ADVERTISEMENT

ಗರ್ಭಿಣಿ ಹಸುವಿಗೆ ಸೀಮಂತ ಸಂಭ್ರಮ

ಸಿರೆ ಉಡಿಸಿ, ಆರತಿ ಎತ್ತಿ, ಸೋಬಾನೆ ಪದ ಹಾಡಿ, ದೃಷ್ಟಿ ತೆಗೆದ ಮಹಿಳೆಯರು

ರವಿ ಎಂ.ಹುಲಕುಂದ
Published 14 ಜುಲೈ 2024, 5:11 IST
Last Updated 14 ಜುಲೈ 2024, 5:11 IST
ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದ ಗುರು ಮಡಿವಾಳೇಶ್ವರ ಮಠದ ಗೋವಿಗೆ ಗ್ರಾಮಸ್ಥರು ಮನೆ ಮಗಳಂತೆ ಸಿಂಗರಿಸಿ ಶುಕ್ರವಾರ ಕುಪ್ಪಸ ಕಾರ್ಯ ನೆರವೇರಿಸಿದರು
ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದ ಗುರು ಮಡಿವಾಳೇಶ್ವರ ಮಠದ ಗೋವಿಗೆ ಗ್ರಾಮಸ್ಥರು ಮನೆ ಮಗಳಂತೆ ಸಿಂಗರಿಸಿ ಶುಕ್ರವಾರ ಕುಪ್ಪಸ ಕಾರ್ಯ ನೆರವೇರಿಸಿದರು   

ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ಗುರು ಮಡಿವಾಳೇಶ್ವರ ಮಠದ ಕಲ್ಯಾಣ ಮಂಟಪ ಆವರಣದಲ್ಲಿ ಶುಕ್ರವಾರ ಸಂಭ್ರಮ ಮನೆ ಮಾಡಿತ್ತು. ಬಂಧು–ಬಳಗದವರೆಲ್ಲ ಸೇರಿ ಕುಪ್ಪಸ ಕಾರ್ಯಕ್ರಮ (ಸೀಮಂತ) ನಡೆಸಿಕೊಟ್ಟರು. ತುಂಬು ಗರ್ಭಿಣಿಯ ಕಣ್ಣಲ್ಲಿ ಕರುಳ ಕುಡಿಯ ಕನಸು ಚಿಮ್ಮಿತು...

ಅಂದಹಾಗೆ ಇದು ಯಾವುದೋ ಹೆಣ್ಣುಮಗಳಿಗೆ ಮಾಡಿದ ಸೀಮಂತವಲ್ಲ. ಗರ್ಭ ಧರಿಸಿದ ಹಸುವನ್ನು ತಮ್ಮ ತವರ ಮಗಳು ಎಂಬಂತೆ ಗ್ರಾಮಸ್ಥರೇ ಮಾಡಿದ ಕುಪ್ಪಸ ಕಾರ್ಯಕ್ರಮ.

ಮಡಿವಾಳೇಶ್ವರ ಮಠದ ಗರ್ಭಿಣಿ ಆಕಳಿಗೆ ಮಂಟಪ ಹಾಕಿ, ಸೀರೆ ಉಡಿಸಿ, ಸುಂದರವಾಗಿ ಸಿಂಗರಿಸಿ ಮುತ್ತೈದೆಯರು ಆರತಿ ಬೆಳಗಿದರು. ಅಜ್ಜಿಯಂದಿರು, ಗೃಹಿಣಿಯರು ಸೊಗಸಾಗಿ ಸೋಭಾನೆ ಪದ ಹಾಡಿದರು. ಗೋವಿಗೆ ದೃಷ್ಟಿ ತೆಗೆದರು. ಮನೆ ಮಗಳಿಗೆ ತೋರುವ ಪ್ರೀತಿ, ಕಾಳಜಿ, ಮಮತೆ ತೋರಿ ಊಡಿ ತುಂಬಿ ಶುಭ ಹಾರೈಸಿದರು.

ADVERTISEMENT

ಬಗೆ, ಬಗೆಯ ಭಕ್ಷ್ಯಗಳನ್ನು ಮಾಡಿ ಗ್ರಾಮಸ್ಥರಿಗೆಲ್ಲ ಉಣಬಡಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮ ಗ್ರಾಮಸ್ಥರಿಗೆ ಸಂತಸ ತರುವುದರೊಂದಿಗೆ ಗೋವನ್ನು ಮನೆ ಮಕ್ಕಳಂತೆ ಪ್ರೀತಿಸಬೇಕೆನ್ನುವ ಸಂದೇಶ ಸಾರಿದರು. ಗ್ರಾಮದ ಎಲ್ಲ ಭಜನಾ ತಂಡಗಳಿಂದ ನಿರಂತರ ಭಜನೆ, ಜಾಗರಣೆ ನಡೆಯಿತು.

ಎಲ್ಲರಲ್ಲಿಯೂ ಗೋಮಾತೆ ಬಗ್ಗೆ ಪೂಜ್ಯ ಭಾವನೆ ಬರಬೇಕು. ಗೋವು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಈ ಸಂಸ್ಕಾರ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿ ಆಗಬೇಕು ಎಂಬುದೇ ಗ್ರಾಮಸ್ಥರ ಆಶಯ’ ಎಂದು ಈರಪ್ಪ ಗಾಣಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮಸ್ಥರಾದ ಮಡಿವಾಳಪ್ಪ ತಂಬಾಕದ, ಸೋಮಪ್ಪ ಮುತವಾಡ, ಗುರುಶಿಡ್ಡಪ್ಪ ಕೋಟಗಿ, ಬಸವರಾಜ ವಿವೇಕಿ, ಮಹಾಂತೇಶ ಗಾಣಿಗೇರ, ಚೆನ್ನಪ್ಪ ಬಾಳೆಕುಂದರಗಿ, ಶೇಖಪ್ಪ ಸಂಗೊಳ್ಳಿ, ಮಹಿಳೆಯರಾದ ಬಸವ್ವ ಕೋಟಗಿ, ಮಹಾದೇವಿ ಮುತವಾಡ, ಸೋಮವ್ವ ಪೇಂಟೇದ, ಗಂಗವ್ವ ಮಳಗಲಿ, ಗಿರಿಜವ್ವ ಪಾಟೀಲ, ನಿರ್ಮಲಾ ಬೋಳೆತ್ತಿನ, ಮಂಜುಳಾ ಕುಂಬಾರ, ಸೋಮಪ್ಪ ಯಡಾಲ, ಮಲ್ಲಪ್ಪ ಪಂಟೇದ ಹಾಗೂ ಗ್ರಾಮಸ್ಥರು ಇದ್ದರು.

ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದ ಗುರು ಮಡಿವಾಳೇಶ್ವರ ಮಠದ ಗೋವಿಗೆ ಗ್ರಾಮಸ್ಥರು ಮನೆ ಮಗಳಂತೆ ಸಿಂಗರಿಸಿ ಶುಕ್ರವಾರ ಕುಪ್ಪಸ ಕಾರ್ಯ ನೆರವೇರಿಸಿದರು
ಧರ್ಮದಲ್ಲಿ ಗೋವಿಗೆ ಮಾತೃ ಸ್ಥಾನವಿದೆ. ಅಂತಹ ಗೋವನ್ನು ಪ್ರತಿಯೊಬ್ಬರು ಪೂಜ್ಯ ಭಾವದಿಂದ ಕಾಣಬೇಕು. ಗೋವು ಸಂತತಿ ಉಳಿಸಿ ಬೆಳೆಸಬೇಕು. ಸಂರಕ್ಷಣೆಗೆ ಮುಂದಾಗಬೇಕು
ಗಂಗಾಧರ ಸ್ವಾಮೀಜಿ ಹೊಸೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.