ADVERTISEMENT

ಭಗವದ್ಗೀತೆಯಿಂದ ಭವಿಷ್ಯ ಉಜ್ವಲ: ಲಕ್ಷ್ಮಿ ಹೆಬ್ಬಾಳಕರ

ರಾಜ್ಯಮಟ್ಟದ ಭವದ್ಗೀತಾ ಅಭಿಯಾನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 6:45 IST
Last Updated 22 ನವೆಂಬರ್ 2023, 6:45 IST
ಬೆಳಗಾವಿಯಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು ಗೀತಾ ಪಾಠ ಭೋದಿಸಿದರು. ಅರವಿಂದರಾವ್ ಜಿ. ದೇಶಪಾಂಡೆ, ಸಚಿವೆ ಲಕ್ಷ್ಮಿ ಹೆಬ್ಬಾಳಕರ, ನಿಜಲಿಂಗೇಶ್ವರ ಸ್ವಾಮೀಜಿ, ಚಿತ್ಪ್ರಕಾಶಾನಂದ ಸ್ವಾಮೀಜಿ, ಗೋಪಾಲ ಜಿನಗೌಡ, ವಿಘ್ನೇಶ್ವರ ಹೆಗಡೆ ಇದ್ದಾರೆ
ಬೆಳಗಾವಿಯಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು ಗೀತಾ ಪಾಠ ಭೋದಿಸಿದರು. ಅರವಿಂದರಾವ್ ಜಿ. ದೇಶಪಾಂಡೆ, ಸಚಿವೆ ಲಕ್ಷ್ಮಿ ಹೆಬ್ಬಾಳಕರ, ನಿಜಲಿಂಗೇಶ್ವರ ಸ್ವಾಮೀಜಿ, ಚಿತ್ಪ್ರಕಾಶಾನಂದ ಸ್ವಾಮೀಜಿ, ಗೋಪಾಲ ಜಿನಗೌಡ, ವಿಘ್ನೇಶ್ವರ ಹೆಗಡೆ ಇದ್ದಾರೆ   

ಬೆಳಗಾವಿ: ‘ದೇಶದ ಪ್ರತಿಯೊಂದು ಮಗುವಿಗೂ ಭಗವದ್ಗೀತೆಯ ಸಾರ ತಲುಪಿಸಬೇಕು. ಇದರಿಂದ ಅವರ ವ್ಯಕ್ತಿತ್ವ ವಿಕಸನವಾಗಿ, ದೇಶಕ್ಕೆ ಉಜ್ವಲ ಭವಿಷ್ಯ ಸಿಗಲಿದೆ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ನಗರದ ಸಂತ ಮೀರಾ ಶಾಲೆಯ ಮಾಧವ ಸಭಾಗೃಹದಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ಭವದ್ಗೀತಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.

‘ಸೋಂದಾ ಸ್ವರ್ಣವಲ್ಲೀ ಪೀಠಾಧಿಪತಿ ಗಂಗಾಧರೇಂದ್ರ ಸರಸ್ವತೀ ಶ್ರೀ ‘ಹಸಿರು ಸ್ವಾಮೀಜಿ’ ಎಂದೇ ಖ್ಯಾತರು. ಅವರು 17 ವರ್ಷಗಳಿಂದ ನಡೆಸುತ್ತಿರುವ ಈ ಅಭಿಯಾನವು ರಾಷ್ಟ್ರೀಯ ಜಾಗೃತಿ ಅಭಿಯಾನವೇ ಆಗಿದೆ. ದೇಶದ ಸಂಸ್ಕೃತಿ ಎತ್ತಿ ಹಿಡಿಯುವ ಈ ಅಭಿಯಾನ ಬೆಳಗಾವಿಯಿಂದ ಆರಂಭಗೊಳ್ಳುತ್ತಿರುವುದು ಸಂತಸ ತಂದಿದೆ’ ಎಂದು ತಿಳಿಸಿದರು.

ADVERTISEMENT

‘ಭಾರತದ ಆಚೆಗೆ ಎರಡೇ ಧರ್ಮಗಳು ಪ್ರಧಾನವಾಗಿವೆ; ಕ್ರೈಸ್ತ ಮತ್ತು ಮುಸ್ಲಿಂ. ಆದರೂ ನಿರಂತರ ಹೋರಾಟ ನಡೆದೇ ಇದೆ. ನಮ್ಮ ದೇಶದಲ್ಲಿ ಹಲವು ಧರ್ಮಗಳು, ಅಸಂಖ್ಯಾತ ಜಾತಿ–ಭಾಷೆಗಳಿವೆ. ಏಕತೆ ಸಾಧಿಸಿದ ಹಿರಿಮೆ ನಮ್ಮದು. ಭಗವದ್ಗೀತೆ, ರಾಮಾಯಣ, ಮಹಾಭಾರತದಂಥ ಗ್ರಂಥಗಳ ಆದರ್ಶಗಳೇ ಈ ಭಾವ ಬೆಸೆದಿವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜನ ಕಲ್ಯಾಣ ಟ್ರಸ್ಟ್‌ ಅಧ್ಯಕ್ಷ ಅರವಿಂದರಾವ್ ಜಿ. ದೇಶಪಾಂಡೆ ಮಾತನಾಡಿ, ‘ಜಗತ್ತಿನ ಹಲವಾರು ದೇಶಗಳಲ್ಲಿ ಭಗವದ್ಗೀತೆಯನ್ನು ಶಿಕ್ಷಣದಲ್ಲಿ ಅಳವಡಿಸಲಾಗುತ್ತಿದೆ. ಮುಂದೊಂದು ದಿನ ಭಗವದ್ಗೀತೆ ಕಲಿಸಲು ನಮಗೆ ವಿದೇಶದಿಂದ ಶಿಕ್ಷಕರು ಬರುವ ದುರಂತ ಎದುರಾಗಬಾರದು. ನಮ್ಮಲ್ಲೂ ಶಿಕ್ಷಣದಲ್ಲಿ ಭಗವದ್ಗೀತೆಯನ್ನು ಅಳವಡಿಸಲು ಕ್ರಮವಹಿಸಬೇಕು’ ಎಂದು ತಿಳಿಸಿದರು.

ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ‘ಚಿತ್‌ ಸ್ವಾಸ್ಥ್ಯದ ಮೂಲಕವೇ ಜಗತ್ತಿನ ಜಟಿಲ ಸಮಸ್ಯೆಗಳ ನಿವಾರಣೆ ಸಾಧ್ಯ. ಆದರೆ, ಚಿತ್‌ ಸ್ವಾಸ್ಥ್ಯ ಭಗವದ್ಗೀತೆಯ ಮೂಲಕ  ಮಾತ್ರ ಸಾಧ್ಯ’ ಎಂದು ಹೇಳಿದರು.

‘ಸ್ವಚ್ಛವಾದ ಮನಸ್ಸಿನ ತಳಹದಿ ಮೇಲೆ ವ್ಯಕ್ತಿತ್ವ ವಿಕಸನ, ನೈತಿಕ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯ ಎಂಬ ನಾಲ್ಕು ಕಂಬಗಳನ್ನು ನೆಟ್ಟು ಭಾರತವೆಂಬ ಮಹಲು ನಿರ್ಮಿಸಬೇಕಿದೆ. ಭಗವದ್ಗೀತೆಯ ಅಭಿಯಾನವನ್ನು ಇದೇ ಉದ್ದೇಶಕ್ಕೆ ಆರಂಭಿಸಲಾಗಿದೆ’ ಎಂದರು.

ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ, ಆರ್ಷ ವಿದ್ಯಾ ಕೇಂದ್ರದ ಚಿತ್ಪ್ರಕಾಶಾನಂದ ಸ್ವಾಮೀಜಿ ಮಾತನಾಡಿದರು.

ಇದೇ ವೇಳೆ ಮಕ್ಕಳು ಭಗವದ್ಗೀತೆಯ 10ನೇ ಅಧ್ಯಾಯ ಪಠಣ ಮಾಡಿದರು. ಸೋಂದಾ ಸ್ವರ್ಣವಲ್ಲಿ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಎನ್. ಹೆಗಡೆ, ಶಿಕ್ಷಣತಜ್ಞ ಗೋಪಾಲ ಜಿನಗೌಡ ಇದ್ದರು. ಗೀತಾ ಅಭಿಯಾನದ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ ಸ್ವಾಗತಿಸಿದರು. ಸಂಚಾಲಕ ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ಕಾರ್ಯದರ್ಶಿ ಎಂ.ಕೆ.ಹೆಗಡೆ ಇದ್ದರು.

Quote - 2007ರಲ್ಲಿ ಭಗವದ್ಗೀತಾ ಅಭಿಯಾನ ಪ್ರಾರಂಭಗೊಂಡಿದ್ದು ಪ್ರತಿ ವರ್ಷ ಬೇರೆ ಬೇರೆ ಜಿಲ್ಲೆಗಳನ್ನು ಕೇಂದ್ರವಾಗಿರಿಸಿಕೊಂಡು ರಾಜ್ಯದಾದ್ಯಂತ ನಡೆಯುತ್ತ ಬರುತ್ತಿದೆ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವರ್ಣವಲ್ಲೀ ಪೀಠಾಧಿಪತಿ

Quote - ಭಗವದ್ಗೀತೆ ಓದಿದರೆ ಕೃಷ್ಣನ ವ್ಯಕ್ತಿತ್ವ ಅರ್ಥವಾಗುತ್ತದೆ. ಈ ದೇಶಕ್ಕೆ ಈಗ ಕೃಷ್ಣನ ವ್ಯಕ್ತಿತ್ವ ಹೊಂದಿದ ಮಕ್ಕಳು ಬೇಕಾಗಿದ್ದಾರೆ. ಈ ದೃಷ್ಟಿಯಲ್ಲಿ ಗೀತಾ ಅಭಿಯಾನ ಸಾರ್ಥಕ ಕೆಲಸ ನಿಜಲಿಂಗೇಶ್ವರ ಸ್ವಾಮೀಜಿ ಪೀಠಾಧಪತಿ ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠ

Quote - ದೇವರು ಯಾರನ್ನೂ ಮೇಲು– ಕೀಳು ಎಂದು ಮಾಡಿಲ್ಲ. ಯಾವ ಧರ್ಮಗ್ರಂಥವೂ ಇದನ್ನು ಹೇಳುವುದಿಲ್ಲ ಚಿತ್ಪ್ರಕಾಶಾನಂದ ಸ್ವಾಮೀಜಿ ಆರ್ಷ ವಿದ್ಯಾ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.