ADVERTISEMENT

ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ: ಕುಂದಾ, ಕರದಂಟು ಭರ್ಜರಿ ಮಾರಾಟ

ಸ್ವೀಟ್‌ಮಾರ್ಟ್‌ನವರಿಗೆ ಮಂದಹಾಸ ಮೂಡಿಸಿದ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 19:30 IST
Last Updated 24 ಡಿಸೆಂಬರ್ 2021, 19:30 IST
ಬೆಳಗಾವಿಯ ಅತುಲ್‌ ಪುರೋಹಿತ್‌ ಸ್ವೀಟ್‌ ಮಾರ್ಟ್‌ನಲ್ಲಿ ಶುಕ್ರವಾರ ಕುಂದಾ ಖರೀದಿಗೆ ಮುಗಿಬಿದ್ದಿದ್ದ ಗ್ರಾಹಕರು / ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಅತುಲ್‌ ಪುರೋಹಿತ್‌ ಸ್ವೀಟ್‌ ಮಾರ್ಟ್‌ನಲ್ಲಿ ಶುಕ್ರವಾರ ಕುಂದಾ ಖರೀದಿಗೆ ಮುಗಿಬಿದ್ದಿದ್ದ ಗ್ರಾಹಕರು / ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಕೊರೊನಾ ಸಂಕಷ್ಟ ಸಮಯದಲ್ಲಿ ನಿರೀಕ್ಷಿಸಿದಷ್ಟು ವ್ಯಾಪಾರವಿಲ್ಲದೆ ಕಂಗೆಟ್ಟಿದ್ದ ನಗರದ ಸ್ವೀಟ್‌ಮಾರ್ಟ್‌ ಮಾಲೀಕರ ಮೊಗದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಮಂದಹಾಸ ಮೂಡಿಸಿದೆ. ಕಳೆದ 10 ದಿನಗಳಲ್ಲಿ ಸಿಹಿ ಖಾದ್ಯಗಳ ಭರಪೂರ ಮಾರಾಟವಾಗಿದೆ.

ಎರಡು ವರ್ಷಗಳ ನಂತರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನ ಹಿನ್ನೆಲೆಯಲ್ಲಿ ಸಚಿವರು, ಶಾಸಕರು, ವಿಧಾನಸಭೆ ಮತ್ತು ವಿಧಾನಪರಿಷತ್‌ ಸಚಿವಾಲಯದ ಅಧಿಕಾರಿಗಳು–ಸಿಬ್ಬಂದಿ, ಪೊಲೀಸರು, ಬೆಂಗಳೂರಿನ ಮಾಧ್ಯಮ ಪ್ರತಿನಿಧಿಗಳು ಇಲ್ಲಿ ವಾಸ್ತವ್ಯ ಹೂಡಿದ್ದರು. ಶುಕ್ರವಾರ ಅಧಿವೇಶನ ಮುಗಿಯುತ್ತಿದ್ದಂತೆ ತಮ್ಮೂರಿಗೆ ತೆರಳುವ ಧಾವಂತದಲ್ಲಿದ್ದರು. ಕುಟುಂಬದವರಿಗೆ ಕುಂದಾ, ಕರದಂಟು, ಪೇಢೆ ಖರೀದಿಗಾಗಿ ಸ್ವೀಟ್‌ಮಾರ್ಟ್‌ಗಳಲ್ಲಿ ಮುಗಿಬಿದ್ದಿದ್ದರು. ರಾಜಕಾರಣಿಗಳಿಗಾಗಿ ಅವರ ಬೆಂಬಲಿಗರು ಅಥವಾ ಸಹಾಯಕರು ‘ಕುಂದಾ’ ಖರೀದಿಸುತ್ತಿರುವುದು ಕಂಡುಬಂತು.

ನಗರದಲ್ಲಿ 200ಕ್ಕೂ ಅಧಿಕ ಸ್ವೀಟ್‌ಮಾರ್ಟ್‌ಗಳಿವೆ. ಈ ಪೈಕಿ ರಾಜಸ್ತಾನಿ ಸಮುದಾಯದವರು ತಯಾರಿಸುವ ‘ಕುಂದಾ’ಗೆ ಹೆಚ್ಚಿನ ಬೇಡಿಕೆ ಇದೆ. ಅಧಿವೇಶನ ಕರ್ತವ್ಯಕ್ಕೆ ಬಂದವರ ಜತೆಗೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುವರ್ಣ ವಿಧಾನಸೌಧ ಬಳಿ ಪ್ರತಿಭಟಿಸುವುದಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದವರು ಕೂಡ ಕುಂದಾ ಖರೀದಿಸಿಕೊಂಡು ಹೋಗುತ್ತಿದ್ದುದು ಶುಕ್ರವಾರಕ ಕಂಡುಬಂತು. ‘ಬೆಳಗಾವಿಗೆ ಬಂದು ಕುಂದಾ ಅಥವಾ ಕರದಂಟು ಒಯ್ಯದಿದ್ದರೆ ಹೇಗೆ? ಕುಟುಂಬದರಿಗಾಗಿ ತೆಗೆದುಕೊಂಡು ಹೋಗುತ್ತಿರುವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ADVERTISEMENT

ಸಾವಿರ ಕೆ.ಜಿ. ಮಾರಾಟ:‘ನಮ್ಮಲ್ಲಿ ನಿತ್ಯ 100–150 ಕೆ.ಜಿ. ಕುಂದಾ ಮಾರಾಟವಾಗುತ್ತಿತ್ತು. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಗ್ರಾಹಕರು ಖರೀದಿಸುತ್ತಿದ್ದರು. ಅಧಿವೇಶನದ ಕೊನೇ ದಿನದಂದು ಒಂದು ಸಾವಿರ ಕೆ.ಜಿ. ಮಾರಾಟವಾಗಿದೆ. 200 ಕೆ.ಜಿ. ಕರದಂಟು, 100 ಕೆ.ಜಿ. ಫೇಡೆ ಸಹ ಮಾರಾಟವಾಗಿದೆ. ಗ್ರಾಹಕರಿಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿತು’ ಎಂದು ಕಾಲೇಜ್‌ ರಸ್ತೆಯ ಅತುಲ್‌ ಪುರೋಹಿತ್‌ ಮಾಲೀಕ ಅತುಲ್‌ ಪುರೋಹಿತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಮುಲ್‌ ಉತ್ಪನ್ನ ಮಾರಾಟ ‌ದುಪ್ಪಟ್ಟು:‘ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಬೆಮುಲ್‌)ದಲ್ಲಿ ತಯಾರಿಸಲಾಗುವ ‘ಕುಂದಾ’ ನಿತ್ಯ ಸರಾಸರಿ 102 ಕೆ.ಜಿ. ಮಾರಾಟವಾಗುತ್ತಿತ್ತು. 10 ದಿನಗಳಲ್ಲಿ ಸುಮಾರು ₹ 8 ಲಕ್ಷ ಮೌಲ್ಯದ (ಪ್ರತಿ ದಿನ ಸರಾಸರಿ 186 ಕೆ.ಜಿ.) ಮಾರಾಟವಾಗಿದೆ. ನಮ್ಮ ಒಕ್ಕೂಟದ ಇತರ ಉತ್ಪನ್ನಗಳ ಖರೀದಿಗೂ ಗ್ರಾಹಕರು ಒಲವು ತೋರಿದ್ದಾರೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಜಿ.ಶ್ರೀನಿವಾಸನ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಗ್ರಾಹಕರನ್ನು ಸೆಳೆದ ಕರದಂಟು:‘ಸಾಮಾನ್ಯ ದಿನಗಳಲ್ಲಿ ಜನರು 800 ಕೆ.ಜಿ. ಕರದಂಟು ಖರೀದಿಸುತ್ತಿದ್ದರು. ಅಧಿವೇಶನದ ಕೊನೇ ಮೂರು ದಿನಗಳಲ್ಲಿ ನಿತ್ಯ 1,700 ಕೆ.ಜಿ. ಮಾರಾಟವಾಗಿದೆ. ರಾಜಕಾರಣಿಗಳು, ಅಧಿಕಾರಿಗಳಿಗೆ ನೀಡಲು ಸ್ಥಳೀಯರೇ ಖರೀದಿಸಿದರು. ಕೆಲ ಅಧಿಕಾರಿಗಳು ಹಾಗೂ ನೌಕರರು ಕೂಡ ಆರ್ಡರ್‌ ನೀಡಿದ್ದರು. ಅಲ್ಲದೆ, ನಿತ್ಯ 400 ಕೆ.ಜಿ. ‘ಲಡಗಿ ಉಂಡಿ’ ಕೂಡ ಮಾರಾಟವಾಗಿದೆ’ ಎನ್ನುತ್ತಾರೆ ಗೋಕಾಕದ ಸದಾನಂದ ಸ್ವೀಟ್ಸ್‌ನ ಮಾಲೀಕ ಶಂಕರ ದೇವರಮನಿ.

ವೃದ್ಧಿಸಿದೆ
ನಮ್ಮ ಮಳಿಗೆಯಲ್ಲಿ ಗ್ರಾಹಕರು ಪ್ರತಿದಿನ 60–70 ಕೆ.ಜಿ. ಕುಂದಾ ಖರೀದಿಸುತ್ತಿದ್ದರು. ಶುಕ್ರವಾರ ಮಧ್ಯಾಹ್ನದ ವೇಳೆಗೆ 150 ಕೆ.ಜಿ. ಕುಂದಾ ಮಾರಾಟವಾಗಿದೆ. ಅಧಿವೇಶನ ಹಿನ್ನೆಲೆಯಲ್ಲಿ ವ್ಯಾಪಾರ–ವಹಿವಾಟು ವೃದ್ಧಿಸಿದೆ.
–ಭರತ್‌ ಪುರೋಹಿತ್‌, ಮಾಲೀಕ, ಗೋಕುಲ ಪುರೋಹಿತ್‌ ಸ್ವೀಟ್‌ಮಾರ್ಟ್‌, ಕೇಂದ್ರ ಬಸ್‌ ನಿಲ್ದಾಣ ಬಳಿ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.