ADVERTISEMENT

ಬಾಕ್ಸಿಂಗ್‌ನಲ್ಲಿ ಮಿಂಚುತ್ತಿರುವ ನಾಗೇಶ

ಯೋಧರ ಕುಟುಂಬ ಹಿನ್ನೆಲೆ; ಶಾಲಾ ಹಂತದಲ್ಲೇ ಅಖಾಡಕ್ಕೆ

ಮಹಾಂತೇಶ ಜಾಂಗಟಿ
Published 27 ಆಗಸ್ಟ್ 2019, 19:30 IST
Last Updated 27 ಆಗಸ್ಟ್ 2019, 19:30 IST
ನಾಗೇಶ ಪಾಟೀಲ
ನಾಗೇಶ ಪಾಟೀಲ   

ಬೆಳಗಾವಿ: ಹಿಂದೊಮ್ಮೆ ಹವ್ಯಾಸಕ್ಕಾಗಿ ಬಾಕ್ಸಿಂಗ್‌ನಲ್ಲಿ ತೊಡಗಿಸಿಕೊಂಡ ಗ್ರಾಮೀಣ ಪ್ರತಿಭೆ ನಾಗೇಶ ಪಾಟೀಲ ಇಂದು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಮಿಂಚುತ್ತಿದ್ದಾರೆ.

ತಾಲ್ಲೂಕಿನ ‘ಅಷ್ಟೆ’ ಗ್ರಾಮದವಾದ ಅವರದು ಯೋಧರ ಕುಟುಂಬದ ಹಿನ್ನೆಲೆ. ತಂದೆ ಮಾರುತಿ ಸೈನಿಕರಾಗಿದ್ದರು. ಕೆಲ ವರ್ಷಗಳ ಹಿಂದೆ ಹುತಾತ್ಮರಾಗಿದ್ದಾರೆ. ತಾಯಿ ಅನಿತಾ ಸೈನ್ಯದ ಸಂವಹನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಗರದ ಕೇಂದ್ರಿಯ ವಿದ್ಯಾಲಯ ನಂ. 2ರಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದ ನಾಗೇಶ, ಅಲ್ಲಿ ತಮ್ಮ ಹಿರಿಯ ಸಹಪಾಠಿಗಳು ಬಾಕ್ಸಿಂಗ್ ಆಡುವುದನ್ನು ನೋಡಿ ತಾನು ಕೂಡ ಬಾಕ್ಸಿಂಗ್ ಕಲಿಯಬೇಕೆಂದು ಅಖಾಡಕ್ಕೆ ಇಳಿದಿದ್ದರು. ನಂತರ ಮರಾಠಾ ಲಘು ಪದಾತಿ ದಳದ (ಎಂಎಲ್‌ಐಆರ್‌ಸಿ) ಆವರಣದಲ್ಲಿ ತರಬೇತಿ ಆರಂಭಿಸಿದ್ದರು.

ADVERTISEMENT

ವಿವಿಧ ಪ್ರಶಸ್ತಿ:

2011ರಲ್ಲಿ ಚಂಡಿಗಡ ಹಾಗೂ 2012ರಲ್ಲಿ ಲಕ್ನೋದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಕಂಚಿನ ಪದಕ, 2013ರಲ್ಲಿ ಚೆನ್ನೈನಲ್ಲಿ ಜರುಗಿದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. 2015ರಲ್ಲಿ ಪುಣೆಯಲ್ಲಿ ಆಯೋಜಿಸಿದ್ದ ಮುಕ್ತ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. 2017 ಹಾಗೂ 2018ರಲ್ಲಿ ಬೆಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಬಾಕ್ಸಿಂಗ್‌ ಕ್ರೀಡೆಯಲ್ಲಿ ತಮ್ಮದೇ ಸಾಧನೆ ಮುಂದುವರಿಸಿದ್ದಾರೆ.

6 ಗಂಟೆ ತರಬೇತಿ:

ಸದ್ಯ ಎಂ.ಜಿ.‌ ಸ್ಪೋರ್ಟಿಂಗ್ ಅಕಾಡೆಮಿಯಲ್ಲಿ ತರಬೇತುದಾರ ಗಜೇಂದ್ರ ತ್ರಿಪಾಠಿ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಒಟ್ಟು 6 ಗಂಟೆಗಳ ಕಾಲ ತಾಲೀಮು ನಡೆಸುತ್ತಾರೆ.

‘ಅಂತರರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಿ ಪ್ರಶಸ್ತಿ ತಂದುಕೊಡಬೇಕೆಂಬ ಗುರಿ ಹೊಂದಿದ್ದೇನೆ. ಬಾಕ್ಸಿಂಗ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದೇನೆ. ಉತ್ತಮ ಸಾಧನೆಗಾಗಿ ಹೆಚ್ಚಿನ ಕಸರತ್ತು ನಡೆಸುತ್ತಿದ್ದೇನೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.