ADVERTISEMENT

ಬೆಮುಲ್‌: ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ; ಇಲ್ಲೂ ನಡೆದೀತೇ ಜಾರಕಿಹೊಳಿ ಕುಟುಂಬದ ಆಟ?

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 14:36 IST
Last Updated 28 ಏಪ್ರಿಲ್ 2019, 14:36 IST

‌ಬೆಳಗಾವಿ:ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಬೆಮುಲ್) ಎಲ್ಲ 14 ನಿರ್ದೇಶಕ ಸ್ಥಾನಗಳಿಗೆ ಆಯ್ಕೆ ಪ‍್ರಕ್ರಿಯೆ ಪೂರ್ಣಗೊಂಡಿದ್ದು, ಅಧ್ಯಕ್ಷ ಗಾದಿಗಾಗಿ ಪೈಪೋಟಿ ಆರಂಭವಾಗಿದೆ. ಪ್ರಭಾವಿ ಜಾರಕಿಹೊಳಿ ಕುಟುಂಬದವರ ಆಟ, ಈ ಸಹಕಾರಿ ಕ್ಷೇತ್ರದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲೂ ನಡೆಯುವ ಸಾಧ್ಯತೆ ಕೂಡ ಕಂಡುಬಂದಿದೆ.

ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ತಮ್ಮ ಪುತ್ರ ಅಮರನಾಥ ಅವರನ್ನು ನಿರ್ದೇಶಕರನ್ನಾಗಿ ಸದ್ದಿಲ್ಲದೇ ಅವಿರೋಧ ಆಯ್ಕೆ ಮಾಡಿಸುವಲ್ಲಿ (ಗೋಕಾಕ ಕ್ಷೇತ್ರದಿಂದ) ಯಶಸ್ವಿಯಾಗಿದ್ದಾರೆ. ಇವರೊಂದಿಗೆ ಹಾಲಿ ಅಧ್ಯಕ್ಷ, ವಿಧಾನಪರಿಷತ್ ಸದಸ್ಯರೂ ಆಗಿರುವ ವಿವೇಕರಾವ ಪಾಟೀಲ (ರಾಯಬಾಗ) ಮಲ್ಲಪ್ಪ ಪಾಟೀಲ (ಮೂಡಲಗಿ), ಸೋಮಲಿಂಗಪ್ಪ ಮುಗಳಿ (ಸವದತ್ತಿ), ಬಾಬುರಾವ ವಾಗ್ಮೋಡಿ (ಕಾಗವಾಡ), ರಾಯಪ್ಪ ಡೊಂಗ (ಹುಕ್ಕೇರಿ) ಹಾಗೂ ಸವಿತಾ ಖಾನಪ್ಪಗೋಳ (ಬೈಲಹೊಂಗಲ–ಮಹಿಳಾ ಪ್ರಾತಿನಿಧ್ಯ) ಅವಿರೋಧ ಆಯ್ಕೆಯಾಗಿದ್ದಾರೆ.

ಉಳಿದ 7 ಸ್ಥಾನಗಳಿಗಾಗಿ ಭಾನುವಾರ ನಡೆದ ಚುನಾವಣೆ ತುರುಸಿನ ಸ್ಪರ್ಧೆಯಿಂದ ಕೂಡಿತ್ತು. ಉದಯಸಿಂಹ ಶಿಂಧೆ (ರಾಮದುರ್ಗ), ಕಲ್ಲಪ್ಪ ಗಿರೆನ್ನವರ (ಬೆಳಗಾವಿ), ಬಾಬು ಕಟ್ಟಿ (ಬೈಲಹೊಂಗಲ), ಬಸವರಾಜ ಪರವಣ್ಣವರ (ಕಿತ್ತೂರು), ಪ್ರಕಾಶ ಅಂಬೋಜಿ (ಖಾನಾಪುರ), ಅಪ್ಪಾಸಾಹೇಬ ಅವತಾಡೆ (ಅಥಣಿ) ಹಾಗೂ ವಿರೂಪಾಕ್ಷಿ ಈಟಿ (ಚಿಕ್ಕೋಡಿ) ಆಯ್ಕೆಯಾಗಿದ್ದಾರೆ.‌

ADVERTISEMENT

ಈ ಪೈಕಿ ಬೆಳಗಾವಿ ನಿರ್ದೇಶಕರ ಚುನಾವಣೆ ತೀವ್ರ ಪೈಪೋಟಿಯಿಂದ ಕೂಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಬೆಂಬಲಿತ ಎನ್ನಲಾದ ಶಂಕರಗೌಡ ಪಾಟೀಲ ಸೋತಿದ್ದಾರೆ. ಸುರೇಶ ಪಾಟೀಲ ಮತ್ತು ಕಲ್ಲಪ್ಪ ಗಿರೆನ್ನವರ ಕೊನೆ ಗಳಿಗೆಯಲ್ಲಿ ಒಂದಾಗಿದ್ದೇ ಶಂಕರಗೌಡರ ಸೋಲಿಗೆ ಕಾರಣವಾಗಿದೆ ಎನ್ನಲಾಗಿದೆ. ಸುರೇಶ ಪಾಟೀಲ ಅವರು ಕಲ್ಲಪ್ಪ ಅವರನ್ನು ಬೆಂಬಲಿಸಿದರು ಎಂದು ತಿಳಿದುಬಂದಿದೆ. ಅರಭಾವಿ ಶಾಸಕ, ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಮತ್ತು ವಿವೇಕರಾವ ಪಾಟೀಲ ತಂತ್ರದ ಫಲವಾಗಿಯೇ ಸತೀಶ ಜಾರಕಿಹೊಳಿ ಕಡೆಯ ಅಭ್ಯರ್ಥಿ ಸೋಲು ಕಾಣಬೇಕಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

14 ನಿರ್ದೇಶಕರ ಪೈಕಿ 10 ಮಂದಿ ಬಾಲಚಂದ್ರ ಜೊತೆಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಲಿ ಆಡಳಿತ ಮಂಡಳಿಯ ಅಧಿಕಾರದ ಅವಧಿ ಮೇ 25ರವರೆಗೆ ಇದೆ. ಈ ನಡುವೆ, ಯಾವಾಗ ಬೇಕಾದರೂ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಬಹುದು. ಮೇ 10ರಂದು ಚುನಾವಣಾ ಪ್ರಕ್ರಿಯೆ ಜರುಗಬಹುದು ಎನ್ನಲಾಗುತ್ತಿದೆ.

ವಿವೇಕರಾವ್‌ ಅವರು ರಮೇಶ ಜಾರಕಿಹೊಳಿ ಬೆಂಬಲಿಗ. ಅವರೇ ಮುಂದುವರಿಯಲು ರಮೇಶ ಸಹಕಾರ ನೀಡುತ್ತಾರೋ ಅಥವಾ ಸಹೋದರ ಬಾಲಚಂದ್ರ ಸಹಾಯ ಪಡೆದು ಪುತ್ರನಿಗೆ ಅನಾಯಾಸವಾಗಿ ‘ಪಟ್ಟ’ ಕಟ್ಟಲು ತಂತ್ರಗಳನ್ನು ರೂಪಿಸುತ್ತಾರೆಯೋ ಎನ್ನುವುದು ಕುತೂಹಲ ಮೂಡಿಸಿದೆ. ಒಕ್ಕೂಟದಲ್ಲಿನ ಮುಂದಿನ ಬೆಳವಣಿಗೆಗಳು ಜಿಲ್ಲಾ ರಾಜಕೀಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.