ADVERTISEMENT

ಹೊಸ ವಂಟಮೂರಿ ಮಹಿಳೆ ನಗ್ನಗೊಳಿಸಿ ಹಲ್ಲೆ: ಆರೋಪಿಗಳಿಗೆ ಜಾಮೀನು–ಸಿಹಿ ಹಂಚಿ ಸ್ವಾಗತ

ಹೊಸ ವಂಟಮೂರಿಯಲ್ಲಿ ಡಿಸೆಂಬರ್‌ 12ರಂದು ನಡೆದಿದ್ದ ಅಮಾನುಷ ಘಟನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 14:23 IST
Last Updated 23 ಏಪ್ರಿಲ್ 2024, 14:23 IST
ಹೈಕೋರ್ಟ್‌
ಹೈಕೋರ್ಟ್‌   

ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ವಿದ್ಯುತ್‌ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ಪ್ರಕರಣದ 12 ಆರೋಪಿಗಳು ಸೋಮವಾರ ತಡರಾತ್ರಿ ಜಾಮೀನು ಮೇಲೆ ಬಿಡುಗಡೆಯಾದರು.

ಕಾನೂನು ಸಂಘರ್ಷಕ್ಕೆ ಒಳಪಟ್ಟ ಒಬ್ಬ ಬಾಲಕನ್ನು ಹೊರತುಪಡಿಸಿ, ಎಲ್ಲ 12 ಮಂದಿಗೂ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇಲ್ಲಿನ ಹಿಂಡಲಗಾ ಜೈಲಿನಿಂದ ರಾತ್ರಿ ಹೊರಬಂದ ಎಲ್ಲ ಆರೋಪಿಗಳನ್ನೂ ಅವರ ಬಂಧು– ಮಿತ್ರರು ಮಾಲೆ ಹಾಕಿ ಸ್ವಾಗತಿಸಿದರು. ಸಿಹಿ ಹಂಚಿ, ಅಪ್ಪಿಕೊಂಡು ಖುಷಿಪಟ್ಟರು. ಅದರ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

ಪ್ರೀತಿಸಿದ ಯುವಕ– ಯುವತಿ ಮನೆ ಬಿಟ್ಟು ಹೋದರು ಎಂಬ ಕಾರಣಕ್ಕೆ ರೊಚ್ಚಿಗೆದ್ದ ಯುವತಿಯ ಪಾಲಕರು‌ ಹಾಗೂ ಸಂಬಂಧಿಗಳು ಕಳೆದ ಡಿ.11ರಂದು ಯುವಕನ ಮನೆಯ ಮೇಲೆ ದಾಳಿ‌ ನಡೆಸಿದ್ದರು. ಕಲ್ಲು, ಇಟ್ಟಿಗೆ, ಬಡಿಗೆಗಳಿಂದ ದಾಳಿ‌ ಮಾಡಿ ದ್ವಂಸಗೊಳಿಸಿದ್ದರು. ಯುವಕನ ತಾಯಿಯನ್ನು ಮನೆಯಿಂದ ಹೊರಗೆಳೆದು ಹೊಡೆದಿದ್ದರು. ಬಟ್ಟೆ ಹರಿದು ಸಂಪೂರ್ಣ ಬೆತ್ತಲೆ ಮಾಡಿ ರಸ್ತೆಯಲ್ಲಿ ಎಳೆದೊಯ್ದು ಕಂಬಕ್ಕೆ ಕಟ್ಟಿದ್ದರು.

ADVERTISEMENT

ಈ ಅಮಾನುಷ ಘಟನೆಗೆ ದೇಶವ್ಯಾ‍ಪಿ ಖಂಡನೆ ವ್ಯಕ್ತವಾಗಿತ್ತು. ಆಗ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿದ್ದ ಪ್ರಸನ್ನ ವರಾಳೆ ಅವರು ಖುದ್ದಾಗಿ ಪ್ರಕರಣದ ಬಗ್ಗೆ ಗಂಭೀರ‌ ನಿರ್ಧಾರ ತೆಗೆದುಕೊಂಡಿದ್ದರು. ಹೈಕೋರ್ಟ್‌ನಲ್ಲಿ ಸ್ವಯಂಪ್ರೇರಿತ ‌ದೂರು‌ ದಾಖಲಾದ ಬಳಿಕ ಪ್ರಕಣವನ್ನು ಸಿಐಡಿಗೆ ವಹಿಸಲಾಯಿತು. ಮಹಿಳಾ ಅಯೋಗ, ಸತ್ಯ ಶೋಧನಾ ಸಮಿತಿಗಳು ದೌಡಾಯಿಸಿದ್ದವು.

ಸಂತ್ರಸ್ತ ಮಹಿಳೆ ಹಲವು ದಿನ ಜಿಲ್ಲಾಸ್ಪತ್ರೆಯ ಸಖಿ ಘಟಕದಲ್ಲಿ ಚಿಕಿತ್ಸೆ ಪಡೆದ ಬಳಿಕ‌ ಸುಧಾರಿಸಿಕೊಂಡು ಮನೆಗೆ ತೆರಳಿದರು. ಬಳಿಕ ಮನೆ ಬಿಟ್ಟು ‌ಹೋಗಿದ್ದ ಪ್ರೇಮಿಗಳು ಮದುವೆ‌ ಕೂಡ ಮಾಡಿಕೊಂಡರು.

ನಾಲ್ಕು‌ ತಿಂಗಳ ಬಳಿಕ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಆದರೆ, ಅವರನ್ನು ಸಡಗರದಿಂದ ಸ್ವಾಗತ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.