ADVERTISEMENT

ಬೆಳಗಾವಿ | 681 ಕುಟುಂಬಗಳಿಗೆ ಸಿಗದ ಸೂರು

ಪ್ರವಾಹ ಬಂದು ಐದು ವರ್ಷಗಳಾದರೂ ಪೂರ್ಣಗೊಳ್ಳದ ಮನೆಗಳು

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 5:38 IST
Last Updated 30 ಜೂನ್ 2024, 5:38 IST
ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದಲ್ಲಿ ಜಿಪಿಎಸ್ ಮಾಡದ ತಳಪಾಯದಲ್ಲಿ ನಿಂತುಹೋದ ಸಂತ್ರಸ್ತರ ಮನೆ – ಪ‍್ರಜಾವಾಣಿ ಚಿತ್ರ
ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದಲ್ಲಿ ಜಿಪಿಎಸ್ ಮಾಡದ ತಳಪಾಯದಲ್ಲಿ ನಿಂತುಹೋದ ಸಂತ್ರಸ್ತರ ಮನೆ – ಪ‍್ರಜಾವಾಣಿ ಚಿತ್ರ   

ಚಿಕ್ಕೋಡಿ: ಮತ್ತೊಂದು ಪ್ರವಾಹ ನಿರ್ವಹಣೆಗೆ ಜಿಲ್ಲಾಡಳಿತ ಪೂರ್ವ ಸಿದ್ಧತೆ ನಡೆಸಿದೆ. ಆದರೆ, ಈ ಹಿಂದೆ ಪ್ರವಾಹದಿಂದ ಮನೆ– ಆಸ್ತಿ ಕಳೆದುಕೊಂಡ 681 ಕುಟುಂಬಗಳು ಇನ್ನೂ ಸೂರು ಕಂಡಿಲ್ಲ. ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಕಾರಣ ಮನೆಗಳು ಅರ್ಧಕ್ಕೆ ನಿಂತಿವೆ ಎಂಬುದು ಸಂತ್ರಸ್ತರ ಆರೋಪ.

2019 ಹಾಗೂ 2021ರಲ್ಲಿ ಕೃಷ್ಣಾ ನದಿಗೆ ಬಂದ ಪ್ರವಾಹ ದೊಡ್ಡ ಆಘಾತ ನೀಡಿತು. ಮಹಾರಾಷ್ಟ್ರದ ಅಣೆಕಟ್ಟೆಗಳಿಂದ ನದಿಗೆ ಬಿಟ್ಟ ನೀರು ನದಿ ತೀರದ ಗ್ರಾಮಸ್ಥರ ಬದುಕು ಕಿತ್ತುಕೊಂಡಿತು. ಆಗ ಕಾಳಜಿ ಕೇಂದ್ರಗಳಲ್ಲಿ ಮೂರು ತಿಂಗಳು ವಾಸವಿದ್ದವರು ಈಗಲೂ ಸ್ವಂತ ಮನೆಗಾಗಿ ಅಲೆದಾಡುತ್ತಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಚಂದೂರ, ಯಡೂರ, ಮಾಂಜರಿ, ಇಂಗಳಿ, ಅಂಕಲಿ ಗ್ರಾಮಗಳಲ್ಲಿ ಪ್ರವಾಹದಿಂದ ಮನೆಗಳು ನಾಶವಾದವು. ನಿರಾಶ್ರಿತರಾದ 4,321 ಕುಟುಂಬದವರು ಪುನರ್ವಸತಿಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಪೂರ್ಣ ಹಾನಿ (ಎ ಗ್ರೇಡ್‌) 950 ಮನೆ, ಅರ್ಧ ಬಿದ್ದು (ಬಿ1 ಗ್ರೇಡ್) 84 ಹಾಗೂ ಭಾಗಶಃ (ಬಿ2 ಗ್ರೇಡ್) 3,287 ಕುಟುಂಬಗಳ ಅರ್ಜಿ ಸ್ವೀಕೃತವಾಗಿವೆ.

ADVERTISEMENT

ಪೂರ್ಣ ಬಿದ್ದ ಮನೆಗೆ ₹5 ಲಕ್ಷ, ಅರ್ಧ ಬಿದ್ದಿದ್ದರೆ ₹3 ಲಕ್ಷ ಪರಿಹಾರವನ್ನು ರಾಜೀವ್ ಗಾಂಧಿ ವಸತಿ ನಿಗಮದಿಂದ ಮಂಜೂರು ಮಾಡಲು ಸರ್ಕಾರ ನಿರ್ಧರಿಸಿತ್ತು.

4,321 ಅರ್ಜಿಗಳ ಪೈಕಿ 3,640 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. 263 ಪ್ರಗತಿಯಲ್ಲಿವೆ. 66 ಮನೆಗಳ ಕಾರ್ಯ ತಂಟೆ– ತಕರಾರಿನಿಂದ ಸ್ಥಗಿತವಾಗಿದೆ. 352 ಮನೆಗಳ ಜಿಪಿಎಸ್‌ ‘ಬ್ಲಾಕ್‌’ ಮಾಡಲಾಗಿದೆ. ಒಟ್ಟು 681 ಕುಟುಂಬಗಳು ತಾಂತ್ರಿಕ ಕಾರಣದಿಂದ ಮನೆಗಳನ್ನು ಪೂರ್ಣಗೊಳಿಸಲು ಆಗಿಲ್ಲ.

‘ಬ್ಲಾಕ್‌’ ಆದ ಪಟ್ಟಿಯಲ್ಲಿ 60 ಮನೆಗಳು ತಳಪಾಯದಲ್ಲಿವೆ. 75 ಮನೆಗಳು ಗೋಡೆಯವರೆಗೆ, 132 ಮನೆಗಳು ಚಾವಣಿಯವರೆಗೆ ಸಿದ್ಧಗೊಂಡಿವೆ. ಆದರೂ ಆಯಾ ಹಂತದ ಹಣ ಬಂದಿಲ್ಲ ಎಂಬುದು ದೂರು.

ಈ ಕುರಿತು ಹಲವು ಬಾರಿ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ‘ಮಹಾಪೂರ ಬಂದು ಹೋಗಿ 5 ವರ್ಷಗಳು ಕಳೆದರೂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ವಹಿಸಿದ್ದಾರೆ. ತಮ್ಮ ಗೋಳು ಮುಗಿದಿಲ್ಲ’ ಎನ್ನುತ್ತಾರೆ ಸಂತ್ರಸ್ತರು.

ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಹಣ ಬಿಡುಗಡೆ ಆಗದೇ ಅರ್ಧಕ್ಕೆ ನಿಂತ ಮನೆ – ಪ‍್ರಜಾವಾಣಿ ಚಿತ್ರ
5 ವರ್ಷಗಳಿಂದ ಸರ್ಕಾರ ಜಿಪಿಎಸ್ ಮಾಡಲು ಅನುಮತಿ ಕೊಟ್ಟಿಲ್ಲ. ಚಾವಣಿವರೆಗೆ ಮನೆ ಕಟ್ಟಿದರೂ ಹಣ ಬಿಡುಗಡೆ ಮಾಡಿಲ್ಲ.
–ನಾಗೇಶ ಮಾಳಿ ಸಂತ್ರಸ್ತ ಯಕ್ಸಂಬಾ
ಪ್ರವಾಹ ಸಂತ್ರಸ್ತರಲ್ಲಿ ಬಹುತೇಕರು ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಉಳಿದವರ ಸಮಸ್ಯೆ ನಿವಾರಿಸಲು ಕೈಗೊಳ್ಳಲಾಗುವುದು
–ಚಿದಂಬರ ಕುಲಕರ್ಣಿ ತಹಶೀಲ್ದಾರ್ ಚಿಕ್ಕೋಡಿ

‘ಅರ್ಹರಿಗೆ ಪರಿಹಾರ ಸಿಗುತ್ತದೆ’ ‘ಪ್ರವಾಹ ಅಥವಾ ಅತಿವೃಷ್ಟಿಯಲ್ಲಿ ಮನೆ ಬಿದ್ದಿದ್ದರೆ ಮಾತ್ರ ಪರಿಹಾರಕ್ಕೆ ಪರಿಗಣಿಸಲಾಗುತ್ತದೆ. ಬಹಳಷ್ಟು ಪ್ರಕರಣಗಳು ಸುಳ್ಳಿದ್ದ ಕಾರಣ ಅರ್ಜಿ ಸ್ವೀಕೃತವಾಗಿಲ್ಲ. 2019ರಿಂದ ಈವರೆಗೆ ಪ್ರವಾಹ ಸಂತ್ರಸ್ತರಾದವರು ಮೊದಲ ಕಂತಿನ ಪರಿಹಾರ ಹಣ ಪಡೆದಿದ್ದರೆ ಮಾತ್ರ ಅವರಿಗೆ ಪೂರ್ಣ ಹಣ ಬರುತ್ತದೆ. ಆಗ ಸಂತ್ರಸ್ತ ಎಂದು ಗುರುತಿಸದೇ ಇದ್ದವರು ನಂತರ ಅರ್ಜಿ ಸಲ್ಲಿಸಿದ್ದರೆ ಪರಿಗಣಿಸಲು ಆಗುವುದಿಲ್ಲ. ಸಂತ್ರಸ್ತರು ಯಾವ ಹಂತದ ಮನೆ ಕಟ್ಟಿಸಿಕೊಂಡಿದ್ದಾರೋ ಆ ಹಂತಕ್ಕೆ ಮಾತ್ರ ಪರಿಹಾರ ನೀಡಲಾಗಿದೆ. ಅರ್ಧಕ್ಕೆ ನಿಲ್ಲಿಸಿದ್ದರೆ ಬರುವುದಿಲ್ಲ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.