ಮೂಡಲಗಿ: ಇಲ್ಲಿನ ಆರ್‌ಡಿಎಸ್ ಸಂಸ್ಥೆಯ ಮೈದಾನದಲ್ಲಿ ನ. 23 ಮತ್ತು 24ರಂದು ಜರುಗಲಿರುವ ಬೆಳಗಾವಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ದತೆ ಭರದಿಂದ ಸಾಗಿದೆ.
ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ಭುವನೇಶ್ವರಿಯ ಮೆರವಣಿಗೆಯು ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಕಲ್ಮೇಶ್ವರ ವೃತ್ತದ ಮೂಲಕ, ಆರ್‌ಡಿಎಸ್ ಕಾಲೇಜು ವರೆಗಿನ ರಸ್ತೆ ದುರಸ್ತಿ ಕಾಮಗಾರಿ ಭರದಿಂದ ಸಾಗಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಲುವಾಗಿ ಪುರಸಭೆಯ ವಿವಿಧ ಅನುದಾನದ ಅಡಿಯಲ್ಲಿ ₹1.14 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸುತ್ತಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಖುರ್ಷಾದಬೇಗಂ ನದಾಫ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಮೆರವಣಿಗೆ ಉದ್ಘಾಟನೆ: ನ. 23ರಂದು ಬೆಳಿಗ್ಗೆ 8.30ಕ್ಕೆ ಶಿವಾಪುರದ ಅಡವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ, ಪುರಸಭೆ ಅಧ್ಯಕ್ಷೆ ಖುರ್ಷದಬೇಗಂ ನದಾಫ್, ಉಪಾಧ್ಯಕ್ಷೆ ಭಿಮವ್ವ ಪೂಜೇರಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ತಾಲ್ಲೂಕು ಆಡಳಿತದ ಅಧಿಕಾರಿಗಳು, ಪುರಸಭೆ ಸದಸ್ಯರು, ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯ್ತಿಯ ಸದಸ್ಯರು ಭಾಗವಹಿಸುವರು.
ಸಮ್ಮೇಳನದ ಉದ್ಘಾಟನೆ: ನ. 23ರಂದು ಬೆಳಿಗ್ಗೆ 11ಕ್ಕೆ ಮೂಡಲಗಿ ಶಿವಬೋಧರಂಗ ಮಠದ ಪೀಠಾಧಿಪತಿ ದತ್ತಾತ್ರಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಚಿಂತಕ ಪ್ರೊ.ಚಂದ್ರಶೇಖರ ಅಕ್ಕಿ ಸಮ್ಮೇಳನಾಧ್ಯಕ್ಷತೆ ವಹಿಸುವರು. ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ ಧ್ವಜ ಹಸ್ತಾಂತರಿಸುವರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಸಚಿವರಾದ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಸಂಸದರಾದ ಜಗದೀಶ ಶೆಟ್ಟರ, ವಿಶ್ವೇಶ್ವರ ಕಾಗೇರಿ, ಶಾಸಕ ರಮೇಶ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಾಹಿತಿ ಬಾಳಾಸಾಹೇಬ ಲೋಕಾಪುರ ಭಾಗವಹಿಸುವರು. ಜಿಲ್ಲೆಯ ಎಲ್ಲ ಶಾಸಕರು ಅತಿಥಿಗಳಾಗಿ ಪಾಲ್ಗೊಳ್ಳುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ನುಡಿ ಹೇಳುವರು. ಮೂಡಲಗಿ ತಾಲ್ಲೂಕು ಘಟಕದ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕ ಮಾತನಾಡುವರು.
ಎರಡೂ ದಿನ ಒಟ್ಟು ಐದು ಗೋಷ್ಠಿಗಳು ಹಾಗೂ ಸಾಧಕರ ಸನ್ಮಾನ ನಡೆಯಲಿದೆ. ನ.24ರಂದು ಸಂಜೆ 4ಕ್ಕೆ ಸಮಾರೋಪವು ಸುಣಧೋಳಿಯ ಶಿವಾನಂದ ಸ್ವಾಮಿಗಳು ಸಾನ್ನಿಧ್ಯದಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭಾಗವಹಿಸುವರು.
ಈಗಾಗಲೇ ಸಮ್ಮೇಳಾಧ್ಯಕ್ಷ ಪ್ರೊ.ಚಂದ್ರಶೇಖರ ಅಕ್ಕಿ ಅವರಿಗೆ ಗೋಕಾಕದ ಅವರ ಮನೆಯಲ್ಲಿ ಮೂಡಲಗಿಯ ಕಸಾಪ ಘಟಕದಿಂದ ಆಮಂತ್ರಣ ನೀಡಲಾಗಿದೆ.
ಅರಭಾವಿ ಕ್ಷೇತ್ರದ ಮೂಡಲಗಿಯಲ್ಲಿ ಸಾಹಿತ್ಯ ಸಮ್ಮೇಳನವು ಆಯೋಜನೆಯ ಮೂಲಕ ಕನ್ನಡ ನಾಡು ನುಡಿಯ ಸೇವೆ ಮಾಡುವ ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿ–ಬಾಲಚಂದ್ರ ಜಾರಕಿಹೊಳಿ, ಶಾಸಕ
ಸಕ್ಕರೆ ನಾಡು ಬೆಳಗಾವಿ ಜಿಲ್ಲೆಯ ಎಲ್ಲ ಕನ್ನಡ ಮನಸ್ಸುಗಳು ಒಗ್ಗಟಿನಿಂದ ಸಮ್ಮೇಳನಧ್ಯಕ್ಷತೆ ಗೌರವ ನೀಡಿದ್ದು ಸಂತೋಷವಾಗಿದೆ. ಅಭಿಮಾನಿಗಳ ಪ್ರೀತಿಗೆ ಋಣಿ–ಪ್ರೊ.ಚಂದ್ರಶೇಖರ ಅಕ್ಕಿ ಸಮ್ಮೇಳನಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.