದರು.
ಪ್ರತಿ ಸಾರಿ ಜಾತ್ರೆಗೆ ಬಂದಾಗೊಮ್ಮೆ ಬಳವೊಲು ಹಣ್ಣು ಖರೀಸಿಕೊಂಡು ಹೋದಾಗ ಮಾತ್ರ ಜಾತ್ರೆ ಪರಿಪೂರ್ಣಗೊಳ್ಳುತ್ತದೆ. ಗೊಡಚಿ ಜಾತ್ರೆ ವೀರಭದ್ರನ ಜಾತ್ರೆ ಎನ್ನುವುದಕ್ಕಿಂತಲೂ ಬಳವೊಲು ಹಣ್ಣಿನ ಜಾತ್ರೆಯಾಗಿದೆ
ಸುಧಾ ಹಾದಿಮನಿ ಯಾತ್ರಿಕರು

ಕಾಲು ನಡಿಗೆಯ ಜಾತ್ರೆ ಗೊಡಚಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ದೂರದ ಊರುಗಳಿಂದ ಸಾಕಷ್ಟು ಜನ ವಾಹನ ಚಕ್ಕಡಿ ಬಂಡಿಗಳಲ್ಲಿ ಬಂದು ಸೇರುತ್ತಾರೆ. ದೇವರಿಗೆ ಹರಕೆ ತೀರಿಸುವ ಜನ ಮಾತ್ರ ದೂರದ ಊರುಗಳಿಂದಲೂ ನಡೆದುಕೊಂಡೆ ಬರುವುದು ಇಲ್ಲಿ ಸಂಪ್ರದಾಯವಾಗಿದೆ. ಕಾಲು ನಡಿಗೆಯಲ್ಲಿ ಬರುವ ಭಕ್ತರ ದಣಿವು ಆರಿಸಿಕೊಳ್ಳಲು ಕೆಲ ಸಂಘ ಸಂಸ್ಥೆಗಳು ಮತ್ತು ಭಕ್ತರು ಕಾಲು ನಡಿಗೆಯ ಭಕ್ತರಿಗೆ ದಾರಿಯುದ್ದಕ್ಕೂ ಅಲ್ಪೋಪಹಾರದ ವ್ಯವಸ್ಥೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.