ಬೆಳಗಾವಿ: ಲೋಕೋಪಯೋಗಿ ಇಲಾಖೆಯಲ್ಲಿ ಮಾಡಿದ ಕಾಮಗಾರಿಗಳ ಬಿಲ್ ಬಾಕಿ ಉಳಿಸಿಕೊಂಡ ಕಾರಣಕ್ಕೆ, ಗುತ್ತಿಗೆದಾರ ಒಬ್ಬರು ಇಲ್ಲಿನ ಪಿಡಬ್ಲ್ಯುಡಿ (P W D) ಕಚೇರಿ ಆವರಣದಲ್ಲಿ ಬುಧವಾರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು.
ನಾಗೇಶ್ ಭಾಂಗಿ ಆತ್ಮಹತ್ಯೆಗೆ ಯತ್ನಿಸಿದವರು. ಇಲ್ಲಿನ ಕೋಟೆ ಆವರಣದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿಗೆ ಬಂದ ನಾಗೇಶ್, ಕಾರ್ಯಪಾಲಕ ಎಂಜಿನಿಯರ್ ಎಸ್.ಎಸ್. ಸೊಬರದ ಎದುರು ವಿಷ ಕುಡಿದರು. ಸುತ್ತ ಇದ್ದ ಕೆಲವರು ಅವರ ಕೈಯಿಂದ ವಿಷದ ಬಾಟಲಿ ಕಿತ್ತುಕೊಂಡು, ಅಸ್ಪತ್ರೆಗೆ ಸಾಗಿಸಿದರು.
‘ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದಿಂದ ಬೈಲಹೊಂಗಲ ತಾಲ್ಲೂಕಿನ ತಿಗಡಿಯವರೆಗೆ ₹6.50 ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾಮಗಾರಿ ಮಾಡಿಸಿದ್ದಾರೆ. ವರ್ಷ ಕಳೆದರೂ ಇದರ ಬಿಲ್ ನೀಡಿಲ್ಲ. ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ರಮೇಶ ಹೆಗಡೆ ಹಾಗೂ ಬಸವರಾಜ ಹಲಗಿ ಬಿಲ್ ಕೊಡದೇ ಕಿರುಕುಳ ನೀಡುತ್ತಿದ್ದಾರೆ’ ಎಂದು ನಾಗೇಶ್ ಆರೋಪಿಸಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಮಾರ್ಕೆಟ್ ಠಾಣೆ ಎಸಿಪಿ ನಾರಾಯಣ ಭರಮನಿ, ‘ನಾಗೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಗೇಶ್ ವಿರುದ್ಧ ಆತ್ಮಹತ್ಯ ಯತ್ನ ಪ್ರಕರಣ ದಾಖಲಿಸಲಾಗುವುದು. ಅವರು ದೂರು ನೀಡಿದರೆ ಇಲಾಖೆ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು’ ಎಂದರು.
ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ತವರಿನಲ್ಲೇ ಈ ಘಟನೆ ನಡೆದಿದ್ದು, ಚರ್ಚೆಗೆ ಗ್ರಾಸವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.