ಸಂಕೇಶ್ವರ: ಸಮೀಪದ ಬಿ.ಕೆ.ಶಿರಹಟ್ಟಿ ಗ್ರಾಮದ ರೈತ ಶಿವಾನಂದ ಶಂಕರೆಪ್ಪ ಢಂಗ ಅವರು ಒಂದು ಎಕರೆ ಜಮೀನಿನಲ್ಲಿ 115 ಟನ್ ಕಬ್ಬು ಬೆಳೆದಿದ್ದಾರೆ. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಎಕರೆಗೆ 40 ರಿಂದ 50 ಟನ್ ಇಳುವರಿ ಬರುತ್ತದೆ. ಆದರೆ, ಶಿವಾನಂದ ಅವರು ವಿಶಿಷ್ಟ ಪ್ರಯೋಗದ ಮೂಲಕ ಭರ್ಜರಿ ಫಸಲು ಪಡೆದಿದ್ದಾರೆ.
ಒಂದು ಎಕರೆಯಲ್ಲಿ 24 ಸಾಲು ಮಾತ್ರ ಅವರು ನಾಟಿ ಮಾಡಿದ್ದರು. ನಾಲ್ಕು ಅಡಿ ಅಂತರದಲ್ಲಿ ತಲಾ ಎರಡು ಸಾಲು ಮಾಡಿ, ಸಾಲಿನ ಎರಡೂ ಬದಿಯಲ್ಲು ಒಂದೂವರೆ ಅಡಿ ಅಂತರದಲ್ಲಿ ಕಬ್ಬು ನೆಟ್ಟಿದ್ದರು. ಪ್ರತಿ ಸಾಲಿನಲ್ಲಿ 1,600 ಕಬ್ಬು ಜಲ್ಲೆಗಳು ಬೆಳೆದಿವೆ. ಅದರಲ್ಲೂ ಹುಲುಸಾದ ಗುಂಪು ಬೆಳೆದಿದೆ. ಒಂದೊಂದು ಕಬ್ಬಿನ ದಂಟಿನ ತೂಕ ಕನಿಷ್ಠ 3 ಕೆಜಿ ಇದೆ. ಒಟ್ಟಾರೆ ತೂಕ 1,15,200 ಕೆ.ಜಿ ಎಂದು ಕಾರ್ಖಾನೆಯವರು ಲೆಕ್ಕ ಹಾಕಿದ್ದಾರೆ.
ಕಳೆದ ವರ್ಷ ಶಿವಾನಂದ ಅವರು ಇದೇ ಗದ್ದೆಯಲ್ಲಿ 115 ಟನ್ ಕಬ್ಬು ತೆಗೆದಿದ್ದರು. ಸರಿಯಾಗಿ 14 ತಿಂಗಳ ಬಳಿಕ ಮತ್ತೊಮ್ಮೆ ಸಾಧನೆ ತೋರಿದ್ದಾರೆ.
ಸೂಕ್ತ ಪೋಷಣೆ: ಕಬ್ಬನ್ನು ತುಂಡಿರಿಸಿ ಅದರಿಂದ ಬೀಜಗಳನ್ನು ತಯಾರಿಸುವ ಬದಲು ‘ಎಸ್.ಎನ್.ಕೆ 13374’ ತಳಿಯ ರೆಡಿಮೇಡ್ ಕಬ್ಬಿನ ಸಸಿಗಳನ್ನು ಅವರು ನಾಟಿ ಮಾಡಿದ್ದಾರೆ. ಇವುಗಳನ್ನು ಮಹಾರಾಷ್ಟ್ರದ ಇಚಲಕರಂಜಿ ಸಮೀಪದ ಅಬ್ದಲ್‌ಲಾಟ ಊರಿನಿಂದ ಖರೀದಿಸಿದ್ದಾರೆ. ನಾಟಿ ಮಾಡಿದಾಗ, 5 ಟ್ರಾಲಿಯಷ್ಟು ಸಗಣಿ ಗೊಬ್ಬರ ಹಾಕಿದ್ದರು. ಬಳಿಕ ಡಿಎಪಿ ಮತ್ತು ಡಿಎನ್‌ಪಿ ಗೊಬ್ಬರವನ್ನು ತಲಾ 50 ಕೆಜಿಯಂತೆ ಹಾಕಿದ್ದಾರೆ.
6 ದಿನಕ್ಕೊಮ್ಮೆ ಮಾತ್ರ ನೀರು ಹಾಯಿಸಿದ್ದಾರೆ. 20ನೇ ದಿನಕ್ಕೆ 100 ಕೆಜಿ ಯೂರಿಯಾ, ಹೊಮಿಕ್ ಅಸಿಡ್ ಕೊಟ್ಟಿದ್ದಾರೆ. ಎರಡು ತಿಂಗಳ ನಂತರ ಬಯೊ–20 ಹಾಗೂ 12–61–00 (ತಲಾ 50 ಕೆ.ಜಿ) ನೀಡಿದ್ದಾರೆ. ಸುಳಿ ರೋಗ ಹಾಗೂ ದೊಣ್ಣೆ ಹುಳುವಿನ ಕಾಟ ತಪ್ಪಿಸಲು ಪ್ರತಿಬಂಧಕ ಔಷಧಿ ನೀಡಿದ್ದಾರೆ. 105 ದಿನಕ್ಕೆ ಕಬ್ಬನ್ನು ಹರಗುವ ಸಮಯದಲ್ಲಿ ಸೂಪರ್–6 50 ಕೆ.ಜಿ, ಪೊಟ್ಯಾಶ್ 50 ಕೆ.ಜಿ, ಟೋಟಲ್ 20 50 ಕೆ.ಜಿ, ಡಿ.ಎ.ಪಿ 50 ಕೆ.ಜಿ, ಮ್ಯಾಗ್ನೇಷಿಯಂ ಗೋಲ್ಡ್ 25 ಕೆ.ಜಿ ನೀಡಿದ್ದಾರೆ.
‘ಹೆಚ್ಚು ಕಬ್ಬು ಬೆಳೆಯುವ ಹುಮ್ಮಸ್ಸಿನಲ್ಲಿ ಎಲ್ಲೆಂದರಲ್ಲಿ ಕಬ್ಬು ನಾಟಿ ಮಾಡಬಾರದು. ಸರಿಯಾದ ಅಳತೆಯಲ್ಲಿ ಸಾಲು ಮಾಡಿ ನಾಟಿ ಮಾಡಬೇಕು. ಸಕಾಲಕ್ಕೆ ಪೋಷಕಾಂಶ ನೀಡಬೇಕು. ಕೃಷಿ ತಾಂತ್ರಿಕ ಅಧಿಕಾರಿ ಯಮುನಪ್ಪ ಪೂಜೇರಿ ಅವರು ನನಗೆ ಇದರ ತಾಂತ್ರಿಕ ನೆರವು ನೀಡಿದರು’ ಎಂದು ರೈತ ಶಿವಾನಂದ ತಿಳಿಸಿದರು.
ಶಿವಾನಂದ ಢಂಗ ಅವರ ದೂರವಾಣಿ ಸಂಖ್ಯೆ: 9945039164.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.