ADVERTISEMENT

ಬೆಳಗಾವಿ: ಕೆಎಎಸ್‌ ಪರೀಕ್ಷೆಯ ಒಎಂಆರ್‌ ಶೀಟ್‌ ನೀಡಲು ವಿಳಂಬ– ದಿಢೀರ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 10:43 IST
Last Updated 27 ಆಗಸ್ಟ್ 2024, 10:43 IST
<div class="paragraphs"><p>ಬೆಳಗಾವಿ: ಕೆಎಎಸ್‌ ಪರೀಕ್ಷೆಯ ಒಎಂಆರ್‌ ಶೀಟ್‌ ನೀಡಲು ವಿಳಂಬ– ದಿಢೀರ್‌ ಪ್ರತಿಭಟನೆ</p></div>

ಬೆಳಗಾವಿ: ಕೆಎಎಸ್‌ ಪರೀಕ್ಷೆಯ ಒಎಂಆರ್‌ ಶೀಟ್‌ ನೀಡಲು ವಿಳಂಬ– ದಿಢೀರ್‌ ಪ್ರತಿಭಟನೆ

   

ಬೆಳಗಾವಿ: ಬೆಳಗಾವಿಯ ಅಂಜುಮನ್‌ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್‌ ಪ್ರೊಬೇಷನರ್ಸ್‌ 384 ಹುದ್ದೆಗಳ ಪರೀಕ್ಷೆಯಲ್ಲಿ, ಒಎಂಆರ್‌ ಶೀಟ್‌ ನೀಡಲು 15 ನಿಮಿಷ ವಿಳಂಬವಾಗಿದೆ. ಇದರಿಂದ ರೊಚ್ಚಿಗೆದ್ದ ಪರೀಕ್ಷಾರ್ಥಿಗಳು ದಿಢೀರ್‌ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಪರೀಕ್ಷೆ ಆರಂಭವಾಗಬೇಕಿತ್ತು. ಹತ್ತು ನಿಮಿಷ ತಡವಾದರೂ ಒಎಂಆರ್ ಸೀಟ್‌ ನೀಡಲಿಲ್ಲ. ಆಕ್ರೋಶಗೊಂಡ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಬಂದು ಘೋಷಣೆ ಕೂಗತೊಡಗಿದರು. ಇದರಿಂದ ಪರೀಕ್ಷಾ ಕೇಂದ್ರದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ADVERTISEMENT

‘ಒಎಂಆರ್‌ ಶೀಟ್‌ನ ಬಂಡಲುಗಳು ಬೇರೆಬೇರೆ ಕೊಠಡಿಗಳಿಗೆ ಹೋಗಿದ್ದರಿಂದ ಗೊಂದಲವಾಗಿದೆ’ ಎಂದು ಸಮಜಾಯಿಷಿ ನೀಡಿದರು.

‘ಪ್ರಶ್ನೆ ಪತ್ರಿಕೆ ಸೋರಿಗೆ ಆಗಿರುವ ಶಂಕೆ ಇದೆ’ ಎಂದು ಆಕ್ರೋಶಗೊಂಡ ಅಭ್ಯರ್ಥಿಗಳು ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.

ಈ ಪರೀಕ್ಷಾ ಕೇಂದ್ರ ಜಿಲ್ಲಾಧಿಕಾರಿ ಕಚೇರಿ ಎದುರಿಗೇ ಇರುವುದರಿಂದ ಕೆಲವೇ ನಿಮಿಷಗಳಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಸ್ಥಳಕ್ಕೆ ಧಾವಿಸಿದರು.

‘ಒಎಂಆರ್‌ ಶೀಟ್‌ಗಳು ಅದಲು– ಬದಲಾಗಿದ್ದರಿಂದ ನಾಲ್ಕು ಕೊಠಡಿಗಳಲ್ಲಿ ವಿಳಂಬವಾಗಿ ನೀಡಲಾಗಿದೆ. ಯಾರಿಗೆ ತಡವಾಗಿ ನೀಡಲಾಗಿದೆಯೋ ಅವರಿಗೆ ಹೆಚ್ಚುವರಿ ಸಮಯ ನೀಡಲಾಗುವುದು ಎಂದು ಕೆಪಿಎಸ್‌ಸಿಗೆ ಪತ್ರ ಬರೆಯುತ್ತೇನೆ. ಎಲ್ಲಿಯೂ ಪ್ರಶ್ನೆ ಪತ್ರಿಕೆ ಬಹಿರಂಗವಾಗಿಲ್ಲ. ಹೆಚ್ಚುವರಿ ಸಮಯ ನೀಡುವ ಭರವಸೆ ನೀಡಿದ ನಂತರ ಎಲ್ಲರೂ ಶಾಂತ ರೀತಿಯಿಂದ ಪರೀಕ್ಷೆ ಬರೆಯುತ್ತಿದ್ದಾರೆ. ಮಧ್ಯಾಹ್ನದ ಪರೀಕ್ಷೆಯೂ ಸುಗಮವಾಗಿ ನಡೆಯಲು ಕ್ರಮ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಏನೇ ಆಗಿದ್ದರೂ ನಾನು ಖುದ್ದಾಗಿ ಪರಿಶೀಲನೆ ಮಾಡುತ್ತೇನೆ. ಎಲ್ಲಿಯಾದರೂ ತಪ್ಪು ಕಂಡುಬಂದಿದ್ದರೆ ಕ್ರಮ ವಹಿಸುತ್ತೇನೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.