ADVERTISEMENT

ಯುದ್ಧವಿಮಾನ ಜೋಡಣಾ ಕಾರ್ಯ: ಜೊಲ್ಲೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 28 ಮೇ 2023, 14:14 IST
Last Updated 28 ಮೇ 2023, 14:14 IST
ನಿಪ್ಪಾಣಿಯಲ್ಲಿ ಪ್ರದರ್ಶನಕ್ಕಾಗಿ ಸಜ್ಜಾಗುತ್ತಿರುವ ಐಎಲ್-38 ಯುದ್ಧವಿಮಾನದ ಜೋಡಣೆಯ ಕಾರ್ಯವನ್ನು ಶಾಸಕಿ ಶಶಿಕಲಾ ಜೊಲ್ಲೆ ನಗರಸಭೆ ಸದಸ್ಯರೊಂದಿಗೆ ಪರಿಶೀಲಿಸಿದರು  
ನಿಪ್ಪಾಣಿಯಲ್ಲಿ ಪ್ರದರ್ಶನಕ್ಕಾಗಿ ಸಜ್ಜಾಗುತ್ತಿರುವ ಐಎಲ್-38 ಯುದ್ಧವಿಮಾನದ ಜೋಡಣೆಯ ಕಾರ್ಯವನ್ನು ಶಾಸಕಿ ಶಶಿಕಲಾ ಜೊಲ್ಲೆ ನಗರಸಭೆ ಸದಸ್ಯರೊಂದಿಗೆ ಪರಿಶೀಲಿಸಿದರು     

ನಿಪ್ಪಾಣಿ: ‘ಮಕ್ಕಳಲ್ಲಿ ದೇಶಾಭಿಮಾನ, ರಾಷ್ಟ್ರಭಕ್ತಿ ಬೆಳೆಸಲು ಸಹಕಾರಿಯಾಗಲಿರುವ ಮತ್ತು ನಗರದ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದಲ್ಲಿ ಪ್ರದರ್ಶನಕ್ಕಿಡಲಿರುವ ಯುದ್ಧವಿಮಾನವು ಒಂದು ಪರ್ಯಟನ ಸ್ಥಳವಾಗಲಿದ್ದು, ಪ್ರವಾಸಿಗರಿಗೆ ವಿಮಾನದೊಳಗೆ ಹೋಗಿ ನೋಡುವ ಅವಕಾಶ ಲಭಿಸಲಿದೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಸ್ಥಳೀಯ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದಲ್ಲಿ ಬೃಹತ್ ಆಕಾರದ ಯುದ್ಧವಿಮಾನ ಜೋಡಣೆಯ ಕಾರ್ಯವನ್ನು ಭಾನುವಾರ ಪರಿಶೀಲಿಸಿ ಅವರು ಮಾತನಾಡಿದರು.

‘ರಾಷ್ಟ್ರಭಕ್ತಿ, ದೇಶಾಭಿಮಾನದ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ, ಹುತಾತ್ಮರಾದ ಸೈನಿಕರನ್ನು ನೆನೆಯಲು, ಯುದ್ಧದ ಸಮಯದಲ್ಲಿ ನಮ್ಮ ಸೈನಿಕರು ಹೋರಾಡುವ ಪದ್ಧತಿ ಗುರುತಾಗುವ ನಿಟ್ಟಿನಲ್ಲಿ ಒಂದು ಯುದ್ಧ ವಿಮಾನ ನಮ್ಮ ಕ್ಷೇತ್ರಕ್ಕೆ ಒದಗಿಸಬೇಕೆಂದು ಕೇಂದ್ರ ಸರಕ್ಷಣಾ ಸಚಿವ ರಾಜನಾಥಸಿಂಗ ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದೇವು. ಕೇವಲ 15 ದಿನಗಳಲ್ಲಿ ಅವರು ಅದಕ್ಕೆ ಅನುಮೋದಿಸಿದರು. ಕಳೆದ 15 ದಿನಗಳಿಂದ ಎಸ್.ಕೆ. ಸಿಂಗ್ ನೇತೃತ್ವದಲ್ಲಿ ಸುಮಾರು 30 ಜನರಿಂದ ಜೋಡಣೆ ಕಾರ್ಯ ಭರದಿಂದ ಸಾಗಿದೆ. ನನ್ನ ಕಾರ್ಯಕರ್ತರು ಹಾಗೂ ಮತದಾರರ ಪರವಾಗಿ ರಾಜನಾಥಸಿಂಗ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.

ADVERTISEMENT

 ‘ಇಲ್ಲಿ ಆಕರ್ಷಕವಾದ ಉದ್ಯಾನವನ ನಿರ್ಮಿಸಲಾಗುವುದು, ಮಳೆಗಾಲದಲ್ಲಿ ಪ್ರವಾಸಿಗರಿಗೆ ತೊಂದರೆಯಾಗದ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಕೆಲವೇ ದಿನಗಳಲ್ಲಿ ಈ ಪರ್ಯಟನ ಸ್ಥಳದ ಉದ್ಘಾಟನೆಯಾಗಲಿದೆ. ನುಡಿದಂತೆ ನಡೆದಿದ್ದೇವೆ, ನಡೆಯುತ್ತಿದ್ದೇವೆ’ ಎಂದರು.

ವಿಮಾನ ಜೋಡಣೆಯ ಕಾರ್ಯದ ಪ್ರಮುಖ ಎಸ್.ಕೆ. ಸಿಂಗ್ ಮಾತನಾಡಿ ‘1971ರ ಯುದ್ಧದಲ್ಲಿ ಈ ಐಎಲ್-38 ವಿಮಾನದ ಪಾತ್ರ ಬಹುಮುಖ್ಯವಾಗಿತ್ತು. ನೌಕಾಪಡೆಗೆ ಸೇರಿದ್ದ ಈ ವಿಮಾನವು ಭಾರತದ ಸೈನಿಕರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿತ್ತು ಹಾಗೂ ಶತ್ರುಗಳ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿತ್ತು’ ಎಂದರು.

ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಮಾಜಿ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ಸದಸ್ಯ ರಾಜೇಂದ್ರ ಗುಂದೇಶಾ, ಸದ್ದಾಂ ನಗಾರಜಿ, ಸೋನಲ್ ಕೊಠಡಿಯಾ, ಪ್ರಭಾವತಿ ಸೂರ್ಯವಂಶಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.