ಬೆಳಗಾವಿ: ಇಡೀ ಕರ್ನಾಟಕದಲ್ಲೇ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸುವುದೇ ಬೆಳಗಾವಿ ನಗರದಲ್ಲಿ. ಇಲ್ಲಿನ ಮೆರವಣಿಗೆಯಲ್ಲಿ ಐದು ಲಕ್ಷಕ್ಕೂ ಅಧಿಕ ಜನ ಸೇರಿ ಸಂಭ್ರಮಿಸುತ್ತಾರೆ. ಆದರೆ, ರಾಜ್ಯೋತ್ಸವ ಆಚರಣೆಗಾಗಿ ಸರ್ಕಾರ ವಿಶೇಷ ಅನುದಾನ ನೀಡದಿರುವುದು ಗಡಿ ಕನ್ನಡಿಗರ ಆಕ್ಷೇಪಕ್ಕೆ ಕಾರಣವಾಗಿದೆ.
ಕರ್ನಾಟಕ ರಾಜ್ಯೋತ್ಸವಕ್ಕೆ ವಿಶೇಷ ಅನುದಾನ ನೀಡಬೇಕೆಂಬ ಒತ್ತಾಯ ಹಲವು ವರ್ಷಗಳದ್ದು. ಈ ಸಂಬಂಧ ಜಿಲ್ಲಾಡಳಿತ ಪ್ರತಿವರ್ಷವೂ ಪ್ರಸ್ತಾವ ಸಲ್ಲಿಸುತ್ತದೆ. ಈ ಬಾರಿ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಕನ್ನಡ ಹೋರಾಟಗಾರರು, ಸಾಹಿತಿಗಳು, ‘ಮೈಸೂರು ದಸರಾ ಮಾದರಿಯಲ್ಲಿ ಬೆಳಗಾವಿಯಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವಕ್ಕೂ ಸರ್ಕಾರ ಅನುದಾನ ಬಿಡುಗಡೆಗೊಳಿಸಬೇಕು’ ಎಂದು ಒತ್ತಾಯಿಸಿದ್ದರು.
ಜನರ ಒತ್ತಾಯದ ಮೇರೆಗೆ ಜಿಲ್ಲಾಡಳಿತವು ₹1 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿತ್ತು. ಆದರೆ, ಈ ಬಾರಿಯೂ ನಿರಾಸೆಯಾಗಿದೆ.
ಜನಪ್ರತಿನಿಧಿಗಳ ಜಾಣಮೌನ: ‘ಬೆಳಗಾವಿ ಮಹಾನಗರದಲ್ಲಿ ಕನ್ನಡಿಗರ ಜತೆ, ಮರಾಠಿ ಭಾಷಿಕರೂ ಇದ್ದಾರೆ. ಜನಪ್ರತಿನಿಧಿಗಳು ಮರಾಠಿಗರ ಮತಗಳ ಮೇಲೂ ಕಣ್ಣಿಟ್ಟಿದ್ದಾರೆ. ರಾಜ್ಯೋತ್ಸವಕ್ಕೆ ಸರ್ಕಾರದಿಂದ ಅನುದಾನ ತಂದರೆ, ಆ ಮತ ಕಳೆದುಕೊಳ್ಳಬಹುದು ಎನ್ನುವ ಆತಂಕದಿಂದ ಅವರು ಗಟ್ಟಿಯಾಗಿ ಧ್ವನಿ ಎತ್ತದೆ ಜಾಣಮೌನ ವಹಿಸುತ್ತಿದ್ದಾರೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಲೂ ರಾಜ್ಯೋತ್ಸವಕ್ಕೆ ಅನುದಾನ ಬರುತ್ತಿಲ್ಲ’ ಎಂಬುದು ಕನ್ನಡ ಹೋರಾಟಗಾರರ ತಕರಾರು.
ಮೈಸೂರು ದಸರಾಗೆ ಭರಪೂರ ಅನುದಾನ ಕೊಡುತ್ತಿರುವ ಸರ್ಕಾರ ಬೆಳಗಾವಿಯಲ್ಲಿ ನಡೆಯುವ ರಾಜ್ಯೋತ್ಸವ ಕಡೆಗಣಿಸುತ್ತಿರುವುದು ಸರಿಯಲ್ಲ. ಇದರಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯೂ ಕಾಣುತ್ತಿದೆಅಶೋಕ ಚಂದರಗಿ ಅಧ್ಯಕ್ಷ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಬೆಳಗಾವಿ
‘ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೆವು. ಈವರೆಗೆ ಅನುದಾನ ಬಂದಿಲ್ಲ. ಆದರೆ ಜನಪ್ರತಿನಿಧಿಗಳು ಸಂಘ–ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ ಸಂಭ್ರಮಕ್ಕೆ ಕುಂದು ಬಾರದಂತೆ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸುತ್ತಿದ್ದೇವೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.