ಚನ್ನಮ್ಮನ ಕಿತ್ತೂರು: ‘ಕಿತ್ತೂರು ಕೋಟೆಯನ್ನು ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಯೋಜನೆ ರೂಪಿಸಲಾಗಿದೆ. ₹30 ಕೋಟಿ ಅನುದಾನದಲ್ಲಿ ಹೊಸ ತಂತ್ರಜ್ಞಾನ ಬಳಕೆಯ ಮೂಲಕ ವಿದ್ಯುನ್ಮಾನ ಮಾದರಿಯ ಉದ್ಯಾನ (ಥೀಮ್ ಪಾರ್ಕ್) ನಿರ್ಮಾಣ ಮಾಡಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಶ್ರಯದಲ್ಲಿ ಕಿತ್ತೂರು ಕೋಟೆ ಆವರಣದಲ್ಲಿ ಮಂಗಳವಾರ, ಚನ್ನಮ್ಮನ ಕಿತ್ತೂರಿನ ಕೋಟೆ, ಅರಮನೆ ಸಂರಕ್ಷಣಾ ಕಾಮಗಾರಿಗಳ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕೋಟೆಯ ಮಹಾದ್ವಾರ, ಗೋಡೆಗಳು ಸೇರಿಂತೆ ವಿವಿಧ ಅವಶೇಷಗಳನ್ನು ಸಂರಕ್ಷಿಸಲು ₹12.11 ಕೋಟಿ, ಇತರ ಕಾಮಗಾರಿಗಳಿಗೆ ₹2.4 ಕೋಟಿ ಅನುದಾನ ಬಳಕೆಯಾಗಲಿದೆ. ಕಳೆದ ಒಂದು ವರ್ಷದಿಂದ ಈ ಭಾಗದ ಶಾಸಕರ ಬೇಡಿಕೆಯಿತ್ತು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಟೆ ಅಭಿವೃದ್ಧಿಗೆ ಕೂಡಲೇ ಅನುದಾನ ಮಂಜೂರು ಮಾಡಿದರು’ ಎಂದರು.
‘ಕೋಟೆಯ ಕೆಲವು ಭಾಗ ಶೀಥಿಲಗೊಂಡಿದ್ದು, ದುರಸ್ತಿ ಅವಶ್ಯಕತೆ ಇದೆ. ಕೋಟೆಯ ಕುಸಿದ ಗೋಡೆಗಳನ್ನು ನವೀಕರಿಸಿ ಕೋಟೆ ಅವಶೇಷಗಳ ಸಂರಕ್ಷಣೆಯ ಮೂಲಕ ಇತಿಹಾಸ ಉಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದೆ. ಮೂಲ ಪದ್ಧತಿ ಅನ್ವಯ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು’ ಎಂದರು.
ಅವಶೇಷಗಳ ಉಳಿವಿಗೆ ಆದ್ಯತೆ:
‘ಕಿತ್ತೂರು ವಿಜಯೋತ್ಸವದ 200ನೇ ವರ್ಷದ ಸಂಭ್ರಮದಲ್ಲಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಉದ್ದೇಶವಾಗಿತ್ತು. ಆದರೆ ಇನ್ನಷ್ಟು ಭದ್ರವಾದ ಕೆಲಸವಾಗಬೇಕು ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಹೆಚ್ಚಿನ ಸಮಯ ತೆಗೆದುಕೊಳ್ಳಲಾಗುತ್ತಿದೆ’ ಎಂದೂ ಅವರು ವಿವರಿಸಿದರು.
‘ಕೋಟೆ ಮರು ನಿರ್ಮಾಣಕ್ಕೆ ಈಗಾಗಲೇ ಸಾಕಷ್ಟು ಬಾರಿ ಯೋಚಿಸಲಾಗಿದೆ. ಆದರೆ ಅರಮನೆಯ ಮೂಲ ವಿನ್ಯಾಸದ ಮಾಹಿತಿಯಿಲ್ಲದ ಕಾರಣ ಮರು ನಿರ್ಮಾಣ ವಿಳಂಬವಾಗುತ್ತಿದೆ. ಸದ್ಯಕ್ಕೆ ಉಳಿದ ಅವಶೇಷಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ತ್ವರಿತವಾಗಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ₹3 ಕೋಟಿ ವೆಚ್ಚದ ರಾಣಿ ಚನ್ನಮ್ಮನ ಭವನ ನಿರ್ಮಾಣದ ಹಂತದಲ್ಲಿದೆ. ಒಟ್ಟು ₹18 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದೂ ಮಾಹಿತಿ ನೀಡಿದರು.
‘ಇತಿಹಾಸದ ಅರಿಯದೆ ಭವಿಷ್ಯದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಬ್ರಿಟಿಷರಿಗೆ ನಡುಕ ಹುಟ್ಟಿಸಿ ವೀರತನ ತೋರಿದ ಕಿತ್ತೂರು ನಾಡಿನ ಹೆಮ್ಮೆ ನಮ್ಮದು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ಇಂದು ನಾವೆಲ್ಲರೂ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಆದ್ದರಿಂದ ಇತಿಹಾದ ಉಳಿವಿಗೆ ಇಂತಹ ಸಂರಕ್ಷಣಾ ಕಾರ್ಯ ನಿರ್ವಹಿಸಬೇಕಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ‘ಕಿತ್ತೂರಿನ ಅವಶೇಷಗಳನ್ನು ಸಂರಕ್ಷಣೆ ಮಾಡುವ ಮೂಲಕ ಯುವ ಪೀಳಿಗೆಗೆ ಇತಿಹಾಸ ಪರಿಚಯಸಲಾಗುವುದು. ಮುಂದಿನ ದಿನಗಳಲ್ಲಿ ಪ್ರಾಧಿಕಾರದಿಂದ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದರು.
ಕಿತ್ತೂರು ಸಂಸ್ಥಾನ ಕಲ್ಮಠದ ರಾಜಗುರು ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಪ್ರಭಾವತಿ ಫಕೀರಪೂರ, ತಹಶೀಲ್ದಾರ್ ರವೀಂದ್ರ ಹಾದಿಮನಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.