ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಅಪ್ಪಾಸಾಹೇಬ ಎಂ.ಕುಲಗುಡೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಅವರ ಅಧಿಕಾರವಧಿ ಒಂದು ವರ್ಷ ಇರಲಿದೆ. ಎಂದೂ ಬ್ಯಾಂಕ್ ರಾಜಕಾರಣದತ್ತ ತಲೆಹಾಕದ ಸತೀಶ ಜಾರಕಿಹೊಳಿ ಅವರು, ಮೊದಲಬಾರಿಗೆ ಅಖಾಡಕ್ಕಿಳಿದರು.
ಸುಮಾರು 40 ಲಕ್ಷ ರೈತರು ಈ ಬ್ಯಾಂಕ್ ಅವಲಂಬಿಸಿದ್ದಾರೆ. ₹5797.29 ಕೋಟಿ ಠೇವಣಿ, ₹7,894.96 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹5,230.74 ಕೋಟಿ ಸಾಲ ನೀಡಿದ್ದು, ರಾಜ್ಯದ ಅತಿ ದೊಡ್ಡ ಸಹಕಾರಿ ಬ್ಯಾಂಕ್ ಇದಾಗಿದೆ.
ಬ್ಯಾಂಕ್‌ಗೆ ಅಧ್ಯಕ್ಷರಾಗಿದ್ದ ರಮೇಶ ಕತ್ತಿ ಅಕ್ಟೋಬರ್ 5ರಂದು ದಿಢೀರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಬುಧವಾರ ಮತದಾನ ನಿಗದಿಯಾಗಿತ್ತು. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಪ್ರಬಲ ಆಕಾಂಕ್ಷಿಗಳಾಗಿದ್ದರು.
ಲೋಕಸಭೆ ಚುನಾವಣೆ ವೇಳೆ ತಮ್ಮ ಸೋಲಿಗೆ ಕಾರಣರಾದರು ಎಂಬ ಕಾರಣಕ್ಕೆ ಅಣ್ಣಾಸಾಹೇಬ ಜೊಲ್ಲೆ ಅವರು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ರಮೇಶ ಕತ್ತಿ ವಿರುದ್ಧ ನಿಂತರು. ನಿರ್ದೇಶಕರು ತಂಡವಾಗಿ ಒಡೆದಾಗ ರಮೇಶ ಕತ್ತಿ ರಾಜೀನಾಮೆ ನೀಡಿದರು. ಕ್ರಮೇಣ ಒಟ್ಟಾರೆ ಪರಿಸ್ಥಿತಿ ಎಲ್ಲವೂ ಬದಲಾಯಿತು.
ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ; ಯಾರೊಬ್ಬರೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಲ್ಲ, ಮತದಾರರೂ ಅಲ್ಲ. ಬ್ಯಾಂಕಿನಿಂದ ಹೊರಗಿದ್ದುಕೊಂಡೇ ತಮ್ಮ ಆಪ್ತರಿಗೆ ಅಧಿಕಾರ ಕೊಡಿಸಿದರು.
ಅಧ್ಯಕ್ಷರಾಗಿರುವ ಅಪ್ಪಾಸಾಹೇಬ ರಾಯಬಾಗದವರು. ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಅವರನ್ನು ಸಂಸದರಾಗಿ ಆಯ್ಕೆ ಮಾಡುವಲ್ಲಿ ಶ್ರಮಿಸಿದ್ದರು. ಪರಿಶಿಷ್ಟ ಜಾತಿಗೆ ಮೀಸಲಾದ ರಾಯಬಾಗ ಹಾಗೂ ಕುಡಚಿ ವಿಧಾನಸಭಾ ಕ್ಷೇತ್ರಗಳಲ್ಲಿ ಸತೀಶ ಅವರ ವಿರೋಧಿಗಳೂ ಹೆಚ್ಚಾಗಿದ್ದಾರೆ. ಅಪ್ಪಾಸಾಹೇಬ ಆಯ್ಕೆಯ ಮೂಲಕ ಸತೀಶ ಆ ಭಾಗದ ಮೇಲೆ ಹಿಡಿತ ಸಾಧಿಸಿದರು.
ಬ್ಯಾಂಕ್‌ಗೆ 16 ಚುನಾಯಿತ ನಿರ್ದೇಶಕರ ಪೈಕಿ ಮೂವರು ಮಾತ್ರ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. 13 ನಿರ್ದೇಶಕರು ಬಿಜೆಪಿಯ ಪ್ರಬಲ ನಾಯಕರೂ ಆಗಿದ್ದಾರೆ. ಆದರೂ ಅಧಿಕಾರ ಕಾಂಗ್ರೆಸ್ ಪಾಲಾಯಿತು.
ಬ್ಯಾಂಕ್‌ನ ಹಿತದೃಷ್ಟಿಯಿಂದ ಎಲ್ಲರೂ ಪರಾಮರ್ಶೆ ಮಾಡಿ ಅವಿರೋಧ ಆಯ್ಕೆ ಮಾಡಿದ್ದೇವೆ. ಇಲ್ಲಿ ಯಾರದ್ದೂ ಮೇಲುಗೈ ಕೆಳಗೈ ಎಂದಿಲ್ಲ. ರೆಕ್ಕೆಪುಕ್ಕ ಕಟ್ಟಿ ಕಾಗೆ ಹಾರಿಸಬೇಡಿಲಕ್ಷ್ಮಣ ಸವದಿ ನಿರ್ದೇಶಕ ಬಿಡಿಸಿಸಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಕಾಂಗ್ರೆಸ್ ನಾಯಕರನ್ನು ಬಿಡಿಸಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅನುದಾನ ತರಲು ಇದು ಸಹಕಾರಿ ಆಗಲಿದೆಬಾಲಚಂದ್ರ ಜಾರಕಿಹೊಳಿ ಶಾಸಕ ಅರಭಾವಿ
ಭವಿಷ್ಯದ ಹಿತದೃಷ್ಟಿಯಿಂದ ಈ ಬಾರಿ ಹೊಸಬರಿಗೆ ಅವಕಾಶ ನೀಡಿದ್ದೇವೆ. ಅಳೆದು ತೂಗಿ ಸರ್ವಾನುಮತದಿಂದ ಎಲ್ಲ ನಾಯಕರೂ ಸಮ್ಮತಿ ಸೂಚಿಸಿದ್ದರಿಂದ ಅಪ್ಪಾಸಾಹೇಬ ಅಧ್ಯಕ್ಷರಾಗಿದ್ದಾರೆಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.