ADVERTISEMENT

ಬೆಳಗಾವಿ: ಅದ್ಧೂರಿ ರಾಜ್ಯೋತ್ಸವ ಆಚರಣೆಗೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 11:08 IST
Last Updated 8 ಅಕ್ಟೋಬರ್ 2024, 11:08 IST
<div class="paragraphs"><p>ರಾಜ್ಯೋತ್ಸವ ಸಿದ್ಧತೆಗಾಗಿ ಬೆಳಗಾವಿಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಮಾತನಾಡಿದರು. ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಡಾ.ಭೀಮಾಶಂಕರ ಗುಳೇದ, ವಿಜಯಕುಮಾರ ಹೊನಕೇರಿ, ವಿದ್ಯಾವತಿ ಭಜಂತ್ರಿ ಹಾಗೂ ಕನ್ನಡ ಹೋರಾಟಗಾರರು ಪಾಲ್ಗೊಂಡರು.</p></div>

ರಾಜ್ಯೋತ್ಸವ ಸಿದ್ಧತೆಗಾಗಿ ಬೆಳಗಾವಿಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಮಾತನಾಡಿದರು. ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಡಾ.ಭೀಮಾಶಂಕರ ಗುಳೇದ, ವಿಜಯಕುಮಾರ ಹೊನಕೇರಿ, ವಿದ್ಯಾವತಿ ಭಜಂತ್ರಿ ಹಾಗೂ ಕನ್ನಡ ಹೋರಾಟಗಾರರು ಪಾಲ್ಗೊಂಡರು.

   

ಪ್ರಜಾವಾಣಿ ಚಿತ್ರ

ಬೆಳಗಾವಿ: ನಗರದಲ್ಲಿ ನವೆಂಬರ್‌ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ತೀರ್ಮಾನವನ್ನು ಇಲ್ಲಿ ಮಂಗಳವಾರ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಕೈಗೊಳ್ಳಲಾಯಿತು.

ADVERTISEMENT

‘ಈ ಬಾರಿ ದೀಪಾವಳಿ ಹಬ್ಬವೂ ನ.1ರಂದೇ ಇದೆ. ಅಂದು ಸಾಂಕೇತಿಕವಾಗಿ ಕಾರ್ಯಕ್ರಮ ನಡೆಸಿ, ನ.3ರಂದು ಮೆರವಣಿಗೆ ಆಯೋಜಿಸಬೇಕು’ ಎಂದು ಯುವಕ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ, ರಮೇಶ ಸೊಂಟಕ್ಕಿ ಮತ್ತಿತರರು, ‘ಯಾವ ಕಾರಣಕ್ಕೂ ರಾಜ್ಯೋತ್ಸವದ ಮೆರವಣಿಗೆ ದಿನಾಂಕ ಮುಂದೂಡುವಂತಿಲ್ಲ. ಬೇಕಿದ್ದರೆ ಮೆರವಣಿಗೆ ಸಮಯ ವಿಸ್ತರಿಸಿ’ ಎಂದರು. ಈ ವಿಚಾರವಾಗಿ ಸಮಗ್ರವಾಗಿ ಚರ್ಚಿಸಿದ ನಂತರ, ನ.1ರಂದೇ ರಾಜ್ಯೋತ್ಸವದ ಭವ್ಯ ಮೆರವಣಿಗೆಯನ್ನೂ ನಡೆಸುವ ನಿರ್ಧಾರವನ್ನು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ‍ಪ್ರಕಟಿಸಿದರು.

‘ದೀಪಾವಳಿ ಮತ್ತು ರಾಜ್ಯೋತ್ಸವ ಜತೆಯಾಗಿ ಬಂದಿದ್ದರಿಂದ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಗುವುದು. ವೀಕ್ಷಣೆಗಾಗಿ ಮಹಿಳೆಯರಿಗಾಗಿ ಪ್ರತ್ಯೇಕ ಗ್ಯಾಲರಿ ಮಾಡಲಾಗುವುದು. ಬೆಳಗಾವಿಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಹೋರಾಡಿದ ಮಹನೀಯರ ಭಾವಚಿತ್ರಗಳನ್ನು ಪ್ರದರ್ಶಿಸಲಾಗುವುದು’ ಎಂದರು.

‘ಹೋರಾಟಗಾರರು ಮತ್ತು ಪತ್ರಕರ್ತರನ್ನು ಸನ್ಮಾನಿಸಲಾಗುವುದು. ಸಾಧಕರ ಆಯ್ಕೆಗಾಗಿ ಜಿಲ್ಲಾ ಪಂಚಾಯ್ತಿ ಸಿಇಒ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಮಿತಿ ರಚಿಸಲಾಗುವುದು. ಉತ್ತಮ ರೂಪಕಕ್ಕೆ ಪ್ರಶಸ್ತಿ ನೀಡಲಾಗುವುದು. ಹೆಲಿಕ್ಯಾಪ್ಟರ್‌ನಿಂದ ಚನ್ನಮ್ಮನ ಪ್ರತಿಮೆಗೆ ಪುಷ್ಪವೃಷ್ಟಿ ಮಾಡಲು ಯತ್ನಿಸಲಾಗುವುದು’ ಎಂದು ತಿಳಿಸಿದರು.

ಶ್ರೀನಿವಾಸ ತಾಳೂಕರ, ‘ಈ ಬಾರಿ 10 ಹೋರಾಟಗಾರರನ್ನು ಸನ್ಮಾನಿಸಬೇಕು. ರಾಜ್ಯೋತ್ಸವದ ಮೆರವಣಿಗೆಯಲ್ಲಿ ನಾಡಧ್ವಜದ ಹೊರತಾಗಿ, ಬೇರ್‍ಯಾವ ಧ್ವಜ ಹಾರಿಸುವುದಕ್ಕೆ ಅನುಮತಿ ಕೊಡಬಾರದು’ ಎಂದು ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ‘ದೀಪಾವಳಿ ಹಿನ್ನೆಲೆಯಲ್ಲಿ ಜನರು ತಡವಾಗಿ ಮೆರವಣಿಗೆ ವೀಕ್ಷಣೆಗೆ ಬರಬಹುದು. ಹಾಗಾಗಿ ತಡರಾತ್ರಿಯವರೆಗೂ ಮೆರವಣಿಗೆಗೆ ಅವಕಾಶ ಕೊಡಬೇಕು’ ಎಂದು ಮನವಿ ಮಾಡಿದರು.

ಕ.ರ.ವೇ. ಸಂಚಾಲಕ ಮಹಾದೇವ ತಳವಾರ, ‘ಕಾಟಾಚಾರಕ್ಕೆ ಎಂಬಂತೆ ಸಾಧಕರನ್ನು ಸನ್ಮಾನಿಸಬಾರದು. ನ.2ರಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಸನ್ಮಾನಿಸಬೇಕು’ ಎಂದರು.

ಹೋರಾಟಗಾರ ರಾಜೀವ್‌ ಟೋಪಣ್ಣವರ ಮಾತನಾಡಿದರು. ನಗರ ಪೋಲಿಸ್ ಕಮಿಷನರ್‌ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ‌ ಗುಳೇದ, ಜಿ.ಪಂ ಸಿಇಒ ರಾಹುಲ್‌ ಶಿಂಧೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ್ ಮೀನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇತರರಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸ್ವಾಗತಿಸಿದರು.

ಕೇಳಿಬಂದ ಬೇಡಿಕೆಗಳು

  • ಮೈಸೂರು ದಸರಾ ಮಾದರಿಯಲ್ಲಿ ರಾಜ್ಯೋತ್ಸವಕ್ಕೆ ಹೆಚ್ಚಿನ ಅನುದಾನ ಕೊಡಬೇಕು.

  • ಮೆರವಣಿಗೆ ವೀಕ್ಷಣೆಗೆ ಬರುವವರಿಗೆ ಊಟದ ವ್ಯವಸ್ಥೆ ಮಾಡಬೇಕು.

  • ಸರ್ಕಾರಿ ಸರದಾರ್ಸ್‌ ಪ್ರೌಢಶಾಲೆ ಮೈದಾನದಲ್ಲಿ ನ.2ರಂದು ದೊಡ್ಡಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು.

  • ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಕನ್ನಡ ಕಡೆಗಣಿಸಿದವರ ವಿರುದ್ಧ ಕ್ರಮವಾಗಬೇಕು.

‘ಕರಾಳ ದಿನಾಚರಣೆಗೆ ಅನುಮತಿ ಇಲ್ಲ’

‘ಮಹಾರಾಷ್ಟ್ರ ಏಕೀಕರಣ ಸಮಿತಿ ಕರಾಳ ದಿನ ಆಚರಿಸಿ ನಾಡವಿರೋಧಿ ನಿಲುವು ತಳೆಯುತ್ತದೆ. ಆರಂಭದಲ್ಲಿ ಇದಕ್ಕೆ ಅನುಮತಿ ಕೊಡುವುದಿಲ್ಲ ಎನ್ನುವ ಜಿಲ್ಲಾಡಳಿತ, ಕೊನೇ ಕ್ಷಣದಲ್ಲಿ ಅನುಮತಿ ಕೊಡುತ್ತದೆ. ಈ ಬಾರಿ ಅದು ಮುಂದುವರಿಯಬಾರದು’ ಎಂದು ಕನ್ನಡ ಹೋರಾಟಗಾರರು ಧ್ವನಿ ಎತ್ತಿದರು.

‘ಈ ಸಲ ಯಾವ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ಕೊಡಲ್ಲ’ ಎಂದು ಡಿ.ಸಿ ಭರವಸೆ ಕೊಟ್ಟರು.

ಅಶೋಕ ಚಂದರಗಿ ಹೆಸರು ಶಿಫಾರಸು

‘ಗಡಿಭಾಗದಲ್ಲಿ ಕನ್ನಡದ ಉಳಿವಿಗಾಗಿ ಅಶೋಕ ಚಂದರಗಿ ನಾಲ್ಕು ದಶಕಗಳಿಂದ ಹೋರಾಡುತ್ತ ಬಂದಿದ್ದಾರೆ. ಆದರೆ, ರಾಜ್ಯೋತ್ಸವ ಪ್ರಶಸ್ತಿ ನೀಡುವ ವಿಚಾರವಾಗಿ ಅವರನ್ನು ಕಡೆಗಣಿಸುತ್ತ ಬಂದಿದೆ. ಈ ಸಲ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಆಯ್ಕೆಗಾಗಿ ರಚಿಸಿದ ಸಮಿತಿಯಲ್ಲಿ ಬೆಳಗಾವಿ ಜಿಲ್ಲೆಯ ಒಬ್ಬರೂ ಇಲ್ಲ’ ಎಂದು ಹೋರಾಟಗಾರ ಮೆಹಬೂಬ್‌ ಮಕಾನದಾರ ದೂರಿದರು.

ಇದಕ್ಕೆ ಧ್ವನಿಗೂಡಿಸಿದ ಉಳಿದ ಹೋರಾಟಗಾರರು, ‘ಚಂದರಗಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ವಿಚಾರವಾಗಿ ಇಲ್ಲಿ ನಿರ್ಣಯ ಅಂಗೀಕರಿಸಬೇಕು’ ಎಂದು ಆಗ್ರಹಿಸಿದರು.

‘ಹೋರಾಟಗಾರರ ಒತ್ತಾಸೆ ಮೇರೆಗೆ, ಅಶೋಕ ಚಂದರಗಿ ಅವರ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗಾಗಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.